ಬೆಂಗಳೂರು: ‘ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮುಖ್ಯಮಂತ್ರಿಯವರಿಗೆ ಅತ್ಯಂತ ಆಪ್ತ. ಆದರೆ, ಅವರು ತಮ್ಮ ಇಲಾಖೆಗೆ ಅಗತ್ಯ ಪ್ರಮಾಣದಲ್ಲಿ ಅನುದಾನ ಪಡೆಯಲು ವಿಫಲರಾಗಿದ್ದಾರೆ. ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಶೇ 50 ರಷ್ಟೂ ಹಣ ಸಿಕ್ಕಿಲ್ಲ, ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಕೊರೆಸಲೂ ಹಣವಿಲ್ಲ’ ಎಂದು ವಿಧಾನಸಭೆಯಲ್ಲಿ ಬಿಜೆಪಿ– ಜೆಡಿಎಸ್ ಸದಸ್ಯರು ಮಹದೇವಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು.
ಪ್ರಶ್ನೋತ್ತರ ಅವಧಿಯಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುವ ಸಂದರ್ಭದಲ್ಲಿ ಸಚಿವರು ವಿರೋಧಪಕ್ಷಗಳ ಟೀಕೆಗೆ ಗುರಿಯಾದರು.
‘ಕಳೆದ ಎರಡು ವರ್ಷಗಳಲ್ಲಿ ಅಂಬೇಡ್ಕರ್ ನಿಗಮಕ್ಕೆ ಅನುದಾನ ಪ್ರಮಾಣ ತೀವ್ರ ಕುಸಿತವಾಗಿದೆ. 2022–23 ರಲ್ಲಿ ₹219.75 ಕೋಟಿ ಅನುದಾನ ನೀಡಿದ್ದರೆ, 2023–24 ರಲ್ಲಿ ₹124 ಕೋಟಿಗೆ ಇಳಿಸಲಾಗಿದೆ. ₹100 ಕೋಟಿ ಕಡಿತ ಮಾಡಲಾಗಿದೆ. ಮಹದೇವಪ್ಪ ಅವರಿಗೇ ಹಣ ಸಿಗುವುದಿಲ್ಲ, ಅವರು ಅಸಹಾಯಕರಾಗಿದ್ದರೆ ಎಂದರೆ ಉಳಿದವರ ಕಥೆ ಏನು’ ಎಂದು ಬಿಜೆಪಿಯ ವಿ.ಸುನಿಲ್‌ಕುಮಾರ್ ಪ್ರಶ್ನಿಸಿದರು.
ಬಿಜೆಪಿಯ ಡಾ.ಕೆ.ಚಂದ್ರು ಲಮಾಣಿ ಮಾತನಾಡಿ, ‘ತಾಂಡಾ ಅಭಿವೃದ್ಧಿ ನಿಗಮದಲ್ಲಿ ಗಂಗಾಕಲ್ಯಾಣ ಯೋಜನೆಯಡಿ ವರ್ಷಕ್ಕೆ ಒಂದು ಅಥವಾ ಎರಡು ಕೊಳವೆಬಾವಿಗಳನ್ನು ಕೊರೆಸಲಾಗುತ್ತಿದೆ. ಕೊಳವೆಬಾವಿಗಾಗಿ ಸಾವಿರಾರು ಅರ್ಜಿಗಳು ಬರುತ್ತವೆ. ಒಂದು ಅಥವಾ ಎರಡು ಕೊಳವೆಬಾವಿ ಕೊರೆಸುವುದರಿಂದ ಉಳಿದವರ ಅಸಮಾಧಾನಕ್ಕೆ ನಾವು ಗುರಿಯಾಗಬೇಕಾಗಿದೆ. ನಿತ್ಯವೂ ನಮ್ಮ ಮನೆ ಬಳಿ ಜನ ಬರುತ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೆಲವು ಕಾಂಗ್ರೆಸ್ ಸದಸ್ಯರು ಕೈ ಎತ್ತುವ ಮೂಲಕ ಇದಕ್ಕೆ ಸಹಮತ ವ್ಯಕ್ತಪಡಿಸಿದರು.
