ADVERTISEMENT

ಜೊಮಾಟೊ, ಉಬರ್‌ ಕಾರ್ಮಿಕರಿಗೂ ಭದ್ರತೆ; ಗಿಗ್‌ ಕಾರ್ಮಿಕರ ಮಸೂದೆ–2025 ಅಂಗೀಕಾರ

ವಿಧಾನಸಭೆ: ಕರ್ನಾಟಕ ಪ್ಲಾಟ್‌ಫಾರ್ಮ್ ಆಧಾರಿತ ಗಿಗ್‌ ಕಾರ್ಮಿಕರ ಮಸೂದೆ–2025 ಅಂಗೀಕಾರ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 14:11 IST
Last Updated 19 ಆಗಸ್ಟ್ 2025, 14:11 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಪ್ಲಾಟ್‌ಫಾರ್ಮ್ ಆಧಾರಿತ ಸೇವೆಗಳಾದ ಸ್ವಿಗ್ಗಿ, ಜೊಮಾಟೊ, ರೈಡ್‌ ಶೇರಿಂಗ್‌ ಸೇವೆಗಳಾದ ಓಲಾ, ಉಬರ್‌, ಇ–ಕಾಮರ್ಸ್‌ ಸಂಸ್ಥೆಗಳಾದ ಅಮೆಜಾನ್‌, ಪ್ಲಿಪ್‌ಕಾರ್ಟ್‌, ಬಿಗ್‌ ಬಾಸ್ಕೆಟ್‌ ಮತ್ತಿತರ ಕ್ಷೇತ್ರಗಳಲ್ಲಿ ಪೂರ್ಣಕಾಲಿಕ ಅಥವಾ ಅರೆಕಾಲಿಕ ಡೆಲಿವರಿ ನೌಕರರಾಗಿ ಕಾರ್ಯ ನಿರ್ವಹಿಸುತ್ತಿರುವವರಿಗೂ ಇನ್ನು ಮುಂದೆ ಸಾಮಾಜಿಕ ಭದ್ರತೆ ಸಿಗಲಿದೆ.

ಕರ್ನಾಟಕ ಪ್ಲಾಟ್‌ಫಾರ್ಮ್ ಆಧಾರಿತ ಗಿಗ್‌ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಮಸೂದೆ–2025 ವಿಧಾನಸಭೆ ಮಂಗಳವಾರ ಅಂಗೀಕಾರ ನೀಡಿದೆ. ಇದರಿಂದ ರಾಜ್ಯದ 4 ಲಕ್ಷ ಗಿಗ್‌ ಕಾರ್ಮಿಕರ ಅನುಕೂಲವಾಗಲಿದೆ.

ಗಿಗ್‌ ಕಾರ್ಮಿಕರು ಸರಕು ಸೇವೆಗಳನ್ನು ನಿಗದಿತ ಸಮಯಕ್ಕೆ ಸರಿಯಾಗಿ ಸೂಚಿಸಿದ ಸ್ಥಳಗಳಿಗೆ ವಾಹನಗಳಲ್ಲಿ ತೆರಳಿ ವಿತರಿಸುತ್ತಾರೆ. ಅಂತಹ ಸಂದರ್ಭಗಳಲ್ಲಿ ಅಪಘಾತಕ್ಕೆ ಒಳಗಾಗಬಹುದು. ಅಪಘಾತದಿಂದ ಮರಣ, ಶಾಶ್ವತ ಅಂಗವೈಕಲ್ಯ ಹೊಂದಿದರೆ ಅವರು ಮತ್ತು ಅವರ ಅವಲಂಬಿತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಾರೆ. ಅಂತಹ ಸಂದರ್ಭದಲ್ಲಿ ಅವರು ಮತ್ತು ಅವರ ಕುಟುಂಬಗಳಿಗೆ ಸಾಮಾಜಿಕ ಭದ್ರತೆ ಸಿಗಲಿದೆ. ಇದಕ್ಕಾಗಿ ಪ್ಲಾಟ್‌ಫಾರ್ಮ್ ಆಧಾರಿತ ಸೇವೆಯ ವೇದಿಕೆಗಳಿಂದ ಪ್ರತಿ ವಹಿವಾಟಿನ ಮೇಲೆ ಶೇ 1ರಿಂದ ಶೇ 2 ಮೀರದಂತೆ ಕ್ಷೇಮಾಭಿವೃದ್ಧಿ ಶುಲ್ಕ ಸಂಗ್ರಹಿಸಲಾಗುತ್ತದೆ. ಅವರಿಗೆ ಭವಿಷ್ಯ ನಿಧಿ, ಅಪಘಾತ ಸೌಲಭ್ಯ, ವಸತಿ, ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯ, ಕಾರ್ಮಿಕ ಕೌಶಲಾಭಿವೃದ್ಧಿ, ಅಂತ್ಯಸಂಸ್ಕಾರಕ್ಕೆ ಧನ ಸಹಾಯ ಸಿಗಲಿದೆ. 

