ಬೆಂಗಳೂರು: ದುಬೈನಿಂದ ವಿಮಾನದ ಮೂಲಕ ಭಾರತಕ್ಕ ಚಿನ್ನ ಕಳ್ಳಸಾಗಣೆ ಮಾಡುವ ನೂತನ ಕೇಂದ್ರವಾಗಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್) ಬಳಕೆಯಾಗುತ್ತಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
‘ಒಮ್ಮೆಗೇ 10–15 ಕೆ.ಜಿ.ಯಷ್ಟು ಚಿನ್ನವನ್ನು ಮುಂಬೈ ಮತ್ತು ಚೆನ್ನೈ ವಿಮಾನ ನಿಲ್ದಾಣಗಳ ಮೂಲಕ ಮಾತ್ರ ನಡೆಸಲಾಗುತ್ತಿತ್ತು. ಅದರಲ್ಲಿ ಭಾಗಿಯಾಗಿದ್ದ ವಿಮಾನ ನಿಲ್ದಾಣದ ಸಿಬ್ಬಂದಿ ಮತ್ತು ಕಸ್ಟಮ್ಸ್ ಅಧಿಕಾರಿಗಳನ್ನು ಬಂಧಿಸಿದ ನಂತರ, ಎರಡೂ ವಿಮಾನ ನಿಲ್ದಾಣಗಳ ಮೂಲಕ ಅಂತಹ ಕಳ್ಳಸಾಗಣೆ ಕಡಿಮೆಯಾಗಿತ್ತು’ ಎನ್ನುತ್ತವೆ ಸಿಬಿಐ ಮೂಲಗಳು.
‘ಆದರೆ ಆ ಜಾಲ ತನ್ನ ಕಾರ್ಯಾಚರಣೆಯನ್ನು ಕೆಐಎಎಲ್‌ಗೆ ಸ್ಥಳಾಂತರಿಸಿರುವ ಸಾಧ್ಯತೆ ಅತ್ಯಧಿಕವಾಗಿದೆ. ಇಲ್ಲಿ ಈ ರೀತಿಯ ಪ್ರಕರಣಗಳು ವರದಿಯಾಗದೇ ಇದ್ದುದರಿಂದ, ಸಿಕ್ಕಿಬೀಳುವ ಸಾಧ್ಯತೆ ಕಡಿಮೆ ಇತ್ತು. ಹೀಗಾಗಿ ಆರೇಳು ತಿಂಗಳಿಂದ ಕೆಐಎಎಲ್ ಮೂಲಕ ಕಳ್ಳಸಾಗಣೆ ನಡೆಸಿರುವ ಸಾಧ್ಯತೆ ಇದೆ’ ಎಂದು ಮೂಲಗಳು ತಿಳಿಸಿವೆ.
‘ಈ ಜಾಲವು ಸಿಂಗಪುರದಿಂದಲೂ ಚಿನ್ನ ಕಳ್ಳಸಾಗಣೆ ಮಾಡಿರುವ ಬಗ್ಗೆ ಸುಳಿವು ದೊರೆತಿದೆ. ಹೀಗಾಗಿ ಆರೇಳು ತಿಂಗಳಲ್ಲಿ ದುಬೈ ಮತ್ತು ಸಿಂಗಪುರದಿಂದ ಪದೇ–ಪದೇ ಪ್ರಯಾಣ ಮಾಡಿರುವ ರಾಜತಾಂತ್ರಿಕ ಅಧಿಕಾರಿಗಳು, ಸಿಬ್ಬಂದಿ ಮತ್ತು ಅತಿಗಣ್ಯರ ವಿವರ ಕಲೆಹಾಕಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.
