ADVERTISEMENT

ಕನ್ನಡಕ್ಕಾಗಿ ನಾವು| ಕನ್ನಡ ಗೀತ ಗಾಯನ ದಾಖಲೆ: ಎಲ್ಲೆಲ್ಲೂ ಅನುರಣಿಸಿದ ನಾಡ ಗೀತೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2021, 8:03 IST
Last Updated 28 ಅಕ್ಟೋಬರ್ 2021, 8:03 IST
   

ಬೆಂಗಳೂರು:‘ಕನ್ನಡಕ್ಕಾಗಿ ನಾವು’ ಅಭಿಯಾನದ ಅಂಗವಾಗಿ ಸಾಮೂಹಿಕ ಕನ್ನಡ ಗೀತೆಗಳ ಗಾಯನದಲ್ಲಿ 5 ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸುವ ಮೂಲಕ ನೂತನ ದಾಖಲೆ ಬರೆದರು.

ರಾಜ್ಯದ ಎಲ್ಲ 31 ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಒಗಳ ಜತೆ ಚರ್ಚಿಸಿ ಇದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದರು. ಸುಮಾರು 1,000 ಕ್ಕೂ ಹೆಚ್ಚು ಸ್ಥಳಗಳಲ್ಲಿ ಗೀತ ಗಾಯನ ಕಾರ್ಯಕ್ರಮ ನಡೆಯಿತು.

ಬೆಳಿಗ್ಗೆ 11.00 ಕ್ಕೆ ನಡೆದ ಈ ಕಾರ್ಯಕ್ರಮದಲ್ಲಿ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಮಾತ್ರವಲ್ಲದೇ, ಕನ್ನಡ ನಾಡಿನ ಎಲ್ಲ ವರ್ಗದ ಜನರೂ ಭಾಗವಹಿಸಿದ್ದರು. ದೇಶದ ಇತರ ರಾಜ್ಯಗಳು ಮತ್ತು ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು, ಕನ್ನಡ ಕೂಟಗಳು ಸಹ ಕನ್ನಡ ಗೀತೆಗಳನ್ನು ಹಾಡಿದರು. ಇವರಿಗಾಗಿ ಒದಗಿಸಿರುವ ನಿರ್ದಿಷ್ಟ ಜಾಲತಾಣ ಸಂಪರ್ಕದ ಮೂಲಕ ಒಟ್ಟಿಗೆ ಹಾಡುವ ತಾಂತ್ರಿಕ ಸಂಯೋಜನೆ ರೂಪಿಸಲಾಗಿತ್ತು.

ADVERTISEMENT

ನಾಡಿನ ಎಲ್ಲ ಸರ್ಕಾರಿ ಕಚೇರಿಗಳು, ಶಾಲಾ–ಕಾಲೇಜುಗಳ ಆವರಣ, ವಿಶ್ವವಿದ್ಯಾಲಯಗಳ ಆವರಣ, ತಾಂತ್ರಿಕ ಮತ್ತು ವೈದ್ಯಕೀಯ ವಿಶ್ವವಿದ್ಯಾಲಯಗಳ ಆವರಣ, ಮೈಸೂರು ಅರಮನೆ ಮುಂಭಾಗ, ಹಂಪಿಯ ಕಲ್ಲಿನ ರಥ, ಮಹಾನವಮಿ ದಿಬ್ಬ ಸೇರಿ ವಿವಿಧ ಜಿಲ್ಲೆಗಳ ಪ್ರಸಿದ್ಧ ಸ್ಮಾರಕಗಳ ಮುಂದೆ ಒಟ್ಟಿಗೆ ನಿಂತು ಗಾಯನ ಮಾಡಲಾಯಿತು.

ಅಲ್ಲದೆ, ರಾಜ್ಯದ ಎಲ್ಲ ದೊಡ್ಡ ಮಾರುಕಟ್ಟೆಗಳು, ಆಟೋರಿಕ್ಷಾ ನಿಲ್ದಾಣಗಳು, ಕೈಗಾರಿಕಾ ಪ್ರದೇಶಗಳು ಮತ್ತು ಜನನಿಬಿಡ ಸ್ಥಳಗಳಲ್ಲಿ ಗೀತ ಗಾಯನ ನಡೆಯಿತು. ದೊಡ್ಡ ಸಂಖ್ಯೆಯ ಜನ ಸೇರುವ ಸ್ಥಳಗಳಲ್ಲಿ ಗೀತೆಗಳ ಧಾಟಿಯನ್ನು ಕಲಿಸಲು ಪರಿಣಿತ ಸಂಗೀತ ಗಾಯಕರನ್ನು ನಿಯೋಜಿಸಲಾಗಿತ್ತು.

