ADVERTISEMENT

ಎಂಜಿನಿಯರಿಂಗ್‌ಗೆ ಸರಳ ಭಾಷೆಯಲ್ಲಿ ಕನ್ನಡ ಇ–ಪುಸ್ತಕ ರಚಿಸಿದ ಡಾ.ಸುದರ್ಶನ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2020, 20:05 IST
Last Updated 7 ಅಕ್ಟೋಬರ್ 2020, 20:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೈಸೂರು: ಕನ್ನಡ ಮಾಧ್ಯಮದಲ್ಲಿ ಕಲಿತು, ಎಂಜಿನಿಯರಿಂಗ್‌ಓದುತ್ತಿರುವ ವಿದ್ಯಾರ್ಥಿಗಳಿಗೆ ನೆರವಾಗಬಲ್ಲ ಇ–ಪುಸ್ತಕವೊಂದು ಸಿದ್ಧವಾಗಿದೆ.

ಮೈಸೂರಿನ ಜೆಎಸ್‌ಎಸ್‌ ವಿಜ್ಞಾನ ಮತ್ತು ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್‌ ಅಂಡ್‌ ಕಮ್ಯುನಿಕೇಷನ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಡಾ.ಸುದರ್ಶನ ಪಾಟೀಲ ಕುಲಕರ್ಣಿ, ‘ಸಂಕೇತ, ವ್ಯವಸ್ಥೆ ಮತ್ತು ನಿಯಂತ್ರಣ’ (ಸಿಗ್ನಲ್ಸ್, ಸಿಸ್ಟಮ್ಸ್ ಅಂಡ್‌ ಕಂಟ್ರೋಲ್) ಹೆಸರಿನ ಇ–ಪುಸ್ತಕ ರಚಿಸಿದ್ದಾರೆ.

ಎಂಜಿನಿಯರಿಂಗ್‌ ಪದವಿಯ ಪಠ್ಯದಲ್ಲಿ ಬರುವ ಕ್ಲಿಷ್ಟಕರ ಪದಗಳ ಅರ್ಥ, ವಿವರಣೆಗಳನ್ನು ಸರಳವಾಗಿ, ಅರ್ಥವಾಗಬಲ್ಲ ರೀತಿಯಲ್ಲಿ ನೀಡಲಾಗಿದೆ. ಪುಸ್ತಕ ಒಟ್ಟು ಏಳು ಅಧ್ಯಾಯಗಳನ್ನು ಒಳಗೊಂಡಿದೆ.

ADVERTISEMENT

ಪುಸ್ತಕದ ಕೊನೆಯಲ್ಲಿ ಕನ್ನಡ ಮತ್ತು ಇಂಗ್ಲಿಷ್‌ನ ತಾಂತ್ರಿಕ ಪಾರಿಭಾಷಿಕ ಶಬ್ದಕೋಶ ನೀಡಲಾಗಿದೆ. ಗಣಿತದ ಸಮೀಕರಣ, ಚಿತ್ರಗಳು ಮತ್ತು
ಕೋಷ್ಟಕಗಳನ್ನು ಕೂಡ ಲೇಖಕರೇ ಸಿದ್ಧಪಡಿಸಿದ್ದಾರೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಕಲಿಸುವ ಬೋಧಕರಿಗೂ ಈ ಪುಸ್ತಕ ಕೈಪಿಡಿಯಾಗಿದೆ.

‘ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಣ ಪೂರೈಸಿದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಎಂಜಿನಿಯರಿಂಗ್‌ ಪದವಿ ಕಲಿಯುವಾಗ ಕಷ್ಟ ಅನುಭವಿಸುವರು. ಇಂಗ್ಲಿಷ್‌ ಪದಗಳನ್ನು ಅರ್ಥೈಸಿಕೊಳ್ಳಲು ಆಗುವುದಿಲ್ಲ. ಕೆಲವೊಮ್ಮೆ ಬೋಧಕರಿಗೆ ಕನ್ನಡದಲ್ಲಿ ಸರಿಯಾಗಿ ವಿವರಿಸಲೂ ಸಾಧ್ಯವಾಗುವುದಿಲ್ಲ. ಅವರಿಗೆ ನೆರವಾಗುವ ಉದ್ದೇಶದಿಂದ ಪುಸ್ತಕ ರಚಿಸಿದ್ದೇನೆ’ ಎಂದು ಸುದರ್ಶನ ಪಾಟೀಲ ತಿಳಿಸಿದರು.

ಇದು ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಈಗಾಗಲೇ ಎಂಜಿನಿಯರಿಂಗ್‌ ವೃತ್ತಿಯಲ್ಲಿ ತೊಡಗಿಸಿಕೊಂಡವರಿಗೂ ಉಪಯುಕ್ತವಾಗಿದೆ. ಗ್ರಾಮೀಣ ಭಾಗದಿಂದ ಬಂದವರಿಗೆ ವೈಜ್ಞಾನಿಕ ಚಿಂತನೆ ರೂಢಿಸಿಕೊಂಡು ಉನ್ನತ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಲು ಸೂಕ್ತ ಪಠ್ಯ ಮತ್ತು ಸಲಕರಣೆಗಳ ಕೊರತೆಯಿದೆ. ಅದನ್ನು ನೀಗಿಸಲು ನಡೆಸಿದ ಪ್ರಯತ್ನವಿದು ಎಂದರು.

‘ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥವಾಗುವಂತಹ ಸರಳವಾದ ಭಾಷೆಯಲ್ಲಿ ಬರೆದಿರುವುದು ಈ ಪುಸ್ತಕದ ಹೆಗ್ಗಳಿಕೆ. ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲಿ ಲಭ್ಯವಿರುವ ಉತ್ತಮ ಕೃತಿಗಳಲ್ಲಿ ಈ ಪುಸ್ತಕವೂ ಒಂದು’ ಎಂದು ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಕೆ.ಚಿದಾನಂದ ಗೌಡ ಅವರು ಮುನ್ನುಡಿಯಲ್ಲಿ ಬರೆದಿದ್ದಾರೆ.

ಆಸಕ್ತರು https://tinyurl.com/ycxk7qfo ಲಿಂಕ್‌ ಮೂಲಕ ಖರೀದಿಸಬಹುದು.

***

ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ನ ಕ್ಲಿಷ್ಟಕರ ಪದಗಳನ್ನು ಸುಲಭವಾಗಿ ಅರ್ಥೈಸಲು ಆಗುವಂತೆ ಪುಸ್ತಕ ರಚಿಸಿದ್ದೇನೆ

– ಡಾ.ಸುದರ್ಶನ ಪಾಟೀಲ ಕುಲಕರ್ಣಿ, ಪ್ರಾಧ್ಯಾಪಕರು, ಜೆಎಸ್‌ಎಸ್‌ ವಿಜ್ಞಾನ ಮತ್ತು ತಾಂತ್ರಿಕ ವಿವಿ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.