ADVERTISEMENT

ಶಾ ಅವರೇ, ಬರುವಾಗ ರಾಜ್ಯದ ಪಾಲು ₹12 ಸಾವಿರ ಕೋಟಿ ತರುವಿರಾ –ಕಾಂಗ್ರೆಸ್ ಪ್ರಶ್ನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಮಾರ್ಚ್ 2022, 16:10 IST
Last Updated 30 ಮಾರ್ಚ್ 2022, 16:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ಬೆಂಗಳೂರು: ಅಮಿತ್ ಶಾ ಅವರೇ, ನಾಳೆ (ಗುರುವಾರ) ರಾಜ್ಯಕ್ಕೆ ಭೇಟಿ ನೀಡುವ ವೇಳೆ ಕರ್ನಾಟಕಕ್ಕೆ ನೀಡಬೇಕಾದ ₹12 ಸಾವಿರ ಕೋಟಿ ಬಾಕಿ ಹಣವನ್ನು ತರುವಿರಾ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಅಮಿತ್ ಶಾ ಅವರೇ, ಕರ್ನಾಟಕಕ್ಕೆ ₹12 ಸಾವಿರ ಕೋಟಿ ಕೇಂದ್ರದ ಪಾಲು ಬಾಕಿ ಇದೆ ಎಂದು ಮೊನ್ನೆಯಷ್ಟೇ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ. ನಾಳೆ ನೀವು ರಾಜ್ಯಕ್ಕೆ ಬರುವಾಗ ಬಾಕಿ ಉಳಿದ ₹12 ಸಾವಿರ ಕೋಟಿಯನ್ನು ತರುವಿರಾ? ಕಳೆದ ಮೂರು ವರ್ಷಗಳ ಕೇಂದ್ರದ ನೆರೆ ಪರಿಹಾರದ ಮೊತ್ತ ಬಾಕಿ ಉಳಿದಿದೆ ಅದನ್ನೂ ತರುತ್ತಿರುವಿರಾ ಎಂದು ಕಾಂಗ್ರೆಸ್ ಕಿಡಿಕಾರಿದೆ.

ಕರ್ನಾಟಕಕ್ಕೆ ಆಗಮಿಸುತ್ತಿರುವ ಗೃಹ ಸಚಿವ ಅಮಿತ್ ಶಾ ಅವರು ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿ ಪಕ್ಷ ರಾಜ್ಯದ ಜನತೆಗೆ ಎಸಗಿದ ಮೋಸಕ್ಕೆ ಉತ್ತರ ನೀಡಲಿ. ಗೃಹ ಸಚಿವರು ಕರ್ನಾಟಕಕ್ಕೆ ಆಗಿರುವ ಅನ್ಯಾಯ ಸರಿಪಡಿಸಲು ಬರುತ್ತಿರುವುದೋ ಅಥವಾ ರಾಜ್ಯದಲ್ಲಿ ಹಚ್ಚಿದ ಬೆಂಕಿಗೆ ತುಪ್ಪ ಸುರಿಯಲು ಬರುತ್ತಿರುವುದೋ’ ಎಂದು ಕಾಂಗ್ರೆಸ್ ಟೀಕಿಸಿದೆ.

ADVERTISEMENT

'ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇದೇ 31ಕ್ಕೆ (ಗುರುವಾರ) ರಾತ್ರಿ 10.30ಕ್ಕೆ ಬೆಂಗಳೂರಿಗೆ ಬರಲಿದ್ದಾರೆ. ಮರುದಿನ ಬೆಳಿಗ್ಗೆ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.