ಆಗ ಮಧ್ಯ ಪ್ರವೇಶಿಸಿ ಮಾತನಾಡಿದ ಬಸನಗೌಡ ಪಾಟೀಲ ಯತ್ನಾಳ ಅವರು, ‘ಶಿವನ ತಲೆಯ ಮೇಲೆ ಇರುವ ಗಂಗೆ ಕಾಂಗ್ರೆಸ್ ಸರ್ಕಾರದಲ್ಲಿ ನಾಪತ್ತೆಯಾಗಿದ್ದಾಳೆ. ಹೆಸರಿಗೆ ಮಹದೇವಪ್ಪ, ಆದರೆ ಗಂಗೆಯನ್ನೇ ನಾಪತ್ತೆ ಮಾಡಿದ್ದಾರೆ’ ಎಂದು ಕಾಲೆಳೆದರು.
‘ಮಹದೇವಪ್ಪನವರು ಮಲೆ ಮಹದೇಶ್ವರ ಕ್ಷೇತ್ರದ ಕಡೆಯಿಂದ ಬರುತ್ತಾರೆ. ಅವರ ತಲೆ ಮೇಲೆ ಗಂಗೆನೇ ಇಲ್ಲ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕರ್ಮ ತೊಳೆದುಕೊಳ್ಳಲು ಗಂಗೆಯಲ್ಲಿ ಮುಳುಗುಹಾಕಿ ಬಂದರು. ಆದರೆ, ಇಲ್ಲಿ ಬರಗಾಲ’ ಎಂದು ವಿರೋಧಪಕ್ಷದ ನಾಯಕ ಆರ್.ಅಶೋಕ ಕುಟುಕಿದರು.
ಎಲ್ಲ ಟೀಕೆಗಳನ್ನು ನಗುತ್ತಲೇ ಸ್ವೀಕರಿಸಿ ಮಾತನಾಡಿದ ಮಹದೇವಪ್ಪ, ಗಂಗಾಕಲ್ಯಾಣ ಯೋಜನೆಯ ಗುರಿ ಹೆಚ್ಚಿಸಬೇಕು ಎಂಬುದು ಎಲ್ಲ ಶಾಸಕರ ಬೇಡಿಕೆಯಾಗಿದೆ. ಹೀಗಾಗಿ ಪ್ರತಿಯೊಂದು ಕ್ಷೇತ್ರದಲ್ಲಿ ಹೆಚ್ಚು ಕೊಳವೆಬಾವಿಗಳನ್ನು ಕೊರೆಸಲು ಗುರಿ ನಿಗದಿ ಮಾಡಲಾಗುವುದು. ಗಂಗಾ ಕಲ್ಯಾಣ ಯೋಜನೆಗಾಗಿ 1991 ರಿಂದ ಇಲ್ಲಿಯವರೆಗೆ 70 ಸಾವಿರ ಎಕರೆ ಜಮೀನು ಖರೀದಿ ಮಾಡಿ ಯೋಜನೆ ಕಾರ್ಯಗತ ಮಾಡಲಾಗಿದೆ ಎಂದರು.
ಹಿಂದಿನ ಸರ್ಕಾರದ ಅವಧಿಯಲ್ಲಿ ಹಗರಣ ಆಗಿದ್ದರಿಂದ 18 ಸಾವಿರ ಕೊಳವೆಬಾವಿ ಕೊರೆಯುವುದನ್ನು ಸ್ಥಗಿತಗೊಳಿಸಲಾಗಿತ್ತು. ಅಷ್ಟೂ ಸಂಖ್ಯೆಯ ಕೊಳವೆಬಾವಿ ಕೊರೆಸಲು ಈಗ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮಹದೇವಪ್ಪ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.