ADVERTISEMENT

ಶೇ 70ರಷ್ಟು ಜನರ ಸರಾಸರಿ ಆದಾಯ ₹10 ಸಾವಿರ ಮಾತ್ರ- ಕಪಿಲ್ ಸಿಬಲ್

ಕೇಂದ್ರ ಸರ್ಕಾರದ ಸಾಧನೆ ಶೂನ್ಯ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2019, 7:22 IST
Last Updated 4 ಏಪ್ರಿಲ್ 2019, 7:22 IST
   

ಬೆಂಗಳೂರು: ಆರ್ಥಿಕ ಪ್ರಗತಿ ಮತ್ತು ಸಾಮಾಜಿಕ ನ್ಯಾಯದ ಆಧಾರದ ಮೇಲೆ ದೇಶ ಅಭಿವೃದ್ಧಿ ಕಾಣುತ್ತಿದೆ. ಕೇಂದ್ರ ಸರ್ಕಾರ ಕಳೆದ ಐದು ವರ್ಷದಲ್ಲಿ ಯಾವುದೇ ಸಾಧನೆ ಮಾಡಿಲ್ಲ ಎಂದು ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಹೇಳಿದರು.

ಎಐಸಿಸಿ ಬಿಡುಗಡೆ ಮಾಡಿದ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಬಡವರು ಬಡವರಾಗಿ, ಶ್ರೀಮಂತರು ಇನ್ನಷ್ಟು ಶ್ರೀಮಂತರಾಗುತ್ತಿದ್ದಾರೆ. ಹಣ‌ ಮಾಡಿಕೊಂಡವರು ದೇಶ ಬಿಟ್ಟು ಓಡಿ ಹೋಗುತ್ತಿದ್ದಾರೆ. ಬಡವರು ಕುಟುಂಬಕ್ಕೆ ಊಟ ಹಾಕಲು ಹೆಣಗಾಡುತ್ತಿದ್ದಾರೆ.

ADVERTISEMENT

ಶೇ 70 ರಷ್ಟು ಮಂದಿ ಸರಾಸರಿ 10 ಸಾವಿರ ರೂಪಾಯಿ ಮಾತ್ರ ಆದಾಯ ಹೊಂದಿದ್ದಾರೆ ಎಂದರು.

ಮಾತಿನಿಂದ ಆಡಳಿತ ನಡೆಯುವುದಿಲ್ಲ. ಯುಪಿಎ ಸಾಕಷ್ಟು ಅಭಿವೃದ್ಧಿ ಮಾಡಿತ್ತು. ಆದರೆ, ಈಗ ಐದು ವರ್ಷ ದೇಶ ಮುನ್ನಡೆಸಿದ ಮೋದಿ ಸರ್ಕಾರ ಎಲ್ಲವನ್ನೂ ಕೆಡಿಸಿದೆ ಎಂದು ಟೀಕಿಸಿದರು.

ನಮ್ಮ ಪ್ರಣಾಳಿಕೆಯಲ್ಲಿ ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು 12ನೇ ತರಗತಿಯವರೆಗೆ ವಿಸ್ತರಿಸುತ್ತೇವೆ. ಶಿಕ್ಷಣದಲ್ಲಿ ತಂತ್ರಜ್ಞಾನ ಅಳವಡಿಸುವ ಪ್ರಸ್ತಾಪವಿದ್ದು ಗುಣಮಟ್ಟದ ಶಿಕ್ಷಣ ಲಭಿಸಲಿದೆ. ಸಾಮಾಜಿಕ ನ್ಯಾಯಕ್ಕೆ ಬೆಂಬಲ ನೀಡುತ್ತೇವೆ. ಆರೋಗ್ಯದ ಬಗ್ಗೆ ಗಮನ ಹರಿಸಿದ್ದೇವೆ. ಉಚಿತ ಔಷಧ ನೀಡುವ ಕಾರ್ಯವನ್ನು ಕೆಲ ವರ್ಗದವರಿಗೆ ನೀಡಿದ್ದೇವೆ. ನಮ್ಮ ಬದ್ಧತೆ ಹೆಚ್ಚಿದೆ. ಇದರಿಂದಲೇ ಹೇಳಿದ್ದನ್ನೇ ಮಾಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ತಿಳಿಸಿದ್ದೇವೆ ಎಂದರು.

ನಾವು ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿ ತರಲಿದ್ದೇವೆ. ದೇಶದ ಆರು ಕಡೆ ವಿಶೇಷ ನ್ಯಾಯಾಲಯ ಬೆಂಚ್ ಸ್ಥಾಪಿಸುತ್ತೇವೆ. ಜ್ಯುಡಿಷಿಯಲ್ ನೇಮಕ ವ್ಯವಸ್ಥೆ ಜಾರಿಗೆ ತರುತ್ತೇವೆ. ನ್ಯಾಯ ದೂರು ಸೇರಿದಂತೆ ವಿವಿಧ ವಿಭಾಗ ತೆರೆಯುತ್ತೇವೆ. ಆರು ಸ್ಥಳೀಯ ನ್ಯಾಯಾಲಯ ಸ್ಥಾಪಿಸುತ್ತೇವೆ. ಪ್ರತಿ ವಲಯದಲ್ಲಿ ನ್ಯಾಯಾಲಯ ಇರುವುದರಿಂದ ಜನರಿಗೆ ದಿಲ್ಲಿಗೆ ಬರುವ ಸಮಸ್ಯೆ ಇಲ್ಲ. ಗೃಹ ನಿರ್ಮಾಣ, ಜಿಎಸ್‌ಟಿ 2.0 ಮಾಡಲಿದ್ದೇವೆ. ಸರಳೀಕರಿಸುತ್ತೇವೆ. ಜಿಎಸ್‌ಟಿ ಕೌನ್ಸಿಲ್‌ಗೆ ಬರುವ ಆದಾಯ ರಾಜ್ಯಕ್ಕೆ ಹಂಚುತ್ತೇವೆ ಎಂದರು.