ಮತ್ತೆ ಮೂವರ ತಪಾಸಣೆ: ವಿಮಾನ ನಿಲ್ದಾಣದ ಅಂತರರಾಷ್ಟ್ರೀಯ ಟರ್ಮಿನಲ್‌ನಿಂದ ಹೊರಬರುವಾಗ ರನ್ಯಾ ರಾವ್ ಅವರನ್ನು, ತಪಾಸಣೆಗೆ ಒಳಪಡಿಸುವುದನ್ನು ತಪ್ಪಿಸುವಲ್ಲಿ ನೆರವು ನೀಡಿದ್ದ ಮೂವರು ಸಿಬ್ಬಂದಿಯನ್ನು ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ರಾಜ್ಯ ಪೊಲೀಸ್‌ನ ಶಿಷ್ಟಾಚಾರ ಸಿಬ್ಬಂದಿ ಮತ್ತು ಕಸ್ಟಮ್ಸ್ ಅಧಿಕಾರಿಗಳಿಗೆ ಈ ಮೊದಲೇ ಸಮನ್ಸ್ ನೀಡಲಾಗಿತ್ತು. ಅದರಂತೆ ಬುಧವಾರ ವಿಚಾರಣೆ ನಡೆಸಲಾಗಿದೆ. ತಪಾಸಣೆಯನ್ನು ಹೇಗೆ ತಪ್ಪಿಸಲಾಗುತ್ತಿತ್ತು ಎಂಬುದರ ವಿವರಣೆ ಪಡೆಯಲಾಗಿದೆ. ಹೀಗೆ ಮಾಡುವಂತೆ ಸೂಚನೆ ನೀಡಿದವರು ಯಾರು ಎಂಬುದರ ಬಗ್ಗೆ ಪ್ರಶ್ನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ನ್ಯಾಯಾಂಗ ಬಂಧನದಲ್ಲಿರುವ ರನ್ಯಾ ರಾವ್ ಅವರನ್ನು ತಮ್ಮ ಕಸ್ಟಡಿಗೆ ಪಡೆಯಲು ಸಿಬಿಐ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಈ ಸಂಬಂಧ ಶೀಘ್ರವೇ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ದಾಂಪತ್ಯದಲ್ಲಿ ವೈಮನಸ್ಸು?: ರನ್ಯಾ ರಾವ್ ಮತ್ತು ಜತಿನ್ ಹುಕ್ಕೇರಿ ಅವರು 2024ರ ಅಕ್ಟೋಬರ್ 6 ರಂದು ಬೆಂಗಳೂರಿನಲ್ಲಿ ಬಾಸ್ಟಿನ್ ರೆಸ್ಟೊರೆಂಟ್ನಲ್ಲಿ ಭೇಟಿ ಆಗಿದ್ದರು. ಅ.23ರಂದು ರನ್ಯಾ, ಜತಿನ್ ನಿಶ್ಚಿತಾರ್ಥ ನಡೆದಿತ್ತು. ನ.27ರಂದು ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ಮದುವೆಯಾಗಿದ್ದರು. ರನ್ಯಾ ಅವರು ಇತ್ತೀಚೆಗೆ ಹೆಚ್ಚಾಗಿ ವಿದೇಶಕ್ಕೆ ಹೋಗುತ್ತಿದ್ದರು. ಇದರಿಂದ ದಂಪತಿ ಮಧ್ಯೆ ವೈಮನಸ್ಸು ಉಂಟಾಗಿತ್ತು ಎಂದು ಹೇಳಲಾಗಿದೆ. ಜತಿನ್ ಹುಕ್ಕೇರಿ ಅವರನ್ನೂ ರೆವೆನ್ಯೂ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ಆದೇಶ ಕಾಯ್ದಿರಿಸಿದ ಕೋರ್ಟ್
ನ್ಯಾಯಾಂಗ ಬಂಧನದಲ್ಲಿರುವ ರನ್ಯಾ ರಾವ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಬುಧವಾರ ನಡೆಸಿದ ಆರ್ಥಿಕ ಅಪರಾಧಗಳ
ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಶ್ವನಾಥ್ ಸಿ.ಗೌಡರ್ ಅವರು ಆದೇಶವನ್ನು ಕಾಯ್ದಿರಿಸಿದರು. ಶುಕ್ರವಾರ ಬೆಳಿಗ್ಗೆ ಆದೇಶ ಪ್ರಕಟಿಸುವುದಾಗಿ ಹೇಳಿದರು. ‘ಶಿಷ್ಟಾಚಾರ ಸಿಬ್ಬಂದಿಯ ನೆರವು ಪಡೆದು ರನ್ಯಾ ಅವರು ಚಿನ್ನವನ್ನು ಕಳ್ಳ ಸಾಗಣೆ ಮಾಡಿದ್ದಾರೆ. ಆರೋಪಿಗೆ ಜಾಮೀನು ಮಂಜೂರು ಮಾಡಬಾರದು’ ಎಂದು ಪ್ರಾಸಿಕ್ಯೂಷನ್ ಪರವಾಗಿ ವಕೀಲ ಮಧು ಎನ್. ರಾವ್ ಮನವಿ ಮಾಡಿದರು.
