ADVERTISEMENT

‘ಯಾರಿಗೆ ದಾಹ ಇದೆಯೋ, ಯಾರಿಗೆ ಬಾಯಾರಿಕೆ ಇದೆಯೋ’

ತರಾತುರಿಯಲ್ಲಿ ಮಾಡಲಾಗುವುದಿಲ್ಲ: ಕೃಷ್ಣಬೈರೇಗೌಡ

​ಪ್ರಜಾವಾಣಿ ವಾರ್ತೆ
Published 18 ಜುಲೈ 2019, 20:00 IST
Last Updated 18 ಜುಲೈ 2019, 20:00 IST
ಜೆ.ಸಿ.ಮಾಧುಸ್ವಾಮಿ ಮಾತನಾಡುತ್ತಿರುವುದು
ಜೆ.ಸಿ.ಮಾಧುಸ್ವಾಮಿ ಮಾತನಾಡುತ್ತಿರುವುದು   

ಬೆಂಗಳೂರು: ‘ನಾನು ಯಾರ ಒತ್ತಡಕ್ಕೂ ಮಣಿಯುವವನಲ್ಲ. ಯಾರಿಗೆ ದಾಹ ಇದೆಯೋ, ಯಾರಿಗೆ ಬಾಯಾರಿಕೆ ಇದೆಯೋ, ಆ ವಿಷಯ ನನಗೆ ಬೇಡ. ನಿಮ್ಮ ಒತ್ತಡಕ್ಕಾಗಲಿ, ಅವರ ಒತ್ತಡಕ್ಕಾಗಲಿ ಮಣಿಯುವುದಿಲ್ಲ’ ಎಂದು ವಿಧಾನ ಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ಸದಸ್ಯರ ಮೇಲೆ ಹರಿಹಾಯ್ದರು.

ವಿಶ್ವಾಸ ಮತ ನಿರ್ಣಯ ಮತಕ್ಕೆ ಹಾಕುವ ಪ್ರಕ್ರಿಯೆ ತಕ್ಷಣವೇ ಕೈಗೆತ್ತಿಕೊಳ್ಳಬೇಕು ಎಂದು ಬಿಜೆಪಿ ಸದಸ್ಯರು ಒತ್ತಾಯಿಸಿದರು. ಸಂವಿಧಾನಕ್ಕೆ ಸಂಬಂಧಿಸಿದಂತೆ ಶಾಸಕರ ಹಕ್ಕುಗಳ ಬಗ್ಗೆ ಸಾಕಷ್ಟು ವಿವರಣೆ ಬೇಕಾಗಿದೆ. ಯಾವುದನ್ನೂ ತರಾತುರಿಯಲ್ಲಿ ಮಾಡಲಾಗುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ರಮೇಶ್‌ ಕುಮಾರ್‌ ‘ಅಧಿಕಾರಕ್ಕಾಗಿ ಗುದ್ದಾಟ ನಡೆಸಿರುವವವರು ನೀವು. ಜನರ ಹಿತವನ್ನು ಗಮನದಲ್ಲಿಟ್ಟುಕೊಂಡು ಮಾತ್ರ ಕೆಲಸ ಮಾಡುತ್ತಿದ್ದೇನೆ’ ಎಂದು ತಿಳಿಸಿದರು.

ADVERTISEMENT

ಮಾಧುಸ್ವಾಮಿ– ಸಭಾಧ್ಯಕ್ಷ ಜಟಾಪಟಿ
‘ವಿಶ್ವಾಸಮತ’ ನಿರ್ಣಯವನ್ನು ಈಗಲೇ ಮತಕ್ಕೆ ಹಾಕಬೇಕು ಎಂದು ಬಿಜೆಪಿ ಶಾಸಕ ಜೆ.ಸಿ. ಮಾಧುಸ್ವಾಮಿ ಆಗ್ರಹಕ್ಕೆ ಮಣಿಯದ ಸಭಾಧ್ಯಕ್ಷ ರಮೇಶ್‌ಕುಮಾರ್‌ ಅವರು ‘ಸಾಧ್ಯವಿಲ್ಲ ಏನು ಮಾಡುತ್ತಿರೋ ಮಾಡಿಕೊಳ್ಳಿ’ ಎಂದು ಸಿಟ್ಟಿನಿಂದ ನುಡಿದರು.

