ADVERTISEMENT

ಕನ್ನಡ ಭಾಷೆ ಪುನರುತ್ಥಾನವಾಗಲಿ: ಡಾ.ಮನು ಬಳಿಗಾರ್

ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ. ಮನು ಬಳಿಗಾರ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2020, 11:02 IST
Last Updated 5 ಫೆಬ್ರುವರಿ 2020, 11:02 IST
ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆಯಲ್ಲಿ ಕಲಾತಂಡಗಳು
ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆಯಲ್ಲಿ ಕಲಾತಂಡಗಳು   

ಶ್ರೀವಿಜಯ ಪ್ರಧಾನ ವೇದಿಕೆ (ಕಲಬುರ್ಗಿ):' ಕನ್ನಡ ಭಾಷೆ ನಶಿಸುತ್ತಿದೆ ಎಂಬ ಆತಂಕ ದೂರವಾಗಲು ಕನ್ನಡ ಮತ್ತೊಮ್ಮೆ ಪುನರುತ್ಥಾನವಾಗಬೇಕಿದೆ 'ಎಂದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ. ಮನು ಬಳಿಗಾರ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಬುಧವಾರ ಆರಂಭವಾದ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ’ಕನ್ನಡಿಗರಿಗೇ ಮಾತೃ ಭಾಷೆಯ ಮೇಲೆ ನಿರಾಸಕ್ತಿ ಇದೆ. ಇದು ದೂರವಾಗಬೇಕಾದರೆ, ಭಾಷೆಯ ಪುನರುತ್ಥಾನ ಆಗಲೇ ಬೇಕು’ ಎಂದು ಅವರು ಪ‍್ರತಿಪಾದಿಸಿದರು.

ಇತ್ತೀಚಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಹೊಸ ರೂಪವನ್ನು ಪಡೆದುಕೊಳ್ಳುತ್ತಿದೆ. ಕನ್ನಡಕ್ಕೆ ಆತಂಕ ಬಂದಿದ್ದರೂ ಇಂತಹ ಸಾಹಿತ್ಯ ಸಮ್ಮೇಳನಗಳ ಮೂಲಕ ಅದನ್ನು ದೂರ ಮಾಡಲಾಗುತ್ತಿದೆ ಎಂದು ಹೇಳಿದರು.

ADVERTISEMENT

ವಚನ ಸಾಹಿತ್ಯ ಹಾಗೂ ದಲಿತ ಸಾಹಿತ್ಯಕ್ಕೆ ಕಲ್ಯಾಣ ಕರ್ನಾಟಕ ಭಾಗದ ಕೊಡುಗೆ ಅಪಾರವಿದೆ. ವೈಚಾರಿಕ ಚಿಂತನೆಗಳ ಅನಾವರಣವು ಕೂಡ ಇಲ್ಲಿಂದಲೇ ಆಗಿದ್ದು ಎಂದರು.

ನಾಡು, ನುಡಿಯ ರಕ್ಷಣೆಗಾಗಿ ಎಲ್ಲರನ್ನು ಒಳಗೊಂಡು ಹೋಗುವಂತಹ ಸಂಘಟನಾತ್ಮಕ ಕೆಲಸವಾಗುತ್ತಿದೆ. ಜೊತೆಗೆ ಹೊಸತನದ ಸಾಹಿತ್ಯಗಳು ಕೂಡ ರಚನೆಯಾಗುತ್ತಿವೆ. ಇದರಿಂದಾಗಿಯೇ ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಬಂದಿವೆ ಎಂದು ಹೇಳಿದರು.

105 ವರ್ಷಗಳ ಇತಿಹಾಸದಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಂದಿಗೂ ಕಾಣದಂತಹ ಅಭಿವೃದ್ಧಿ ಕೆಲಸಗಳು ಇತ್ತೀಚಿನ ದಿನಗಳಲ್ಲಿ ಆಗುತ್ತಿವೆ. ಈ ಭಾಗದವರಿಗೆ ಉದ್ಯೋಗವಕಾಶಗಳು ಕೂಡ ದೊರೆತಿವೆ. ಇದರ ಜೊತೆಗೆ ಕನ್ನಡಿಗರು, ಕನ್ನಡಪರ ಸಂಘಟನೆಗಳು ಹಾಗೂ ಸಂಘ–ಸಂಸ್ಥೆಗಳು ಒಗ್ಗಟ್ಟಾಗಿ ನಾಡಿನ ಪ್ರಗತಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

’ಲಾಂಛನ ಘೋಷಿಸಲಿ...’

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ತನ್ನದೇ ಆದ ಲಾಂಛನವನ್ನು ಘೋಷಿಸಬೇಕು ಎಂದು ಸಮ್ಮೇಳನದಲ್ಲಿ ಭಾಗವಹಿಸಿದ್ದ ಕನ್ನಡ ಸಾಹಿತ್ಯಾಸಕ್ತರೊಬ್ಬರು ಆಗ್ರಹಿಸಿದರು.

ಸಾಹಿತ್ಯ ಸಮ್ಮೇಳನಕ್ಕೆ ತನ್ನದೇ ಆದ ಲಾಂಛನ ಬೇಕಿದೆ. ಈ ಬಗ್ಗೆ ಹಿಂದಿನ ಹಲವು ಸಮ್ಮೇಳನಗಳಲ್ಲಿ ಒತ್ತಾಯಿಸುತ್ತಾ ಬಂದರೂ ಸರ್ಕಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ ನಿರ್ಲಕ್ಷ್ಯ ವಹಿಸುತ್ತಿವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.