ADVERTISEMENT

ಮೌಲ್ಯ ರೂಪಿಸುತ್ತಿದ್ದ ಸಿನಿಮಾಗಳು ನೇಪಥ್ಯಕ್ಕೆ: ನಿರ್ದೇಶಕರ ಅಭಿಪ್ರಾಯ

‘ಚಲನಚಿತ್ರ: ಕನ್ನಡ ಸಾಹಿತ್ಯ’ ಗೋಷ್ಠಿ * ಅಭಿಪ್ರಾಯ, ಸಲಹೆಗಳನ್ನು ಹಂಚಿಕೊಂಡ ನಿರ್ದೇಶಕರು

ಮನೋಜ ಕುಮಾರ್ ಗುದ್ದಿ
Published 7 ಫೆಬ್ರುವರಿ 2020, 19:30 IST
Last Updated 7 ಫೆಬ್ರುವರಿ 2020, 19:30 IST
‘ಚಲನಚಿತ್ರ ಕನ್ನಡ ಸಾಹಿತ್ಯ’ ಕುರಿತ ಗೋಷ್ಠಿ ವೇಳೆ ಸಮ್ಮೇಳನಾಧ್ಯಕ್ಷ ಡಾ.ಎಚ್‌.ಎಸ್‌.ವೆಂಕಟೇಶಮೂರ್ತಿ ಹಾಗೂ ಬಿ.ಸುರೇಶ್‌ ಮಾತುಕತೆಯಲ್ಲಿ ತೊಡಗಿರುವುದು. ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ, ಎಚ್‌.ವಿ.ರಾಜೇಂದ್ರಸಿಂಗ್‌ ವೇದಿಕೆ ಮೇಲೆ ಇದ್ದರು –ಪ್ರಜಾವಾಣಿ ಚಿತ್ರ
‘ಚಲನಚಿತ್ರ ಕನ್ನಡ ಸಾಹಿತ್ಯ’ ಕುರಿತ ಗೋಷ್ಠಿ ವೇಳೆ ಸಮ್ಮೇಳನಾಧ್ಯಕ್ಷ ಡಾ.ಎಚ್‌.ಎಸ್‌.ವೆಂಕಟೇಶಮೂರ್ತಿ ಹಾಗೂ ಬಿ.ಸುರೇಶ್‌ ಮಾತುಕತೆಯಲ್ಲಿ ತೊಡಗಿರುವುದು. ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ, ಎಚ್‌.ವಿ.ರಾಜೇಂದ್ರಸಿಂಗ್‌ ವೇದಿಕೆ ಮೇಲೆ ಇದ್ದರು –ಪ್ರಜಾವಾಣಿ ಚಿತ್ರ   

ಶ್ರೀವಿಜಯ ಪ್ರಧಾನ ವೇದಿಕೆ (ಕಲಬುರ್ಗಿ):ಹಳೆಯ ಸಿನಿಮಾಗಳಲ್ಲಿನ ಸಾಮಾಜಿಕ ಬದ್ಧತೆ, ಕೌಟುಂಬಿಕ ಮೌಲ್ಯಗಳು, ಸ್ತ್ರೀಯರಿಗೆ ನೀಡುತ್ತಿದ್ದ ಗೌರವ ಹಾಗೂ ಆಧುನಿಕ ಸಿನಿಮಾಗಳಲ್ಲಿ ಕಂಡು ಬರುವ ಕ್ರೌರ್ಯ ಕಥಾನಕ ‘ಚಲನಚಿತ್ರ: ಕನ್ನಡ ಸಾಹಿತ್ಯ’ ಗೋಷ್ಠಿಯಲ್ಲಿ ಮುಖ್ಯವಾಗಿ ಚರ್ಚೆಗೆ ಒಳಪಟ್ಟವು.

‘ಚಲನಚಿತ್ರ–ಮೌಲ್ಯ ಪರಂಪರೆ’ ವಿಷಯವಾಗಿ ಮಾತನಾಡಿದನಿರ್ದೇಶಕ ಕೆ.ಎಂ.ಚೈತನ್ಯ, ‘ಪುಟ್ಟಣ್ಣ ಕಣಗಾಲ್‌ ಅವರ ಸಿನಿಮಾಗಳು ಸ್ತ್ರೀಪಾತ್ರಗಳನ್ನು ಪ್ರಧಾನ ನೆಲೆಯಲ್ಲಿ ಕರೆತಂದವು. ತಂತ್ರಜ್ಞಾನವು ಬದಲಾದಂತೆಲ್ಲ ಸಿನಿಮಾಗಳ ಕಥೆ, ನಿರೂಪಣಾ ಶೈಲಿಯೂ ಬದಲಾಯಿತು’ ಎಂದರು.