ADVERTISEMENT

‘ರಾಜ್ಯದಲ್ಲಿ 4 ಲಕ್ಷ ಗಿಗ್‌ ಕಾರ್ಮಿಕರಿದ್ದಾರೆ ಎಂದು ಅಂದಾಜಿಸಲಾಗಿದೆ. ಅವರು ಶಾಸನಬದ್ಧ ಸೌಲಭ್ಯಗಳಿಂದ ವಂಚಿತರಾಗದಂತೆ ಅವರ ಜೀವನಮಟ್ಟವನ್ನು ಉತ್ತಮಪಡಿಸಲು ಕಾಯ್ದೆ ನೆರವಾಗಲಿದೆ. ಶೇ 90ರಷ್ಟು ಇರುವ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕೆ ಪೆಟ್ರೋಲ್‌, ಡೀಸೆಲ್‌ ಮೇಲೆ ಪ್ರತ್ಯೇಕ ಸೆಸ್‌ ಹಾಕುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದೇವೆ’ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಹೇಳಿದರು. 

ಕಲ್ಯಾಣ ಮಂಡಳಿ ರಚನೆ
ನಿಧಿ ಸಂಗ್ರಹಣೆ, ನಿರ್ವಹಣೆ, ಫಲಾನುಭವಿಗಳಿಗೆ ಮತ್ತು ಅವರ ಅವಲಂಬಿತರಿಗೆ ಸಾಮಾಜಿಕ ಭದ್ರತಾ ಸೌಲಭ್ಯಗಳ ‘ಕರ್ನಾಟಕ ಪ್ಲಾಟ್‌ ಫಾರ್ಮ್ ಆಧಾರಿತ ಗಿಗ್‌ ಕಾರ್ಮಿಕ ಕಲ್ಯಾಣ ಮಂಡಳಿ’ ಸ್ಥಾಪಿಸಲಾಗುತ್ತದೆ. ಈ ಮಂಡಳಿಗೆ ಕಾರ್ಮಿಕ ಸಚಿವರು ಅಧ್ಯಕ್ಷರಾಗಿರುತ್ತಾರೆ. ಆರು ಸದಸ್ಯರು, ಒಬ್ಬರು ಕಾರ್ಯದರ್ಶಿ ಇರುತ್ತಾರೆ. ನಾಮ ನಿರ್ದೇಶಿತ ಸದಸ್ಯರು ಮೂರು ವರ್ಷಗಳ ಅವಧಿ ಹೊಂದಿರುತ್ತಾರೆ. ಮಂಡಳಿ ಪ್ರತಿ ಮೂರು ತಿಂಗಳಿಗೆ ಒಮ್ಮೆ ಸಭೆ ನಡೆಸಬೇಕಿದೆ.

ವಿರೋಧ ಪಕ್ಷಗಳ ಸಲಹೆ

  • ಹೊರಗುತ್ತಿಗೆ ಕಾರ್ಮಿಕರನ್ನೂ ಕಾಯ್ದೆ ವ್ಯಾಪ್ತಿಗೆ ತರಬೇಕು

  • ಗಿಗ್‌ ಕಾರ್ಮಿಕರಿಗೂ ಇಎಸ್‌ಐ ಸೌಲಭ್ಯ ನೀಡಬೇಕು

  • ಸೇವಾ ಸಂಸ್ಥೆಗಳ ಜತೆಗೆ ಸರ್ಕಾರವೂ ವಂತಿಗೆ ನೀಡಬೇಕು

  • ಅತಿಯಾದ ನಿಯಂತ್ರಣಕ್ಕೆ ಅವಕಾಶ ಇರಬಾರದು

  • ಕರ್ನಾಟಕದಲ್ಲಿ ಕನ್ನಡಿಗರಿಗೆ ಹೆಚ್ಚಿನ ಅವಕಾಶ ಸಿಗಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.