‘ವಿಮಾನ ನಿಲ್ದಾಣದಲ್ಲಿ ಆರೋಪಿಯಿಂದ 14.2 ಕೆ.ಜಿ ಚಿನ್ನವನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಇದು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯ ಆಗಿರುವುದರಿಂದ ರನ್ಯಾಗೆ ಜಾಮೀನು ನೀಡಬಾರದು. ಡಿಆರ್‌ಐ ತನಿಖೆಗೂ ಆರೋಪಿ ಸಹಕಾರ ನೀಡಿಲ್ಲ. ಈ ಪ್ರಕರಣದಲ್ಲಿ ದೊಡ್ಡಮಟ್ಟದ ಜಾಲ ಕಾರ್ಯ ನಿರ್ವಹಿಸಿದೆ. ಅನೇಕರ ಕೈವಾಡ ಇದೆ. ಹವಾಲದ ಮೂಲಕ ವಹಿವಾಟು ನಡೆದಿದೆ’ ಎಂದು ನ್ಯಾಯಾಧೀಶರ ಗಮನಕ್ಕೆ ತಂದರು.
‘ರನ್ಯಾಗೆ ಸಹಾಯ ಮಾಡಲು ಪ್ರಯತ್ನಿಸಿದ ಶಿಷ್ಟಾಚಾರ ಸಿಬ್ಬಂದಿಯ ವಿಚಾರಣೆ ನಡೆಸಲಾಗಿದೆ. ಚಿನ್ನದ ಕಳ್ಳ ಸಾಗಣೆಗೆ ಸಂಬಂಧಿಸಿದಂತೆ ಕೆಲವು ಮಹತ್ವದ ಮಾಹಿತಿಗಳು ತನಿಖಾ ತಂಡಕ್ಕೆ ಸಿಕ್ಕಿವೆ. ರನ್ಯಾ ಬಳಿ ಯುನೈಟೆಡ್ ಅರಬ್ ಎಮಿರೇಟ್ಸ್ ನಿವಾಸಿ ಗುರುತಿನ ಚೀಟಿ ಸಹ ಪತ್ತೆಯಾಗಿದೆ’ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಗೌರವ್ ಗುಪ್ತ ನೇತೃತ್ವದಲ್ಲೇ ತನಿಖೆ
‘ರನ್ಯಾ ರಾವ್ ವಿದೇಶ ಪ್ರಯಾಣದ ವೇಳೆ ಪೊಲೀಸ್ ಸಿಬ್ಬಂದಿ ಕರ್ತವ್ಯಲೋಪ ಎಸಗಿದ್ದು ಕಂಡುಬಂದಿದ್ದು ಪ್ರಕರಣದ ತನಿಖೆಯನ್ನು ಗೃಹ ಇಲಾಖೆ ಸಿಐಡಿಗೆ ಮಂಗಳವಾರ ವಹಿಸಿತ್ತು. ರಾಮಚಂದ್ರ ರಾವ್ ಅವರ ಪಾತ್ರದ ಕುರಿತೂ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಅವರಿಗೆ ಜವಾಬ್ದಾರಿ ನೀಡಿತ್ತು. ಸಿಐಡಿ ತನಿಖೆ ಆದೇಶವನ್ನು ಗೃಹ ಇಲಾಖೆ ವಾಪಸ್ ಪಡೆದುಕೊಂಡಿದೆ. ಗೌರವ್ ಗುಪ್ತ ನೇತೃತ್ವದ ತಂಡವೇ ಎರಡೂ ಪ್ರಕರಣದ ತನಿಖೆ ನಡೆಸಲಿದೆ’ ಎಂದು ಮೂಲಗಳು ಹೇಳಿವೆ.
