ADVERTISEMENT

‘ಆಶಾಕಿರಣ’ ಯೋಜನೆಯಡಿ ನೇತ್ರ ತಪಾಸಣೆ: 24.50 ಲಕ್ಷ ಜನರಲ್ಲಿ ದೃಷ್ಟಿದೋಷ ಪತ್ತೆ

ವರುಣ ಹೆಗಡೆ
Published 26 ಫೆಬ್ರುವರಿ 2026, 23:31 IST
Last Updated 26 ಫೆಬ್ರುವರಿ 2026, 23:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ‘ಆಶಾ ಕಿರಣ’ ಯೋಜನೆಯಡಿ 1.40 ಕೋಟಿ ಮಂದಿಗೆ ಕಣ್ಣಿನ ತಪಾಸಣೆ ನಡೆಸಲಾಗಿದ್ದು, 24.50 ಲಕ್ಷ ಜನರಲ್ಲಿ ನೇತ್ರ ಸಮಸ್ಯೆ ದೃಢಪಟ್ಟಿದೆ. 

ಡಿಜಿಟಲ್ ಸಾಧನಗಳ ಅತಿಯಾದ ಬಳಕೆ, ವಾಯು ಮಾಲಿನ್ಯ ಸೇರಿ ವಿವಿಧ ಕಾರಣಗಳಿಂದ ಚಿಕ್ಕ ವಯಸ್ಸಿನಲ್ಲಿಯೇ ದೃಷ್ಟಿದೋಷ ಸಮಸ್ಯೆಗೆ ಒಳಪಡುವವರ ಸಂಖ್ಯೆ ರಾಜ್ಯದಲ್ಲಿ ಹೆಚ್ಚಳವಾಗುತ್ತಿದೆ. ಚಿಕಿತ್ಸೆ ವಿಳಂಬವಾದಲ್ಲಿ ಸಮಸ್ಯೆ ಗಂಭೀರ ಸ್ವರೂಪ ಪಡೆದು, ದೃಷ್ಟಿ ನಷ್ಟವಾಗುವ ಸಾಧ್ಯತೆಯಿರುತ್ತದೆ. ಆದ್ದರಿಂದ ಆರಂಭಿಕ ಹಂತದಲ್ಲಿಯೇ ನೇತ್ರ ಸಮಸ್ಯೆ ಪತ್ತೆ ಮಾಡಿ, ಚಿಕಿತ್ಸೆ ಒದಗಿಸುವ ಉದ್ದೇಶದಿಂದ ರಾಷ್ಟ್ರೀಯ ಅಂಧತ್ವ ಮತ್ತು ದೃಷ್ಟಿ ಮಾಂದ್ಯತೆ ನಿಯಂತ್ರಣ ಕಾರ್ಯಕ್ರಮದಡಿ ಈ ಯೋಜನೆಯನ್ನು 2022ರಲ್ಲಿ ಪ್ರಾರಂಭಿಸಲಾಗಿತ್ತು. ಮೊದಲೆರಡು ಹಂತದಲ್ಲಿ ಆ‌ಯ್ದ ಜಿಲ್ಲೆಗಳಲ್ಲಿ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ, ನೇತ್ರ ತಪಾಸಣೆ ನಡೆಸಿ ಸಮಸ್ಯೆ ಪತ್ತೆ ಮಾಡಿದ್ದರು. ಈಗ ರಾಜ್ಯದಾದ್ಯಂತ ‘ಆಶಾಕಿರಣ ದೃಷ್ಟಿ ಕೇಂದ್ರ’ಗಳಲ್ಲಿಯೂ ತಪಾಸಣೆ ನಡೆಸಲಾಗುತ್ತಿದೆ. 

ಮೊದಲ ಹಂತದಲ್ಲಿ ಚಿಕ್ಕಬಳ್ಳಾಪುರ, ಕಲಬುರಗಿ, ಹಾವೇರಿ ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಯೋಜನೆ ಜಾರಿಗೆ ತರಲಾಗಿತ್ತು. ಎರಡನೇ ಹಂತದಲ್ಲಿ ಚಿತ್ರದುರ್ಗ, ಮಂಡ್ಯ, ರಾಯಚೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ವಿಸ್ತರಿಸಿ, ನೇತ್ರ ತಪಾಸಣೆ ಮಾಡಲಾಗಿತ್ತು. 2025ರ ಜುಲೈನಲ್ಲಿ ಈ ಯೋಜನೆಯನ್ನು ಮರುವಿನ್ಯಾಸ ಮಾಡಿ, ಜಿಲ್ಲಾ ಆಸ್ಪತ್ರೆಗಳು, ತಾಲ್ಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ 393 ‘ಆಶಾಕಿರಣ ದೃಷ್ಟಿ ಕೇಂದ್ರ’ಗಳನ್ನು ಸ್ಥಾಪಿಸಲಾಗಿದೆ. 

