ADVERTISEMENT

ರಾಜಕೀಯದಿಂದ ವಕೀಲರು ದೂರ, ಪ್ರಭುತ್ವಕ್ಕೆ ಮಾರಕ: ನಾಗಮೋಹನದಾಸ್ ಕಳವಳ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2023, 19:32 IST
Last Updated 11 ಮಾರ್ಚ್ 2023, 19:32 IST
ಸಮ್ಮೇಳನಕ್ಕೆ ನಿವೃತ್ತ ನ್ಯಾ. ಎಚ್.ಎನ್.ನಾಗಮೋಹನದಾಸ್ ಹಾಗೂ ನ್ಯಾ. ಬಿ.ವೀರಪ್ಪ ಅವರನ್ನು ಡೊಳ್ಳುಕುಣಿತದ ಮೂಲಕ ಸ್ವಾಗತಿಸಲಾಯಿತು
ಸಮ್ಮೇಳನಕ್ಕೆ ನಿವೃತ್ತ ನ್ಯಾ. ಎಚ್.ಎನ್.ನಾಗಮೋಹನದಾಸ್ ಹಾಗೂ ನ್ಯಾ. ಬಿ.ವೀರಪ್ಪ ಅವರನ್ನು ಡೊಳ್ಳುಕುಣಿತದ ಮೂಲಕ ಸ್ವಾಗತಿಸಲಾಯಿತು   

ಧಾರವಾಡ: ‘ವಕೀಲರು ರಾಜಕೀಯ ಕ್ಷೇತ್ರದಿಂದ ದೂರ ಸರಿದ ಪರಿಣಾಮ ಪ್ರಜಾಪ್ರಭುತ್ವ ಇಂದು ಗಂಡಾಂತರದಲ್ಲಿದೆ’ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಕಳವಳ ವ್ಯಕ್ತಪಡಿಸಿದರು.

ಅಖಿಲ ಭಾರತ ವಕೀಲರ ಒಕ್ಕೂಟವು ನಗರದಲ್ಲಿ ಶನಿವಾರ ಆಯೋಜಿಸಿದ್ದ 9ನೇ ಕರ್ನಾಟಕ ರಾಜ್ಯ ಸಮ್ಮೇಳನದಲ್ಲಿ ಮಾತನಾಡಿದರು.

‘ಸ್ವಾತಂತ್ರ್ಯಾನಂತರದ ವರ್ಷಗಳಲ್ಲಿ ಹಲವು ವಕೀಲರು ಸಕ್ರಿಯ ರಾಜಕಾರಣದಲ್ಲಿದ್ದರು. ರಾಜ್ಯದಲ್ಲಿ 14 ಜನ ಕಾನೂನು ಪದವೀಧರರು ಮುಖ್ಯಮಂತ್ರಿ ಹುದ್ದೆಗೇರಿದವರು. ಆದರೆ ಇಂದು ವಿಧಾನಸಭೆ ಹಾಗೂ ಸಂಸತ್ತಿಗೆ ಆಯ್ಕೆಯಾಗುತ್ತಿರುವವರನ್ನು ನೋಡಿದರೆ ಆತಂಕವಾಗುತ್ತದೆ’ ಎಂದರು.

ADVERTISEMENT

‘ಕೋಟ್ಯಧಿಪತಿಗಳು, ಕ್ರಿಮಿನಲ್ ಮೊಕದ್ದಮೆ ಉಳ್ಳವರು. ರಿಯಲ್‌ ಎಸ್ಟೇಟ್‌ ಹಾಗೂ ಇನ್ನಿತರ ಮಾಫಿಯಾದಲ್ಲಿದ್ದವರೇ ಜನಪ್ರತಿನಿಧಿಗಳಾಗಿದ್ದಾರೆ. ಇದರಿಂದಾಗಿ ಚರ್ಚೆಗಳೇ ನಡೆಯದೇ ಮಸೂದೆಗಳು ಅನುಮೋದನೆಗೊಳ್ಳುತ್ತಿವೆ. ಇದಲ್ಲದೇ, ಸಂವಿಧಾನ ಬದಲಿಸುವ ಬಗ್ಗೆ ಮಾತನಾಡುವವರು ಹಾಗೂ ಸಂವಿಧಾನ ಪುಸ್ತಕವನ್ನು ಸುಡುವವರು ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ’ ಎಂದು ಬೇಸರಿಸಿದರು.

ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಬಿ.ವೀರಪ್ಪ ಮಾತನಾಡಿ, ‘ವಕೀಲರ ಸಂಘಗಳು ಪ್ರಾಮಾಣಿಕ ನ್ಯಾಯಾಧೀಶರ ಬೆನ್ನಿಗೆ ಸದಾ ನಿಲ್ಲಬೇಕು. ಹಾಗೆಯೇ ಭ್ರಷ್ಟ ನ್ಯಾಯಾಧೀಶರನ್ನು ಎಂದಿಗೂ ಸಹಿಸಿಕೊಳ್ಳಬಾರದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.