ವಿಮಾನ ನಿಲ್ದಾಣ: ಕೇಂದ್ರದ್ದೇ ಹೊಣೆ
ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ: ವಿಮಾನ ನಿಲ್ದಾಣ ವಾಯುಯಾನಗಳಿಗೆ ಸಂಬಂಧಿಸಿದಂತೆ ಎಲ್ಲ ಕಾಯ್ದೆಗಳನ್ನು ರೂಪಿಸುವ ಎಲ್ಲ ಸ್ವರೂಪದ ಆಡಳಿತದ ಮೇಲ್ವಿಚಾರಣೆ ನಡೆಸುವ ಸಚಿವಾಲಯ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ: ವಿಮಾನ ನಿಲ್ದಾಣಗಳಿಗೆ ಸಂಬಂಧಿಸಿದ ಸಮಗ್ರ ಮೇಲ್ವಿಚಾರಣೆ ನಡೆಸುವ ಎಲ್ಲ ನೀತಿ–ನಿಯಮಗಳನ್ನು ಅನುಷ್ಠಾನಕ್ಕೆ ತರುವ ಹೊಣೆಗಾರಿಕೆ ಕೇಂದ್ರ ಸರ್ಕಾರದ ಈ ಸಂಸ್ಥೆಯದ್ದು ವಿಮಾನ ನಿಲ್ದಾಣ ಲಿಮಿಟೆಡ್: ಪ್ರತಿ ವಿಮಾನ ನಿಲ್ದಾಣದ ನಿರ್ವಹಣೆಗೆ ರಚಿಸಲಾದ ಪ್ರತ್ಯೇಕ ಕಂಪನಿ. ಇದರಲ್ಲಿ ವಿಮಾನಯಾನ ಸಚಿವಾಲಯದ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರದ ಪ್ರತಿನಿಧಿಗಳು ಇರುತ್ತಾರೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್): ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಈ ಪಡೆಯು ವಿಮಾನ ನಿಲ್ದಾಣದ ಕಾವಲು ಪ್ರಯಾಣಿಕರ ತಪಾಸಣೆ ಬ್ಯಾಗೇಜ್ ತಪಾಸಣೆಯ ಹೊಣೆ ನಿರ್ವಹಿಸುತ್ತದೆ ಕಸ್ಟಮ್ಸ್ ವಿಭಾಗ: ಕೇಂದ್ರ ಪರೋಕ್ಷ ತೆರಿಗೆ ಮಂಡಳಿ ಅಡಿಯಲ್ಲಿ ಬರುವ ಕಸ್ಟಮ್ಸ್ ಇಲಾಖೆಯ ಸಿಬ್ಬಂದಿ ಈ ವಿಭಾಗವನ್ನು ನಿರ್ವಹಿಸುತ್ತಾರೆ. ವಿಮಾನ ನಿಲ್ದಾಣಗಳಲ್ಲಿ ಪಾಸ್‌ಪೋರ್ಟ್ ಮತ್ತು ವೀಸಾ ಪರಿಶೀಲನೆ ಅಂತರರಾಷ್ಟ್ರೀಯ ವಿಮಾನಗಳ ಪ್ರಯಾಣಿಕರ ಬ್ಯಾಗೇಜ್ ತಪಾಸಣೆ ಸರಕು ತಪಾಸಣೆ ಹೊಣೆ ಈ ಅಧಿಕಾರಿಗಳದ್ದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.