
ಕೆ.ಎಂ. ಗಾಯತ್ರಿ,
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಆಡಳಿತಾಧಿಕಾರಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ಗಾಯಿತ್ರಿ ಅವರು ಮಂಗಳವಾರ ಅಧಿಕಾರ ಸ್ವೀಕರಿಸಿದರು.
ಸೆ.30ರಂದೇ ಸಹಕಾರ ಇಲಾಖೆಯು ಆಡಳಿತಾಧಿಕಾರಿಯನ್ನು ನೇಮಕ ಮಾಡಿ ಆದೇಶ ಹೊರಡಿಸಿತ್ತು. ಅಧಿಕಾರ ದುರ್ಬಳಕೆ, ಹಣಕಾಸು ದುರುಪಯೋಗ ಸೇರಿ ಕಸಾಪ ಅಧ್ಯಕ್ಷ ಮಹೇಶ ಜೋಶಿ ಅವರ ವಿರುದ್ಧದ ವಿವಿಧ ಆರೋಪಗಳಿಗೆ ಸಂಬಂಧಿಸಿದಂತೆ ವಿಚಾರಣೆಗೆ ಈ ನೇಮಕಾತಿ ಮಾಡಲಾಗಿದೆ.
ಈ ಆದೇಶಕ್ಕೆ ತಡೆ ಕೋರಿ ಕಸಾಪ ಅಧ್ಯಕ್ಷ ಮಹೇಶ ಜೋಶಿ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಸೋಮವಾರ ನಡೆದ ವಿಚಾರಣೆಯಲ್ಲಿ, ಸರ್ಕಾರವು ಆಡಳಿತಾಧಿಕಾರಿ ನೇಮಕಕ್ಕೆ ಸಂಬಂಧಿಸಿದಂತೆ ಅಗತ್ಯ ದಾಖಲಾತಿಗಳನ್ನು ಕೋರ್ಟ್‌ಗೆ ಸಲ್ಲಿಸಿತ್ತು. ಮಂಗಳವಾರ ಮಧ್ಯಾಹ್ನ 12 ಗಂಟೆ ವೇಳೆಗೆ ಕಸಾಪಕ್ಕೆ ಬಂದ ಗಾಯಿತ್ರಿ ಅವರು, ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು.
ಆದೇಶ ಹೊರಡಿಸಿದ ದಿನಾಂಕದಿಂದ ಮುಂದಿನ ಮೂರು ತಿಂಗಳು ಅಥವಾ ವಿಚಾರಣೆ ಪೂರ್ಣಗೊಳ್ಳುವವರೆಗೆ ಈ ನೇಮಕಾತಿ ಜಾರಿಯಲ್ಲಿ ಇರಲಿದೆ.
ಕಸಾಪದಲ್ಲಿ ಹಣಕಾಸಿನ ಅವ್ಯವಹಾರ ಹಾಗೂ ಅಧಿಕಾರ ದುರ್ಬಳಕೆಯ ಆರೋಪಗಳ ವಿಚಾರಣೆಗೆ ಸಂಬಂಧಿಸಿದಂತೆ ಜುಲೈನಲ್ಲಿ ಆದೇಶ ಹೊರಡಿಸಿದ್ದ ಸಹಕಾರ ಇಲಾಖೆ, ವಿಚಾರಣಾಧಿಕಾರಿಯನ್ನು ನೇಮಕ ಮಾಡಿತ್ತು.
ಸೆ. 22ರಂದು ವಿಚಾರಣೆಗೆ ಹಾಜರಾಗುವಂತೆ ಮಹೇಶ ಜೋಶಿ ಅವರಿಗೆ ನೋಟಿಸ್ ನೀಡಿದ್ದ ಇಲಾಖೆ ಕಾರ್ಯದರ್ಶಿ, ‘ಮೇಲ್ನೋಟಕ್ಕೆ ಆರೋಪಗಳು ಸಾಬೀತಾಗಿರುವುದರಿಂದ ಏಕೆ ಆಡಳಿತಾಧಿಕಾರಿ ನೇಮಿಸಬಾರದು’ ಎಂದು ನೋಟಿಸ್‌ನಲ್ಲಿ ಪ್ರಶ್ನಿಸಿದ್ದರು. ಈ ನೋಟಿಸ್‌ಗೆ ಸಂಬಂಧಿಸಿದಂತೆ ಪತ್ರ ಬರೆದಿದ್ದ ಮಹೇಶ ಜೋಶಿ, 15 ದಿನಗಳ ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದರು. ಇಲಾಖೆಗೆ ಲಿಖಿತ ಹೇಳಿಕೆ ಸಲ್ಲಿಸಿದ್ದರು.
ವಿಚಾರಣೆಗೆ ಸಂಬಂಧಿಸಿದಂತೆ ನಿಗದಿತ ಕಾಲಾವಧಿಯಲ್ಲಿ ಹಾಜರಾಗದಿರುವುದು, ಅಗತ್ಯ ದಾಖಲಾತಿಗಳನ್ನು ಒದಗಿಸದಿರುವ ಕಾರಣ ಆಡಳಿತಾಧಿಕಾರಿ ನೇಮಿಸುವಂತೆ ಇಲಾಖೆ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.
ಪರಿಷತ್ತಿನ ವಿರುದ್ಧದ 17 ಆರೋಪಗಳಿಗೆ ಸಮರ್ಪಕ ಹಾಗೂ ಸಮರ್ಥನೀಯ ಹೇಳಿಕೆ ಅಥವಾ ದಾಖಲಾತಿಯನ್ನು ಸಲ್ಲಿಸಲು ಪರಿಷತ್ತಿನ ಅಧ್ಯಕ್ಷರು ವಿಫಲರಾಗಿದ್ದಾರೆ. ಇಲಾಖೆ ನೇಮಿಸಿದ್ದ ವಿಚಾರಣಾಧಿಕಾರಿಯ ವರದಿ, ಜಿಲ್ಲಾ ನೋಂದಣಾಧಿಕಾರಿಗಳ ಶಿಫಾರಸು ಹಾಗೂ ಸಹಕಾರ ಸಂಘಗಳ ನಿಬಂಧಕರ ಪ್ರಸ್ತಾವದ ಅನುಸಾರ ವಿಚಾರಣೆಗೆ ಆಡಳಿತಾಧಿಕಾರಿ ನೇಮಕಕ್ಕೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
17 ಆರೋಪಗಳ ಪೈಕಿ ಏಳು ಆರೋಪಗಳಿಗೆ ಮಾತ್ರ ವಿಚಾರಣಾ ಅವಧಿಯಲ್ಲಿ ಭಾಗಶಃ ಉತ್ತರವನ್ನು ಕಸಾಪ ಅಧ್ಯಕ್ಷರು ವಿಚಾರಣಾಧಿಕಾರಿಗೆ ನೀಡಿರುತ್ತಾರೆ. ವಿಚಾರಣಾಧಿಕಾರಿ ಕಾಲಾವಕಾಶ ನೀಡಿದರೂ ನಿಗದಿತ ಸಮಯದೊಳಗೆ ದಾಖಲೆಗಳೊಂದಿಗೆ ಉತ್ತರಿಸಲು ವಿಫಲರಾಗಿರುತ್ತಾರೆ ಎಂದು ಉಲ್ಲೇಖಿಸಲಾಗಿದೆ.
ಸರ್ಕಾರದ ಸೂಚನೆ ಮೇರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದೇನೆ.-ಕೆ.ಎಂ.ಗಾಯಿತ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.