ADVERTISEMENT

ಶಸ್ತ್ರಚಿಕಿತ್ಸೆ: ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಶಸ್ತ್ರಚಿಕಿತ್ಸೆಯನ್ನೂ ನಡೆಸಲಾಗುತ್ತಿದೆ. ಕಣ್ಣಿನ ಪೊರೆ ಸಮಸ್ಯೆ ದೃಢಪಟ್ಟಲ್ಲಿ ಉನ್ನತ ಆರೋಗ್ಯ ಕೇಂದ್ರಗಳಿಗೆ ಶಿಫಾರಸು ಮಾಡಲಾಗುತ್ತಿದ್ದು, ಅಲ್ಲಿ ಹೆಚ್ಚಿನ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಯೋಜನೆಯಡಿ ಈ ವರ್ಷ ಜನವರಿ ಅಂತ್ಯಕ್ಕೆ 4.19 ಲಕ್ಷ ಜನರಿಗೆ ಯಶಸ್ವಿಯಾಗಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಈ ಶಸ್ತ್ರಚಿಕಿತ್ಸೆಗಳಲ್ಲಿ 58,582 ಮಂದಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ಮಾಡಿದರೆ, ಉಳಿದವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. 

‘ಆಶಾಕಿರಣ ದೃಷ್ಟಿ ಕೇಂದ್ರಗಳಲ್ಲಿ ನೇತ್ರ ತಪಾಸಣೆ ನಡೆಸಿ, ಸಮಸ್ಯೆಯನ್ನು ಪತ್ತೆ ಮಾಡಲಾಗುತ್ತಿದೆ. ಸಮಸ್ಯೆ ಇರುವವರಿಗೆ ಚಿಕಿತ್ಸೆಯ ಜತೆಗೆ ಕನ್ನಡಕ ವಿತರಣೆಗೂ ಕ್ರಮವಹಿಸಲಾಗಿದೆ. ಆಸ್ಪತ್ರೆಗಳಲ್ಲಿ ಶಾಶ್ವತ ದೃಷ್ಟಿ ಕೇಂದ್ರಗಳನ್ನು ಸ್ಥಾಪಿಸಿರುವುದರಿಂದ, ಸಾರ್ವಜನಿಕರು ಹತ್ತಿರದ ಕೇಂದ್ರಗಳಿಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.  

ದಿನೇಶ್ ಗುಂಡೂರಾವ್
ಆಶಾಕಿರಣ ಯೋಜನೆಗೆ ವಿಶ್ವ ಆರೋಗ್ಯ ಸಂಸ್ಥೆ ಶ್ಲಾಘಿಸಿದೆ. ಕಣ್ಣಿನ ಆರೋಗ್ಯ ಸೇವೆ ಸುಲಭವಾಗಿ ದೊರೆಯಬೇಕೆಂಬ ಉದ್ದೇಶದಿಂದ ರಾಜ್ಯದಾದ್ಯಂತ ತಪಾಸಣಾ ಕೇಂದ್ರಗಳನ್ನು ತೆರೆಯಲಾಗಿದೆ
ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ
4.3 ಲಕ್ಷ ಜನರಿಗೆ ಕನ್ನಡಕ
ಯೋಜನೆಯಡಿ ದೃಷ್ಟಿ ಸಮಸ್ಯೆ ಎದುರಿಸುತ್ತಿರುವವರಿಗೆ ಉಚಿತವಾಗಿ ಕನ್ನಡಕಗಳನ್ನೂ ವಿತರಿಸಲಾಗುತ್ತಿದೆ. ತಪಾಸಣೆಗೆ ಒಳಪಟ್ಟವರಲ್ಲಿ 4.3 ಲಕ್ಷ ಜನರಿಗೆ ಕನ್ನಡಕ ನೀಡಲಾಗಿದೆ. ಆಶಾಕಿರಣ ದೃಷ್ಟಿ ಕೇಂದ್ರಗಳಲ್ಲಿ ನೇತ್ರಾಧಿಕಾರಿಗಳು ಪರಿಶೀಲಿಸಿ ಕನ್ನಡಕ ಒದಗಿಸುತ್ತಾರೆ.   ಮಕ್ಕಳಲ್ಲಿನ ದೃಷ್ಟಿ ಸಮಸ್ಯೆಗೆ ಸಂಬಂಧಿಸಿದಂತೆ ಇಲಾಖೆಯ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ (ಆರ್‌ಬಿಎಸ್‌ಕೆ) ತಪಾಸಣೆ ನಡೆಸಲಾಗುತ್ತಿದೆ. ಸಮಸ್ಯೆ ಪತ್ತೆಯಾದ ಮಕ್ಕಳಿಗೆ ಹೆಚ್ಚಿನ ನೇತ್ರ ತಪಾಸಣೆ ನಡೆಸಿ ಕನ್ನಡಕಗಳನ್ನೂ ವಿತರಿಸಲಾಗುತ್ತಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.