‘ಡಾ.ರಾಜಕುಮಾರ್‌ ಅವರ ಒಡಹುಟ್ಟಿದವರು ಸಿನಿಮಾ ನೋಡಿದ ಹಲವಾರು ಜನರು ಹಳ್ಳಿಯತ್ತ ತೆರಳಿ ಕೃಷಿಯಲ್ಲಿ ತೊಡಗಿಸಿಕೊಂಡರು. ಬಂಗಾರದ ಮನುಷ್ಯ, ಮಯೂರ ಮತ್ತಿತರ ಮೇರು ಸಿನಿಮಾಗಳು ನಾವು ಅನುಸರಿಸುವ ನಾಯಕ ಹೇಗಿರಬೇಕು ಎಂಬುದನ್ನು ತಿಳಿಸುವಂತಿದ್ದವು’ ಎಂದು ಸ್ಮರಿಸಿದರು.

ADVERTISEMENT

‘ಕಿರುತೆರೆ: ಸಾಮಾಜಿಕ ಜವಾಬ್ದಾರಿಗಳು’ ಕುರಿತು ಮಾತನಾಡಿದ ಚಿತ್ರ ನಿರ್ದೇಶಕ ಬಿ.ಸುರೇಶ್‌, ‘ಥಿಯೇಟರ್‌ಗಳಿಗೆ ಹೊರಟಿದ್ದ ಜನರನ್ನು ದಿನಪೂರ್ತಿ ಮನೆಯಲ್ಲೇ ಕೂರಿಸುವುದಕ್ಕಾಗಿ ಕಿರುತೆರೆ ಬಂತು. ಮಾರುಕಟ್ಟೆಯನ್ನು ಗಮನಿಸಿದಾಗ ಕಿರುತೆರೆಯು ಹಿರಿತೆರೆಯಾಗಿ ಬದಲಾಗಿದೆ. ಪ್ರತಿವರ್ಷ ಸಿನಿಮಾದಲ್ಲಿ ₹400 ಕೋಟಿ ವಹಿವಾಟು ನಡೆದರೆ ಕಿರುತೆರೆಯಲ್ಲಿ ₹1800 ಕೋಟಿ ವಹಿವಾಟು ನಡೆಯುತ್ತದೆ. ಕನ್ನಡದಲ್ಲಿ ಉಪಗ್ರಹ ಆಧಾರಿತ ಅಂದಾಜು24 ವಾಹಿನಿಗಳಿದ್ದು, ಮಾಹಿತಿ, ಶಿಕ್ಷಣ, ಮನರಂಜನೆ ಎಂಬ ಮೂರು
ಪ್ರಮುಖ ಅಂಶಗಳನ್ನು ಒಳಗೊಂಡಿದ್ದವು. ಕಾಲ ಬದಲಾದಂತೆ ಮಾಹಿತಿ, ಶಿಕ್ಷಣ ಹಿನ್ನೆಲೆಗೆ ಸರಿದು ಮನರಂಜನೆ ಮಾತ್ರ ಉಳಿದುಕೊಂಡಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಕನ್ನಡ ಚಿತ್ರರಂಗದ ಮುಂದಿರುವ ಸವಾಲುಗಳು’ ವಿಷಯವಾಗಿ ಮಾತನಾಡಿದ ನಿರ್ದೇಶಕ ಎಸ್‌.ವಿ.ರಾಜೇಂದ್ರಸಿಂಗ್‌ (ಬಾಬು), ‘ಕನ್ನಡದಲ್ಲಿ ಸಿನಿಮಾ ಮಾಡುವವರಿಗೆ ಉತ್ತಮ ಕಥೆಗಳನ್ನು ಲೇಖಕರು ಕೊಡುತ್ತಿಲ್ಲ. ಮಲಯಾಳಂನಲ್ಲಿ ವಾಸುದೇವನ್‌ ನಾಯರ್‌ ಅವರಂ ತಹ ಮೇರು ಲೇಖಕರೇ ಕಥೆ ಕೊಡುತ್ತಾರೆ. ಇತ್ತೀಚೆಗೆ ಒಬ್ಬ ಲೇಖಕರನ್ನು ಭೇಟಿಯಾಗಿ ಕಥೆ ಕೊಡುವಂತೆ ವಿನಂತಿಸಿದೆ. ಆದರೆ, ಅವರು ಒಟ್ಟಾರೆ ಸಂಭಾವನೆ ಬದಲು ಟಿ.ವಿ. ಹಕ್ಕು, ಸ್ಯಾಟ್‌ಲೈಟ್‌ ಹಕ್ಕು ಸೇರಿದಂತೆ ವಿವಿಧ ಮೂಲಗಳಿಂದ ಬರುವ ಆದಾಯದಲ್ಲೂ ಲಾಭಾಂಶ ನೀಡುವಂತೆ ಕೇಳಿದರು’ ಎಂದು ತಮ್ಮ ಅನುಭವ ಬಿಚ್ಚಿಟ್ಟರು.

ಸಮ್ಮೇಳನಾಧ್ಯಕ್ಷ ಡಾ.ಎಚ್‌.ಎಸ್‌.ವೆಂಕಟೇಶಮೂರ್ತಿ, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಮನು ಬಳಿಗಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.