ADVERTISEMENT

‘ಮೆರವಣಿಗೆ’ ಮುಗಿಸಿದ ಸಿದ್ಧಲಿಂಗಯ್ಯ

​ಪ್ರಜಾವಾಣಿ ವಾರ್ತೆ
Published 11 ಜೂನ್ 2021, 22:58 IST
Last Updated 11 ಜೂನ್ 2021, 22:58 IST
 ಕವಿ ಡಾ.ಸಿದ್ಧಲಿಂಗಯ್ಯ
ಕವಿ ಡಾ.ಸಿದ್ಧಲಿಂಗಯ್ಯ   

ಬೆಂಗಳೂರು: 12ನೇ ಶತಮಾನದ ಬಳಿಕ ಕನ್ನಡ ಪ್ರತಿಭಟನಾ ಕಾವ್ಯಕ್ಕೆ ತಳ ಸಮುದಾಯದ ರಾಗ–ಸಿಟ್ಟು–ಸೆಡುವುಗಳನ್ನು ಆಡುಭಾಷೆಯಲ್ಲಿ ನೇಯ್ದಂತಹ ‘ಹಾಡು’ಗಳ ಮೂಲಕವೇ ಒಂದೆರೆಡು ತಲೆಮಾರನ್ನು ಪ್ರಭಾವಿಸಿ, ಹೋರಾಟದ ಸಾಗರಕ್ಕೆ ‘ಸಾವಿರಾರು ನದಿ’ಗಳನ್ನು ಹರಿಯಿಸಿ ಪರಿವರ್ತನೆಯ ಮುನ್ನುಡಿ ಬರೆದ ಕವಿ ಡಾ.ಸಿದ್ದಲಿಂಗಯ್ಯ ಅವರು (67) ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದ ಸಿದ್ದಲಿಂಗಯ್ಯ ‘ಕವಿಗಳು’ ಎಂದೇ ಕರೆಯಿಸಿಕೊಂಡವರು.

ತುಳಿತಕ್ಕೊಳಗಾದ ಸಮುದಾಯದವರಲ್ಲಿ ಸ್ವಾಭಿಮಾನದ ಕಿಡಿಯನ್ನು ಹಚ್ಚುವ ಜತೆಗೆ ಕಾವ್ಯವನ್ನೇ ಖಡ್ಗದಂತೆ ಬಳಸಿದವರು. ಅವರ ‘ಹೊಲೆ ಮಾದಿಗರ ಹಾಡು’ ಕವನ ಸಂಕಲನವು ಭಾರತೀಯ ಸಾಹಿತ್ಯದಲ್ಲಿಯೇ ವಿಶಿಷ್ಟವಾದ ಸ್ಥಾನಗಳಿಸಿರುವ ಶ್ರೇಷ್ಠ ಕೃತಿಯಾಗಿದೆ. ಹಾಸ್ಯ ಪ್ರಜ್ಞೆಯನ್ನು ರೂಢಿಸಿಕೊಂಡಿದ್ದ ಅವರು, ವಿಧಾನಪರಿಷತ್ ಸದಸ್ಯರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

ADVERTISEMENT

ಅವರ ಆತ್ಮಕಥೆ ‘ಊರು ಕೇರಿ’ಯು ಎರಡು ಭಾಗದಲ್ಲಿ ಪ್ರಕಟಗೊಂಡಿದೆ. ಇಂಗ್ಲಿಷ್‌ ಹಾಗೂ ತಮಿಳು ಭಾಷೆಗೆ ಅನುವಾದಗೊಂಡಿದ್ದು, ಇಂಗ್ಲಿಷ್‌ ಅನುವಾದವನ್ನು ಕೇಂದ್ರ ಸಾಹಿತ್ಯ ಅಕಾಡೆಮಿಯು ಪ್ರಕಟಿಸಿದೆ. ಅವರ ಹಲವಾರು ಕವಿತೆಗಳು ಇಂಗ್ಲಿಷ್‌, ಹಿಂದಿ, ತಮಿಳು, ಬಂಗಾಳಿ, ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲಿ ಅನುವಾದಗೊಂಡಿವೆ.

ಅವರಿಗೆ ಕಳೆದ ತಿಂಗಳು ಕೆಮ್ಮು ಮತ್ತು ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಮೇ 2 ರಂದು ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಹಳೆ ವಿಮಾಣ ನಿಲ್ದಾಣ ರಸ್ತೆಯ ಮಣಿಪಾಲ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಒದಗಿಸಲಾಗುತ್ತಿತ್ತು. ಬಹುಅಂಗಾಂಗ ವೈಫಲ್ಯ ಸಮಸ್ಯೆಯನ್ನು ಎದುರಿಸುತ್ತಿದ್ದರು. ಒಂದು ತಿಂಗಳಿಗೂ ಅಧಿಕ ಕಾಲ ಆಸ್ಪತ್ರೆಯಲ್ಲಿದ್ದ ಅವರು, ಚಿಕಿತ್ಸೆಗೆ ಸ್ಪಂದಿಸದೆಯೇ ಶುಕ್ರವಾರ ಮಧ್ಯಾಹ್ನ 3.45ಕ್ಕೆ ಮೃತಪಟ್ಟಿದ್ದಾರೆ.