ಐದು ವರ್ಷಗಳಲ್ಲಿ ದೇಶದಲ್ಲಿ ಆರ್ಥಿಕ ಕುಸಿತ ಉಂಟಾಗಿದೆ. ಸಾಮಾಜಿಕ ನ್ಯಾಯದ ಬದಲು ಅನ್ಯಾಯ ಎಸಗಲಾಗಿದೆ. ಮೋದಿ ಸರ್ಕಾರ ನಡೆದುಕೊಂಡ ರೀತಿಯಿಂದ ಆರ್ಥಿಕ ಕುಸಿತ ಉಂಟಾಗಿದೆ. ನೋಟು ರದ್ದತಿಯಿಂದ ಸಾಮಾನ್ಯ ಜನರ ಜೀವನಕ್ಕೆ ಹೊಡೆತ ಬಿದ್ದಿದೆ. ಐದು ವರ್ಷಗಳಲ್ಲಿ ಸಾಮಾಜಿಕ ನ್ಯಾಯ ಯಾರಿಗೂ ಸಿಕ್ಕಿಲ್ಲ. ಬದಲಾಗಿ ಸಾಮಾಜಿಕ ಅನ್ಯಾಯವಾಗಿದೆ ಎಂದರು.

ನಮ್ಮ ಪ್ರಣಾಳಿಕೆಯಿಂದ ದೇಶವನ್ನು ಬದಲಾವಣೆ ಮಾಡಲು ಆಗುತ್ತದೆ. ಹೀಗಾಗೀ 72 ಸಾವಿರ ರೂಪಾಯಿ ಬಡವರಿಗೆ ನೀಡುವ ತೀರ್ಮಾನ ಮಾಡಿದ್ದೇವೆ. ಸ್ವಾಮಿನಾಥನ್ ವರದಿಯನ್ನು ನಾವು ಜಾರಿ ಮಾಡುತ್ತೇವೆ. ಕೃಷಿಗಾಗಿ ಪ್ರತ್ಯೇಕ ಬಜೆಟ್ ಮಂಡನೆ ಮಾಡುತ್ತೇವೆ. ಪ್ರಣಾಳಿಕೆಯನ್ನು ನಾವು ಕೊಟ್ಟ ಭರವಸೆಯನ್ನು ಖಂಡಿತ ಈಡೇರಿಡುತ್ತೇವೆ. ಒಂದು ವರ್ಷದಲ್ಲಿ 4 ಲಕ್ಷ ಉದ್ಯೋಗ ಅವಕಾಶ ಕಲ್ಪಿಸುತ್ತೇವೆ. ’ಇದು ಬರಿಯ ಬಾಯಿ ಮಾತಲ್ಲ ಮಾಡಿ ತೋರಿಸುತ್ತೇವೆ, ಒಂದೇ ವರ್ಷದಲ್ಲಿ’ ಎಂದರು.

ಸರ್ಜಿಕಲ್ ಸ್ಟ್ರೈಕ್ ಮಾಡುವುದಾದರೆ ಬಡತನ, ಉದ್ಯೋಗ ಸೃಷ್ಟಿಗೆ ಮಾಡಬಹುದಿತ್ತು. ಬುಲೆಟ್ ರೈಲಿಗೆ ಒಂದು ಲಕ್ಷ ಕೋಟಿ ವ್ಯಯಿಸುವ ಅಗತ್ಯವಿತ್ತೇ. ಸಾಮಾನ್ಯರಿಗೆ ಅವಕಾಶ ಕೊಡಬಹುದಿತ್ತು ಎಂದು ಅವರು ಮೋದಿ ಆಡಳಿತವನ್ನು ಟೀಕಿಸಿದರು.

ನೀನು ಚೌಕೀದಾರ್ ಆಗಿದ್ದರೆ ಅಷ್ಟು ದೊಡ್ಡ ಪ್ರಮಾಣದ ಆರ್‌ಡಿಎಕ್ಸ್‌ ಹೇಗೆ ಬಂತು, ನೀನು ನಿನ್ನ ಕೆಲಸ ಮಾಡಿಲ್ಲವೇ? ಇಂತಹ ಚೌಕೀದಾರ್‌ಗಳಿಂದ ದೇಶದ ರಕ್ಷಣೆ ಹೇಗೆ ಸಾಧ್ಯ. ಸೂಕ್ತ ತನಿಖೆ ಕೂಡ ಮಾಡಿಲ್ಲ. ನೀರವ್ ಮೋದಿ, ಚೋಕ್ಸಿ ಓಡಿಹೋದಾಗ, ಕಟುವಾನಲ್ಲಿ‌ ಯುವತಿ ದಾರುಣವಾಗಿ ಅತ್ಯಾಚಾರವಾದಾಗ ಈ ಚೌಕೀದಾರ್ ಎಲ್ಲಿ ಹೋಗಿದ್ದ ಎಂದು ಮೋದಿಯನ್ನು ಅವರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.