‘ಮುಖ್ಯಮಂತ್ರಿಯವರು ವಿಶ್ವಾಸ ಮತಯಾಚಿಸಿದ್ದಾರೆ, ಆ ವಿಷಯಕ್ಕೆ ಸೀಮಿತವಾಗಿ ಕಲಾಪ ನಡೆಸಬೇಕು. ಆದರೆ ಅನಗತ್ಯವಾಗಿ ಕಾಲಹರಣ ಮಾಡಲಾಗುತ್ತಿದೆ. ಇದಕ್ಕೆ ಅವಕಾಶ ನೀಡಲಾಗಿದೆ. ಇದು ಗೌರವ ತರುವ ವಿಷಯವೇ’ ಎಂದು ಮಾಧುಸ್ವಾಮಿ ರೇಗಿದರು.

ಇದರಿಂದ ಮಾಧುಸ್ವಾಮಿ ಮತ್ತು ರಮೇಶ್‌ಕುಮಾರ್‌ ಮಧ್ಯೆ ಮಾತಿನ ಚಕಮಕಿ ನಡೆಯಿತು. ವಿಶ್ವಾಸ ಮತ ನಿರ್ಣಯವನ್ನು ಮತಕ್ಕೆ ಹಾಕಲೇಬೇಕು ಎಂದು ಮಾಧುಸ್ವಾಮಿ ಪದೇ ಪದೇ ಒತ್ತಾಯಿಸಿದಾಗ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರು ಗದ್ದಲ ಎಬ್ಬಿಸಿದರು.

‘ಆಗ ಸ್ಪೀಕರ್ ನಿಮಗೆ ಸಹಾಯ ಮಾಡುತ್ತಾರೆ ಎಂದು ಭಾವಿಸಿದ್ದೀರೆ’ ಎಂದು ಗದ್ದಲದ ಮಧ್ಯೆ ಕಾಂಗ್ರೆಸ್‌ ಶಾಸಕರನ್ನು ಉದ್ದೇಶಿಸಿ ಹೇಳಿದ್ದು, ದೋಸ್ತಿ ಸದಸ್ಯರನ್ನು ಇನ್ನಷ್ಟುಕೆರಳಿಸಿತು. ‘ಮಾಧುಸ್ವಾಮಿ ನೀವು ಹಿರಿಯ ಸದಸ್ಯರು, ಆದರೆ, ನೀವು ಹೇಳಿದಂತೆ ಕೇಳಲು ಸಾಧ್ಯವಿಲ್ಲ’ ಎಂದು ರಮೇಶ್‌ ಕುಮಾರ್‌ ಗದರಿದರು. ಗದ್ದಲ ಮತ್ತಷ್ಟು ಹೆಚ್ಚಾದಾಗ ಕಲಾಪವನ್ನು ಅರ್ಧಗಂಟೆ ಕಾಲ ಮುಂದೂಡಲಾಯಿತು.

ಬಳಿಕ ಸಭೆ ಸೇರಿದಾಗ ಕಾಂಗ್ರೆಸ್‌ ಸದಸ್ಯರು, ‘ಮಾಧುಸ್ವಾಮಿ ಪೀಠಕ್ಕೆ ಅಗೌರವ ತೋರಿದ್ದಾರೆ. ಕ್ಷಮೆ ಯಾಚಿಸಬೇಕು’ ಎಂದು ಪಟ್ಟು ಹಿಡಿದರು. ಆಗ ಮಧ್ಯ ಪ್ರವೇಶಿಸಿದ ರಮೇಶ್‌ಕುಮಾರ್‌, ‘ಮಾತಿನ ಭರದಲ್ಲಿ ಹಾಗೆ ಹೇಳಿರಬಹುದು, ವೈಯಕ್ತಿಕವಾಗಿ ಏನೂ ಅಲ್ಲ ಬಿಡಿ’ ಎಂದು ಸಮಾಧಾನಗೊಳಿಸಿದರು.

‘ಸಿಎಂಗೆ ಧೈರ್ಯ ಇಲ್ಲ’
ಸದನದಲ್ಲಿ ನಡೆಯುತ್ತಿರುವುದನ್ನು ರಾಜ್ಯದ ಜನತೆ ನೋಡುತ್ತಿದ್ದಾರೆ. ವಿಶ್ವಾಸ ಮತವನ್ನು ಕೇಳದೇ ಸುತ್ತು ಬಳಸಿ ಬೇರೆ ವಿಷಯ ಪ್ರಸ್ತಾಪ ಮಾಡುತ್ತಿರುವುದು ಅವರ ಗಮನಕ್ಕೆ ಬರುತ್ತದೆ. ವಿಶ್ವಾಸಮತ ಯಾಚಿಸುವ ಧೈರ್ಯ ತೋರಿಸುತ್ತಿಲ್ಲ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಇಲ್ಲಿಗಿಂತ ಜನರ ತೀರ್ಮಾನವೇ ಅಂತಿಮ ಆಗುತ್ತದೆ ಎಂದು ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.