ADVERTISEMENT

ಕನ್ನಡ ಶಾಲೆಗಳ ಬೆಳವಣಿಗೆಗೆ 6 ನಿರ್ಣಯ

ಸಾಹಿತಿಗಳು, ಚಿಂತಕರನ್ನು ಒಳಗೊಂಡ ದುಂಡು ಮೇಜಿನ ಸಭೆಯಲ್ಲಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2022, 16:01 IST
Last Updated 5 ಏಪ್ರಿಲ್ 2022, 16:01 IST
   

ಬೆಂಗಳೂರು: ಕನ್ನಡ ಶಾಲೆಗಳ ಉಳಿವು ಮತ್ತು ಬೆಳವಣಿಗೆಗೆ ಸಂಬಂಧಿಸಿದಂತೆ ಕಾದಂಬರಿಕಾರ ಎಸ್‌.ಎಲ್. ಭೈರಪ್ಪ ಅಧ್ಯಕ್ಷತೆಯ ದುಂಡುಮೇಜಿನ ಸಭೆಯು ಆರು ನಿರ್ಣಯಗಳನ್ನು ಕೈಗೊಂಡಿದೆ.

ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಸಭೆಯಲ್ಲಿ ಆರು ನಿರ್ಣಯಗಳನ್ನು ಸರ್ಕಾರಕ್ಕೆ ಸಲ್ಲಿಸಲು ಅನುಮೋದನೆ ನೀಡಲಾಯಿತು.

ಇನ್ನು ಮುಂದೆ ಸರ್ಕಾರವು ಯಾವುದೇ ಕಾರಣವನ್ನು ಮುಂದೊಡ್ಡಿ ಸರ್ಕಾರಿ, ಅನುದಾನ ರಹಿತ ಹಾಗೂ ಅನುದಾನ ಸಹಿತ ಕನ್ನಡ ಮಾದ್ಯಮ ಶಾಲೆಗಳನ್ನು ಮುಚ್ಚಬಾರದು. ಕನ್ನಡ ಶಾಲೆಗಳನ್ನು ಸಬಲೀಕರಣಗೊಳಿಸಲು ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ 2009ರ (ಆರ್.ಟಿ.ಇ) ಅನ್ವಯ ಇರುವ 9 ಮೂಲಭೂತ ಮಾನದಂಡಗಳನ್ನು ಸಮರ್ಪಕವಾಗಿ ಪರಿಪಾಲನೆ ಮಾಡಬೇಕು. ರಾಜ್ಯದ ಒಟ್ಟು ಆಂತರಿಕ ಉತ್ಪನ್ನದಲ್ಲಿ (ಎಸ್.ಜಿ.ಡಿ.ಪಿ) ಕನಿಷ್ಠ ಶೇ 6 ರಷ್ಟು ಮೊತ್ತವನ್ನು ಶಿಕ್ಷಣಕ್ಕಾಗಿ ಪ್ರತಿವರ್ಷವೂ ಬಜೆಟ್‌ನಲ್ಲಿ ಮೀಸಲಿಡಬೇಕು ಎಂದು ನಿರ್ಣಯ ಕೈಗೊಳ್ಳಲಾಯಿತು.

ADVERTISEMENT

ಅನುದಾನ ರಹಿತ ಕನ್ನಡ ಶಾಲೆಗಳು ಉಳಿಯುವುದಕ್ಕೆ ಮತ್ತು ಬೆಳೆಯುವುದಕ್ಕೆ ವಿಶೇಷ ಅನುದಾನ ಮತ್ತು ರಿಯಾಯಿತಿಯನ್ನು ನೀಡಬೇಕು.ರಾಜ್ಯ ಭಾಷೆಯು 1 ರಿಂದ 8ನೇ ತರಗತಿಯವರೆಗೆ ಶಿಕ್ಷಣ ಮಾಧ್ಯಮವಾಗಬೇಕೆಂದು ಸಂವಿಧಾನದಲ್ಲಿ ತಿದ್ದುಪಡಿ ಮಾಡಬೇಕು. ಈ ಬಗ್ಗೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ನೂತನ ರಾಷ್ಟ್ರೀಯಶಿಕ್ಷಣ ನೀತಿಯ ಪ್ರಕಾರ 2022-23ನೇ ಶೈಕ್ಷಣಿಕ ವರ್ಷದಿಂದ ಯಾವುದೇ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸಬಾರದು ಎಂಬ ನಿರ್ಣಯಕ್ಕೆ ಸಭೆಯಲ್ಲಿ ಒಮ್ಮತ ವ್ಯಕ್ತವಾಯಿತು.

ಪ್ರಧಾನ ಗುರುದತ್ತ,ಶತಾವಧಾನಿ ಆರ್‌. ಗಣೇಶ್, ಅಬ್ದುಲ್ ರೆಹಮಾನ್ ಪಾಷಾ, ಪ್ರೊ.ಜಿ. ಅಶ್ವತ್ಥನಾರಾಯಣ ಸೇರಿದಂತೆ ವಿವಿಧ ಕ್ಷೇತ್ರಗಳ 20 ಮಂದಿ ವಿಷಯ ತಜ್ಞರು ಕನ್ನಡ ಶಾಲೆಗಳ ಬಗ್ಗೆ ತಮ್ಮ ಅಭಿಮತ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.