ಮಂಡ್ಯ ಜಿಲ್ಲಾ ಕ್ರೀಡಾಂಗಣದಲ್ಲಿ 3 ಸಾವಿರ ವಿದ್ಯಾರ್ಥಿಗಳಿಂದ ಗಾಯನ

'ಕನ್ನಡಕ್ಕಾಗಿ ನಾವು' ಕಾರ್ಯಕ್ರಮದ ಅಂಗವಾಗಿ ಮಂಡ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ 3 ಸಾವಿರ ವಿದ್ಯಾರ್ಥಿಗಳು ಕನ್ನಡ ಗೀತೆಗಳನ್ನು ಹಾಡಿದರು.

ಕುವೆಂಪು ಅವರ ಬಾರಿಸು ಕನ್ನಡ ಡಿಂಡಿಮವ, ಡಾ.ಕೆ.ಎಸ್.ನಿಸಾರ್ ಅಹಮ್ಮದ್ ಅವರ ಜೋಗದ ಸಿರಿ ಬೆಳಕಿನಲ್ಲಿ, ಹಂಸಲೇಖ ಅವರ ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು ಗೀತೆಗಳನ್ನು ಪ್ರಸ್ತುತ ಪಡಿಸಿದರು.

ಕಲಬುರಗಿ 'ಕನ್ನಡಕ್ಕಾಗಿ ನಾವು' ಕಾರ್ಯಕ್ರಮ

ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿ ಎದುರು‌ ಕನ್ನಡ‌ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಯೋಜಿಸಿದ್ದ 'ಕನ್ನಡಕ್ಕಾಗಿ ನಾವು' ಕಾರ್ಯಕ್ರಮದಲ್ಲಿ ಕಲಾವಿದರು ಗೀತೆಗಳನ್ನು ಪ್ರಸ್ತುತಪಡಿಸಿದರು.

ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಭಾಗಿ

ಹುಬ್ಬಳ್ಳಿಯ ಅಶೋಕ ನಗರದ ಕನ್ನಡ ಭವನದಲ್ಲಿ ಗುರುವಾರ ಮಾತಾಡ್ ಮಾತಾಡ್ ಕನ್ನಡ ಕಾರ್ಯಕ್ರಮದ ಅಂಗವಾಗಿ ನಡೆದ ಲಕ್ಷ ಕಂಠಗಳಲ್ಲಿ ಕನ್ನಡ ಗೀತಗಾಯನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಾಲ್ಗೊಂಡು ಕನ್ನಡ ಹಾಡುಗಳನ್ನು ಹಾಡಿದರು.

ವಿಧಾನಸೌಧದ ಮುಂಭಾಗದಲ್ಲಿ ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮ

ವಿಧಾನಸೌಧದ ಮುಂಭಾಗದಲ್ಲಿ ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಮತ್ತು ಸಚಿವಾಲಯ ಸಿಬ್ಬಂದಿ ಭಾಗವಹಿಸಿದ್ದರು.

ಉಡುಪಿ: ಏಕಕಾಲದಲ್ಲಿ ಕನ್ನಡ ಗೀತೆಗಳ ಗಾಯನ

'ಮಾತಾಡ್ ಮಾತಾಡ್ ಕನ್ನಡ' ಕಾರ್ಯಕ್ರಮದ ಅಂಗವಾಗಿ ಗುರುವಾರ ಜಿಲ್ಲೆಯಾದ್ಯಂತ ಏಕಕಾಲದಲ್ಲಿ ಕನ್ನಡ ಗೀತೆಗಳ ಗಾಯನ ನಡೆಯಿತು.

ಮಲ್ಪೆ ಸಮುದ್ರ ಮಧ್ಯೆಯಲ್ಲಿ 100 ಕಲಾವಿದರು ಒಟ್ಟಾಗಿ ಗೀತೆಗಳನ್ನು ಹಾಡಿದರು. ಜಿಲ್ಲಾಡಳಿತದ ಮುಂಭಾಗದಲ್ಲಿ 500ಕ್ಕೂ ಹೆಚ್ಚು ಮಂದಿ, ಕೃಷ್ಣಮಠದ ರಾಜಾಂಗಣದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಸಾಮೂಹಿಕವಾಗಿ ಕನ್ನಡ ಗೀತೆಗಳನ್ನು ಹಾಡಿದರು.

ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲೂ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ತುಮಕೂರು ಸಿದ್ಧಗಂಗಾ ಮಠದಲ್ಲಿ ಕಾರ್ಯಕ್ರಮ

ತುಮಕೂರು ಸಿದ್ಧಗಂಗಾ ಮಠದಲ್ಲಿ ಗುರುವಾರ ಮಾತಾಡ್ ಮಾತಾಡ್ ಕನ್ನಡ ಕಾರ್ಯಕ್ರಮದ ಅಂಗವಾಗಿ ಗೀತಗಾಯನ ಕಾರ್ಯಕ್ರಮ ನಡೆಯಿತು. ಸಾವಿರಾರು ವಿದ್ಯಾರ್ಥಿಗಳು ಸಾಮೂಹಿಕವಾಗಿ ಕನ್ನಡ ಗೀತೆಗಳನ್ನು ಹಾಡಿದರು. ಸಿದ್ಧಲಿಂಗ ಸ್ವಾಮೀಜಿ ಉಪಸ್ಥಿತರಿದ್ದರು.

ಮಂಗಳೂರು: ಕಡಲ ತಡಿಯಲ್ಲಿ ಗೀತಗಾಯನ

ಇಲ್ಲಿನ ತಣ್ಣೀರುಬಾವಿ ಕಡಲ ಕಿನಾರೆಯಲ್ಲಿ ನಗರದ ವಿವಿಧ ಶಾಲೆಗಳ ನೂರಾರು ವಿದ್ಯಾರ್ಥಿಗಳು ಬಿಸಿಲಿನ ತಾಪವನ್ನೂ ಲೆಕ್ಕಿಸದೆ ಗುರುವಾರ ‘ಲಕ್ಷಕಂಠ ಗೀತಗಾಯನ’ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ರಾಜ್ಯೋತ್ಸವ ಹಾಗೂ ಕನ್ನಡಕ್ಕಾಗಿ ನಾವು ಅಭಿಯಾನದ ಅಂಗವಾಗಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಕ್ಕಳು, ನಾಡಗೀತೆ, ನಿಸಾರ್‌ ಅಹಮದ್‌ ಅವರ ನಿತ್ಯೋತ್ಸವ ಹಾಗೂ ಹಂಸಲೇಖ ರಚಿಸಿದ ಹುಟ್ಟಿದರೇ ಕನ್ನಡನಾಡಲಿ ಹುಟ್ಟಬೇಕು ಎಂಬ ಹಾಡುಗಳನ್ನು ಒಕ್ಕೊರಲಿನಿಂದ ಹಾಡಿದರು.

ಪ್ರತಿ ಹಾಡಿನ ಕೊನೆಯಲ್ಲಿ ‘ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ’ ಎಂಬ ಘೋಷವಾಕ್ಯವನ್ನೂ ಮೊಳಗಿಸಿದರು. ಗಾಯನ ಮುಗಿದ ನಂತರ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ಅವರು ಮಕ್ಕಳಿಗೆ ಕನ್ನಡದ ಪ್ರತಿಜ್ಞಾವಿಧಿ ಬೋಧಿಸಿದರು.

ಕಾಲ ಬುಡದಲ್ಲಿ ಕಾದ ಮರಳು, ತಲೆಯ ಮೇಲೆ ಉರಿವ ಸೂರ್ಯನ ತಾಪವನ್ನು ತಾಳದೆ ಒಂದಿಬ್ಬರು ಮಕ್ಕಳು ಬಸವಳಿದು ಬಿದ್ದರೂ ಒಂದೆರಡು ನಿಮಿಷಗಳಲ್ಲಿ ಸುಧಾರಿಸಿ ಮತ್ತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಸಂಸದ ನಳಿನ್‌ಕುಮಾರ್‌ ಕಟೀಲ್‌, ಜಿ.ಪಂ, ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್‌, ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀಧರ್‌, ಡಿಡಿಪಿಐ ಮಲ್ಲೆಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್‌, ವಿವಿಧ ಶಾಲೆಗಳ ಶಿಕ್ಷಕರು ಪಾಲ್ಗೊಂಡಿದ್ದರು.

ನಗರದ ವಿವಿಧ ಶಾಲಾ ಕಾಲೇಜುಗಳು, ವಿಮಾನ ನಿಲ್ದಾಣ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲೂ ಗೀತಗಾಯನ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.