ಅವರಿಗೆ ಪತ್ನಿ, ಓರ್ವ ಪುತ್ರಿ ಹಾಗೂ ಪುತ್ರ ಇದ್ದಾರೆ. ಕೆಲ ದಿನಗಳ ಹಿಂದೆ ಅವರ ಪತ್ನಿಗೆ ಕೂಡ ಕೋವಿಡ್‌ ತಗುಲಿತ್ತು. ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು.

1954ರ ಫೆಬ್ರವರಿ 3 ರಂದು ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಮಂಚನಬೆಲೆಯಲ್ಲಿ ಜನಿಸಿದ ಅವರು, 1976ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ವರ್ಣಪದಕದೊಂದಿಗೆ ಕನ್ನಡ ಎಂ.ಎ. ಪದವಿ ಪಡೆದಿದ್ದರು. ಪ್ರೊ.ಜಿ.ಎಸ್‌. ಶಿವರುದ್ರಪ್ಪ ಅವರ ಮಾರ್ಗದರ್ಶನದಲ್ಲಿ ‘ಗ್ರಾಮದೇವತೆಗಳು’ ಎಂಬ ಪ್ರೌಢ ಪ್ರಬಂಧದ ಮೇಲೆ 1989ರಲ್ಲಿ ಪಿಎಚ್‌.ಡಿ. ಪದವಿಯನ್ನು ಪಡೆದಿದ್ದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ, ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದರು.

‘ಸಾವಿರಾರು ನದಿಗಳು’, ‘ಕಪ್ಪುಕಾಡಿನ ಹಾಡು’, ‘ಮೆರವಣಿಗೆ’, ‘ನನ್ನ ಜನಗಳು’ ಮತ್ತು ಇತರ ಕವಿತೆಗಳು’, ‘ಆಯ್ದ ಕವನಗಳು’, ‘ಅಲ್ಲೆಕುಂತವರು’ ಮುಂತಾದ ಕವನ ಸಂಕಲನಗಳು ಪ್ರಕಟಗೊಂಡಿವೆ.

‘ಪಂಚಮ’, ‘ನೆಲಸಮ’, ‘ಏಕಲವ್ಯ’ ಪ್ರಮುಖ ನಾಟಕಗಳಾಗಿವೆ. ‘ರಸಘಳಿಗೆಗಳು’, ‘ಎಡಬಲ’, ‘ಹಕ್ಕಿನೋಟ’, ‘ಜನಸಂಸ್ಕೃತಿ’, ‘ಉರಿಕಂಡಾಯ’ ಮುಂತಾದ ಲೇಖನ ಸಂಗ್ರಹಗಳು, ‘ಸದನದಲ್ಲಿ ಸಿದ್ದಲಿಂಗಯ್ಯ ಭಾಗ 1 ಮತ್ತು 2’ ಸೇರಿದಂತೆ ವಿವಿಧ ಕೃತಿಗಳು ಪ್ರಕಟಗೊಂಡಿವೆ. ಪುಟ್ಟಣ್ಣ ಕಣಗಾಲರು ನಿರ್ದೇಶಿಸಿದ ‘ಧರಣಿಮಂಡಲ ಮಧ್ಯದೊಳಗೆ’ ಚಿತ್ರಕ್ಕೆ ಬರೆದ ಗೀತೆಗೆ ರಾಜ್ಯಪ್ರಶಸ್ತಿ ಸಂದಿದೆ.

ಶ್ರವಣಬೆಳಗೊಳದಲ್ಲಿ ನಡೆದ 81ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಸೇರಿದಂತೆ ಮುಂತಾದ ಗೌರವಗಳು ಅವರಿಗೆ ಸಂದಿವೆ. ನೃಪತುಂಗ ಪ್ರಶಸ್ತಿ, ಪಂಪ ಪ್ರಶಸ್ತಿ ರಾಜ್ಯೋತ್ಸವ ಪ್ರಶಸ್ತಿ, ಡಾ. ಅಂಬೇಡ್ಕರ್ ಶತಮಾನೋತ್ಸವ ವಿಶೇಷ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ, ಡಾ. ಅಂಬೇಡ್ಕರ್ ಪ್ರಶಸ್ತಿ, ಸತ್ಯಕಾಮ ಪ್ರತಿಷ್ಠಾನ ಪ್ರಶಸ್ತಿ, ಬಾಬು ಜಗಜೀವನ ರಾಮ್‌ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಗೌರವಗಳು ಅವರಿಗೆ ಸಂದಿವೆ.

ಸಾರ್ವಜನಿಕ ದರ್ಶನಕ್ಕೆ ಅವಕಾಶ

ಸಿದ್ದಲಿಂಗಯ್ಯ ಅವರಿಗೆ ನಡೆಸಲಾದ ಮರಣೋತ್ತರ ಕೋವಿಡ್ ಪರೀಕ್ಷೆಯಲ್ಲಿ ಕೊರೊನಾ ಸೋಂಕಿತರಾಗಿಲ್ಲ (ನೆಗೆಟಿವ್) ಎಂಬ ವರದಿ ಬಂದಿದೆ. ಹೀಗಾಗಿ, ಶನಿವಾರ ಬೆಳಿಗ್ಗೆ 9 ಗಂಟೆಯಿಂದ 10.30ರವರೆಗೆ ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಲ್ಲಿಯೇ ಮಧ್ಯಾಹ್ನ 12.30ರೊಳಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲಾಗುತ್ತದೆ. ಈ ಬಗ್ಗೆ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.