ADVERTISEMENT

4 ಕರಗಗಳ ನಗರ ಪ್ರದಕ್ಷಿಣೆ ರದ್ದು

17 ರಂದು ದಾರಿಯಲ್ಲೂ ಪೂಜೆ ಸ್ವೀಕಾರ ಇಲ್ಲ: ರಾಬಿನ್‌ ದೇವಯ್ಯ ಮಾಹಿತಿ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2020, 18:03 IST
Last Updated 14 ಅಕ್ಟೋಬರ್ 2020, 18:03 IST
ಕಳೆದ ವರ್ಷ ಮಡಿಕೇರಿ ದಸರಾಕ್ಕೆ ಚಾಲನೆ ನೀಡಿದ್ದ ವೇಳೆ ಸೇರಿದ್ದ ಜನಸ್ತೋಮ (ಸಂಗ್ರಹ ಚಿತ್ರ)
ಕಳೆದ ವರ್ಷ ಮಡಿಕೇರಿ ದಸರಾಕ್ಕೆ ಚಾಲನೆ ನೀಡಿದ್ದ ವೇಳೆ ಸೇರಿದ್ದ ಜನಸ್ತೋಮ (ಸಂಗ್ರಹ ಚಿತ್ರ)   

ಮಡಿಕೇರಿ: ನಗರ ದಸರಾ ಉತ್ಸವವನ್ನು ಈ ವರ್ಷ ಕೋವಿಡ್‌ ಕಾರಣಕ್ಕೆ ಅ.17ರಿಂದ 26ರ ವರೆಗೆ ಸರಳ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ನಗರ ದಸರಾ ಸಮಿತಿ ಕಾರ್ಯಾಧ್ಯಕ್ಷ ರಾಬಿನ್ ದೇವಯ್ಯ ಇಲ್ಲಿ ತಿಳಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅ.17ರಂದು ಸಂಜೆ 5 ಗಂಟೆಗೆ ನಗರದ ಪಂಪಿನ ಕೆರೆಯಿಂದ ನಾಲ್ಕು ಶಕ್ತಿದೇವತೆಗಳಾದ ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ, ಕಂಚಿ ಕಾಮಾಕ್ಷಿಯಮ್ಮ, ಕೋಟೆ ಮಾರಿಯಮ್ಮ, ದಂಡಿನ ಮಾರಿಯಮ್ಮ ಕರಗಕ್ಕೆ ನಿರ್ದಿಷ್ಟ ಸಂಖ್ಯೆಯಲ್ಲಿ ಜನರು ಸೇರಿ ಪೂಜೆ ಸಲ್ಲಿಸಿ ಮಡಿಕೇರಿ ದಸರಾಕ್ಕೆ ಚಾಲನೆ ನೀಡಲಾಗುವುದು. ಆದರೆ, ಕೋವಿಡ್‌ ಕಾರಣಕ್ಕೆ ಜನದಟ್ಟಣೆಗೆ ಅವಕಾಶ ಇಲ್ಲ; ಜಿಲ್ಲೆಯ ಜನರು ಸಹಕಾರ ನೀಡಬೇಕು ಎಂದು ಕೋರಿದರು.

17ರಂದು ಸಂಜೆ ಕರಗಗಳು ಪಂಪಿನಕೆರೆಯಿಂದ ಹೊರಟು ಬನ್ನಿ ಮಂಟಪಕ್ಕೆ ಆಗಮಿಸಿ, ಪೂಜೆ ನೆರವೇರಿಸಲಾಗುವುದು. ನಂತರ, ಕೋದಂಡರಾಮ ದೇವಾಲಯ, ಚೌಡೇಶ್ವರಿ ದೇವಾಲಯ, ಕನ್ನಿಕಾ ಪರಮೇಶ್ವರಿ ದೇವಾಲಯ ಹಾಗೂ ಇತಿಹಾಸ ಪ್ರಸಿದ್ಧ ಪೇಟೆ ಶ್ರೀರಾಮ ಮಂದಿರ ದೇವಾಲಯಗಳಲ್ಲಿ ಪೂಜೆಯನ್ನು ಸ್ವೀಕರಿಸಿದ ಬಳಿಕ ತಮ್ಮ ದೇವಾಲಯಗಳಿಗೆ ಕರಗಗಳು ತೆರಳಲಿವೆ ಎಂದು ಮಾಹಿತಿ ನೀಡಿದರು.

