ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷರ ವಿರುದ್ಧ ಅಧಿಕಾರ ದುರ್ಬಳಕೆ ಸೇರಿ ವಿವಿಧ ಆರೋಪಗಳಿದ್ದು, ಈ ಕಾರಣದಿಂದಾಗಿ ಶೀಘ್ರದಲ್ಲಿಯೇ ಕಸಾಪಕ್ಕೆ ಆಡಳಿತಾಧಿಕಾರಿ ನೇಮಕಗೊಳ್ಳುವ ಸಾಧ್ಯತೆ ಇದೆ.
ಕಸಾಪದಲ್ಲಿ ಹಣಕಾಸಿನ ಅವ್ಯವಹಾರ ಹಾಗೂ ಅಧಿಕಾರ ದುರ್ಬಳಕೆಯ ಆರೋಪಗಳ ವಿಚಾರಣೆಗೆ ಸಂಬಂಧಿಸಿದಂತೆ ಜುಲೈನಲ್ಲಿ ಆದೇಶ ಹೊರಡಿಸಿದ್ದ ಸಹಕಾರ ಇಲಾಖೆ ವಿಚಾರಣಾಧಿಕಾರಿಯನ್ನು ನೇಮಕ ಮಾಡಿತ್ತು. ವಿಚಾರಣೆಗೆ ಸಂಬಂಧಿಸಿದಂತೆ ನಿಗದಿತ ಕಾಲಾವಧಿಯಲ್ಲಿ ಹಾಜರಾಗದಿರುವುದು, ಅಗತ್ಯ ದಾಖಲಾತಿಗಳನ್ನು ಒದಗಿಸದಿರುವ ಕಾರಣ ಆಡಳಿತಾಧಿಕಾರಿ ನೇಮಿಸುವಂತೆ ಇಲಾಖೆ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಸದ್ಯವೇ ಆಡಳಿತಾಧಿಕಾರಿ ನೇಮಕ ಮಾಡಲಾಗುವುದು ಎಂದು ಸಹಕಾರ ಇಲಾಖೆ ಮೂಲಗಳು ಹೇಳಿವೆ.
ಇದಕ್ಕೆ ಪೂರಕವಾಗಿ ಸಹಕಾರ ಇಲಾಖೆ ಮುಖ್ಯಮಂತ್ರಿಯವರಿಗೆ ಕಡತ ಕಳುಹಿಸಿದೆ. ಆಡಳಿತಾಧಿಕಾರಿಯನ್ನಾಗಿ ಯಾರನ್ನು ನೇಮಿಸಬೇಕು ಎಂಬುದರ ಪರಿಶೀಲನೆ ನಡೆದಿದೆ. ಮುಂದಿನ ವಾರ ನೇಮಕದ ಆದೇಶ ಹೊರಬೀಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಸೆ. 22ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದ ಇಲಾಖೆ ಕಾರ್ಯದರ್ಶಿ, ‘ಮೇಲ್ನೋಟಕ್ಕೆ ಆರೋಪಗಳು ಸಾಬೀತಾಗಿರುವುದರಿಂದ ಏಕೆ ಆಡಳಿತಾಧಿಕಾರಿ ನೇಮಿಸಬಾರದು’ ಎಂದು ನೋಟಿಸ್‌ನಲ್ಲಿ ಪ್ರಶ್ನಿಸಿದ್ದರು. ಈ ನೋಟಿಸ್‌ಗೆ ಸಂಬಂಧಿಸಿದಂತೆ ಪತ್ರ ಬರೆದಿದ್ದ ಮಹೇಶ ಜೋಶಿ, ‘ಸಹೋದರಿ ಪತಿ ಲಿಂಗರಾಜ ಕುರ್ತಕೋಟಿ ಅವರು ಮೃತಪಟ್ಟ ಕಾರಣ, ಲಿಖಿತ ಹೇಳಿಕೆ ನೀಡಲು ಹಾಗೂ ವಿಚಾರಣೆಗೆ ಹಾಜರಾಗಲು 15 ದಿನಗಳ ಕಾಲಾವಕಾಶ ನೀಡಬೇಕು’ ಎಂದು ಮನವಿ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.