ADVERTISEMENT

ಜನೋತ್ಸವಕ್ಕೆ ತಿರುಗೇಟು: ‘ಕೈ’ ಜನಜಾಗೃತಿ

ಬಿಜೆಪಿ ಸರ್ಕಾರದಿಂದ ‘ಶೇ 90ರಷ್ಟು ವಚನ ವಂಚನೆ’– ಕಾಂಗ್ರೆಸ್‌ ಅಭಿಯಾನ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2022, 19:32 IST
Last Updated 29 ಆಗಸ್ಟ್ 2022, 19:32 IST
ಕಾಂಗ್ರೆಸ್‌ ಜನಜಾಗೃತಿ ಅಭಿಯಾನದ ಭಿತ್ತಿಪತ್ರವನ್ನು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌, ರಣದೀಪ್‌ ಸಿಂಗ್‌ ಸುರ್ಜೇವಾಲ ಮತ್ತು ಎಂ.ಬಿ. ಪಾಟೀಲ ಬಿಡುಗಡೆ ಮಾಡಿದರು – ಪ್ರಜಾವಾಣಿ ಚಿತ್ರ
ಕಾಂಗ್ರೆಸ್‌ ಜನಜಾಗೃತಿ ಅಭಿಯಾನದ ಭಿತ್ತಿಪತ್ರವನ್ನು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌, ರಣದೀಪ್‌ ಸಿಂಗ್‌ ಸುರ್ಜೇವಾಲ ಮತ್ತು ಎಂ.ಬಿ. ಪಾಟೀಲ ಬಿಡುಗಡೆ ಮಾಡಿದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ಬಿಜೆಪಿ ಸರ್ಕಾರದ ಜನೋತ್ಸವದ ವಿರುದ್ಧ ಕಾಂಗ್ರೆಸ್‌ ಜನಜಾಗೃತಿ ಅಭಿಯಾನ ಆರಂಭಿಸಿದೆ. ಭರವಸೆಗಳನ್ನು ಈಡೇರಿಸದ ಬಿಜೆಪಿ ಸರ್ಕಾರ ‘ಶೇ 90ರಷ್ಟು ವಚನ ವಂಚನೆ’ ಎಸಗಿದೆ ಎಂದು ಆರೋಪಿಸಿ ಜನರ ಬಳಿಗೆ ತೆರಳಲು ‘ಕೈ’ ನಾಯಕರು ನಿರ್ಧರಿಸಿದ್ದಾರೆ.

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಈ ಅಭಿಯಾನಕ್ಕೆ ಚಾಲನೆ ನೀಡಿದರು.

ಬಳಿಕ ಸುರ್ಜೇವಾಲಾ ಅವರು, ‘ಬಿಜೆಪಿ ಸರ್ಕಾರ ಜನರಿಗೆ ದ್ರೋಹ ಬಗೆದಿದ್ದು, ಕೊಟ್ಟ ವಚನ ಈಡೇರಿಸಿಲ್ಲ. ಹೀಗಾಗಿ, ನಾವು ‘ಬಿಜೆಪಿ, ನಿಮ್ಮ ಹತ್ತಿರ ಇದೆಯಾ ಉತ್ತರ’ ಎಂಬ ಅಭಿಯಾನ ಕೈಗೊಂಡಿದ್ದೇವೆ’ ಎಂದರು.

ADVERTISEMENT

‘ಬಿಜೆಪಿ ಕಳೆದ ಚುನಾವಣೆ ಸಂದರ್ಭದಲ್ಲಿ ರಾಜ್ಯದ ಜನರಿಗೆ 600ಕ್ಕೂ ಹೆಚ್ಚು ಭರವಸೆ ನೀಡಿತ್ತು. ಆದರೆ, ಅವರು ಶೇ 90ರಷ್ಟನ್ನೂ ಈಡೇರಿಸಿಲ್ಲ. ಆ ಮೂಲಕ,‌ ವಚನಭ್ರಷ್ಟವಾಗಿದೆ’ ಎಂದು ದೂರಿದರು.

‘ತನ್ನ ಆಡಳಿತ ಅವಧಿಯಲ್ಲಿ ಮಠಗಳಿಂದ ಶೇ 30ರಷ್ಟು, ಗುತ್ತಿಗೆದಾರರಿಂದ ಶೇ 40, ಪಕ್ಷದ ಕಾರ್ಯಕರ್ತರಿಂದ ಶೇ 60ರಷ್ಟು ಕಮಿಷನ್ ಪಡೆದಿರುವುದೇ ಈ ಸರ್ಕಾರದ ಸಾಧನೆ. ಇದು ಬಿಜೆಪಿಯ ಭ್ರಷ್ಟ ಹಾಗೂ ದುರಾಡಳಿತದ ಕೊಡುಗೆ. ರಾಜ್ಯ ರಾಜಕಾರಣದ ಇತಿಹಾಸ
ದಲ್ಲೇ ಬೊಮ್ಮಾಯಿ ಅತ್ಯಂತ ಬಲಹೀನ ಮುಖ್ಯಮಂತ್ರಿ’ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಮಾತನಾಡಿ, ‘2013ರ ಚುನಾವಣೆ ವೇಳೆ ನಾವು ನೀಡಿದ್ದ 165 ಭರವಸೆಗಳಲ್ಲಿ 158 ಈಡೇರಿಸಿದ್ದೆವು. ಬಿಜೆಪಿಯವರು 2018ರ ಚುನಾವಣೆ ವೇಳೆ ಸುಮಾರು 600 ಭರವಸೆಗಳನ್ನು ನೀಡಿದ್ದರು. ಅಧಿಕಾರಕ್ಕೆ ಬಂದು ಮೂರು ವರ್ಷಗಳ ನಂತರ ಎಷ್ಟು ವಚನ
ಗಳನ್ನು ಈಡೇರಿಸಿದ್ದಾರೆ ಎಂಬುದನ್ನು ಜನರೇ ಅರ್ಥ ಮಾಡಿಕೊಳ್ಳಬೇಕು’ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ‘ಕಳೆದ ಚುನಾವಣೆಯ ಬಿಜೆಪಿ ಪ್ರಣಾಳಿಕೆಯನ್ನು ನಾವು ಜನರ ಮುಂದಿಡುತ್ತಿದ್ದೇವೆ. ವಚನ ವಂಚನೆ ಕುರಿತು ಕಾಂಗ್ರೆಸ್ ಪಕ್ಷ ಇಂದಿನಿಂದ ಸರ್ಕಾರಕ್ಕೆ ಪ್ರಶ್ನೆ ಕೇಳುತ್ತಿದ್ದು, ಕೊಟ್ಟ ವಚನ ಉಳಿಸಿಕೊಂಡಿದ್ದೀರಾ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಕೇಳುತ್ತೇವೆ’ ಎಂದರು.

ಎಐಸಿಸಿ ಕಾರ್ಯದರ್ಶಿಗಳಾದ ಅಭಿಷೇಕ್ ದತ್, ಮಯೂರ್ ಜಯಕುಮಾರ್, ವಿಷ್ಣುನಾಥನ್, ರೋಜಿ ಎಂ.ಜಾನ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ, ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಈಶ್ವರ್ ಖಂಡ್ರೆ, ಸಲೀಂ ಅಹ್ಮದ್, ಆರ್‌. ಧ್ರುವನಾರಾಯಣ್, ಸತೀಶ ಜಾರಕಿಹೊಳಿ, ಕೆಪಿಸಿಸಿ ಸಂವಹನ ಮತ್ತು ಸಾಮಾಜಿಕ ಜಾಲತಾಣ ಘಟಕದ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.