ADVERTISEMENT

ನವರಾತ್ರಿಯ 9 ದಿನಗಳಲ್ಲಿ 4 ಶಕ್ತಿದೇವಾಲಯಗಳಲ್ಲಿ ಕರಗಗಳಿಗೆ ಸಾರ್ವಜನಿಕರು ಬಂದು ಪೂಜೆ ಸಲ್ಲಿಸುವ ಅವಕಾಶ ಕಲ್ಪಿಸಲಾಗಿದೆ. ಆದರೆ, ಕರಗಗಳ ಯಾವುದೇ ನಗರ ಪ್ರದಕ್ಷಿಣೆ ಇರುವುದಿಲ್ಲ ಎಂದು ರಾಬಿನ್‌ ಮಾಹಿತಿ ನೀಡಿದರು.

ಕೊಡಗು ಜಿಲ್ಲೆ ಶಿಸ್ತಿಗೆ ಹೆಸರು ವಾಸಿ. ಜಿಲ್ಲೆಯ ಜನರು ಮಾದರಿಯಾಗಬೇಕು. ಕರಗ ಮೆರವಣಿಗೆ ಸಂದರ್ಭದಲ್ಲಿ ಸಾರ್ವಜನಿಕರು ರಸ್ತೆ ಬದಿಯಲ್ಲಿ ಜನ ಸಂದಣಿಯಾಗದ ರೀತಿಯಲ್ಲಿ ನೋಡಿಕೊಳ್ಳಬೇಕು. ಪ್ರಸಕ್ತ ವರ್ಷ ಕರಗ ಹೊರಟು ಬರುವ ದಾರಿಯಲ್ಲಿ ಯಾವುದೇ ಪೂಜೆಯನ್ನು ಸ್ವೀಕಾರ ಮಾಡುವುದಿಲ್ಲ. ಸಾರ್ವಜನಿಕರು ಮನೆಯಿಂದಲೇ ದೇವರಿಗೆ ನಮಸ್ಕರಿಸಬೇಕು ಎಂದು ಮನವಿ ಮಾಡಿದರು.

ಇತರೆ ಕಾರ್ಯಕ್ರಮಗಳೂ ರದ್ದು: ಸರ್ಕಾರದ ಮಾರ್ಗಸೂಚಿ ಅನ್ವಯ ಪ್ರಸಕ್ತ ವರ್ಷದ ದಸರಾದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು, ಕ್ರೀಡಾ ಚಟುವಟಿಕೆಗಳು, ಕವಿಗೋಷ್ಠಿ, ಯುವ ದಸರಾ, ಇತರ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ದಸರಾ ಕಾರ್ಯಕ್ರಮದಲ್ಲಿ ಸರ್ಕಾರದ ನಿಯಮಕ್ಕೆ ಮಾಸ್ಕ್ ಧರಿಸುವಿಕೆ ಹಾಗೂ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ ಎಂದು ರಾಬಿನ್ ದೇವಯ್ಯ ಹೇಳಿದರು.

ಕರಗ, ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಕೋವಿಡ್ ನೆಗೆಟಿವ್‌ ಪ್ರಮಾಣ ಪತ್ರ ತರಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಎಂ.ಪಿ.ಸುನಿಲ್ ಸುಬ್ರಮಣಿ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವರು, ಲೋಕಸಭಾ ಸದಸ್ಯರು, ಜಿಲ್ಲಾ ಪರಿಷತ್ ಸದಸ್ಯರು, ಜಿಲ್ಲಾಡಳಿತ, ದಸರಾ ಸಮಿತಿ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಕೋವಿಡ್‌-19 ಇರುವ ಕಾರಣ ಈ ಬಾರಿ ದಸರಾ ಉತ್ಸವವನ್ನು ಸರಳ ಹಾಗೂ ಸಾಂಪ್ರದಾಯಿಕ ರೀತಿಯಲ್ಲಿ ಆಚರಿಸಲಾಗುವುದು ಎಂದರು.

ದಸರಾ ಕಾರ್ಯಕ್ರಮಕ್ಕೆ ಯಾವುದೇ ರೀತಿಯ ಧಕ್ಕೆಯಾಗದಂತೆ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು. ಸರ್ಕಾರದ ನಿಯಮ ಗೌರವಯುತವಾಗಿ ಪಾಲಿಸಲಾಗುವುದು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ಮಾಸ್ಕ್ ಕಡ್ಡಾಯ ಎಂದರು.

ಉಪಾಧ್ಯಕ್ಷ ನೆರವಂಡ ಜೀವನ್, ಬಿ.ಎಂ.ರಾಜೇಶ್, ಪ್ರಧಾನ ಕಾರ್ಯದರ್ಶಿ ಬಿ.ಕೆ.ಜಗದೀಶ್, ಖಜಾಂಚಿ ಉಮೇಶ್ ಸುಬ್ರಮಣಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.