ADVERTISEMENT

ವಿಧಾನಮಂಡಲದ ಅಧಿವೇಶನ ಇಂದಿನಿಂದ: ಚರ್ಚೆಯ ಮಳೆಯೋ ಕಲಹದ ಹೊಳೆಯೋ?

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 16:16 IST
Last Updated 10 ಆಗಸ್ಟ್ 2025, 16:16 IST
   

ಬೆಂಗಳೂರು: ಸೋಮವಾರದಿಂದ (ಆ.11) ಆರಂಭವಾಗಲಿರುವ ವಿಧಾನಮಂಡಲದ ಅಧಿವೇಶನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಅಣಿಯಾಗಿದ್ದರೆ, ಸಚಿವರು–ಶಾಸಕರ ಸರಣಿ ಸಭೆ ನಡೆಸಿ, ಅತೃಪ್ತಿಯನ್ನು ಸಮಾಧಾನ ಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವಿರೋಧ ಪಕ್ಷವನ್ನು ಕಟ್ಟಿಹಾಕುವ ತಂತ್ರ ಹೆಣೆದಿದ್ದಾರೆ.

ಜುಲೈನಲ್ಲಿ ನಡೆಯಬೇಕಿದ್ದ ಅಧಿವೇಶನ ತಡವಾಗಿ ಆರಂಭವಾಗುತ್ತಿದ್ದು, ಒಟ್ಟು 9 ದಿನ ಕಲಾಪ ನಡೆಯಲಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ–ಜೆಡಿಎಸ್‌ ಮೈತ್ರಿ ಕೂಟಗಳು ಪರಸ್ಪರ ‘ಅಸ್ತ್ರ’ ಗಳನ್ನು ಹರಿತ ಮಾಡಿಕೊಂಡಿವೆ. 

ಆರ್‌ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತದ ದುರಂತ, ಮುಂಗಾರು ಹಂಗಾಮಿಗೆ ರಸಗೊಬ್ಬರ ಕೊರತೆ, ಅತಿವೃಷ್ಟಿಯಿಂದ ಕೆಲವೆಡೆ ಆಗಿರುವ ತೊಂದರೆ, ಶಾಸಕರ ಅನುದಾನ ಹಂಚಿಕೆಯಲ್ಲಿ ತಾರತಮ್ಯ, ಕಾನೂನು ಮತ್ತು ಸುವ್ಯವಸ್ಥೆ ವಿಷಯಗಳನ್ನು ಪ್ರಸ್ತಾಪಿಸಲು ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ಗಳು ತಯಾರಿ ಮಾಡಿಕೊಂಡಿವೆ.

ADVERTISEMENT

ಇದಕ್ಕೆ, ಪ್ರತಿಯಾಗಿ ಲೋಕಸಭೆ ಚುನಾವಣೆಯಲ್ಲಿ ಮತ ಕಳವು ಆರೋಪ, ಅನುದಾನ ನೀಡಿಕೆಯಲ್ಲಿ ಕೇಂದ್ರದ ತಾರತಮ್ಯ, ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾ ಪಂಚಾಯಿತಿಯ ಚಾಲಕರೊಬ್ಬರು ಬಿಜೆಪಿ ಸಂಸದ ಸುಧಾಕರ್ ಹೆಸರು ಉಲ್ಲೇಖಿಸಿ ಆತ್ಮಹತ್ಯೆ ಮಾಡಿಕೊಂಡಿರುವುದು, ರೌಡಿ ಶೀಟರ್ ಹತ್ಯೆ ಪ್ರಕರಣದಲ್ಲಿ ಕೆ.ಆರ್. ಪುರ ಶಾಸಕ ಬೈರತಿ ಬಸವರಾಜ ಹೆಸರು ಪ್ರಸ್ತಾಪ ಮತ್ತಿತರ ವಿಷಯವನ್ನು ಮುಂದು ಮಾಡಿ, ವಿರೋಧ ಪಕ್ಷಗಳ ಬಾಯಿ ಮುಚ್ಚಿಸುವ ಸಿದ್ಧತೆಯನ್ನು ಆಡಳಿತ ಕಾಂಗ್ರೆಸ್ ನಡೆಸಿದೆ.

ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ ಘಟನೆ ನಿಲುವಳಿ ರೂಪದಲ್ಲಿ ಪ್ರಸ್ತಾಪವಾಗಲಿದೆ. ಈ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹ ನೇತೃತ್ವದ ಆಯೋಗ ತನಿಖೆ ನಡೆಸಿದ್ದು, ಅದರ ವರದಿ ಪಡೆದಿರುವ ಸರ್ಕಾರ, ಘಟನೆಗೆ ಕಾರಣಕರ್ತರ ವಿರುದ್ಧ ಕ್ರಮ ಜರುಗಿಸಿದೆ. ಈ ವಿಚಾರವಾಗಿ ಆಡಳಿತ ಮತ್ತು ವಿರೋಧ ಪಕ್ಷಗಳ ಮಧ್ಯೆ ಜಟಾಪಟಿ ನಡೆಯಲಿದೆ.

ರಾಜ್ಯದಲ್ಲಿ ರಸಗೊಬ್ಬರ ಕೊರತೆ ಮತ್ತು ಅತಿವೃಷ್ಟಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಬಿಜೆಪಿ– ಜೆಡಿಎಸ್‌ ಸದಸ್ಯರು ಪ್ರಸ್ತಾಪಿಸಲಿದ್ದಾರೆ. ಆದರೆ, ಕೇಂದ್ರ ಸರ್ಕಾರ ರಾಜ್ಯಕ್ಕೆ ಅಗತ್ಯವಿರುವಷ್ಟು ರಸಗೊಬ್ಬರವನ್ನು ಪೂರೈಸುತ್ತಿಲ್ಲ ಎಂದು ಕಾಂಗ್ರೆಸ್‌ ತಿರುಗೇಟು ನೀಡಲು ಸಿದ್ದತೆ ನಡೆಸಿಕೊಂಡಿದೆ. ಇಬ್ಬರೂ ಅಂಕಿ–ಅಂಶಗಳನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುವ ಸಂಭವ ಹೆಚ್ಚಾಗಿದೆ.

ಶಾಸಕರಿಗೆ ತಲಾ ₹50 ಕೋಟಿ ವಿಶೇಷ ಅನುದಾನ ಹಂಚಿಕೆ ಮಾಡಿ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ. ಇದು ಆಡಳಿತ ಪಕ್ಷದ ಶಾಸಕರಿಗೆ ಮಾತ್ರ ಎಂದು ಆಪಾದಿಸಿರುವ ವಿರೋಧ ಪಕ್ಷ, ಅನುದಾನ ತಾರತಮ್ಯವನ್ನು ಮುಂದಿಟ್ಟು ಹೋರಾಟ ನಡೆಸಲು ನಿಶ್ಚಯಿಸಿದೆ.

ಒಳಮೀಸಲಾತಿ ಕುರಿತು ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್‌ದಾಸ್‌ ಆಯೋಗ ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಬಹಿರಂಗಪಡಿಸುವಂತೆ ಆಡಳಿತ ಮತ್ತು ವಿರೋಧ ಪಕ್ಷದ ಶಾಸಕರು ಒತ್ತಾಯಿಸುವ ಸಾಧ್ಯತೆ ಇದೆ. ಈ ಬಗ್ಗೆ ಇದೇ 16 ರಂದು ವಿಶೇಷ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಿದ್ದು, ಆ ಬಳಿಕ ಸರ್ಕಾರ ಸದನದಲ್ಲಿ ಹೇಳಿಕೆ ನೀಡುವ ಸಾಧ್ಯತೆ ಇದೆ.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನೌಕರರ ಮುಷ್ಕರ ಮತ್ತು ಅವರ ಬೇಡಿಕೆಗಳು, ಗ್ರೇಟರ್‌ ಬೆಂಗಳೂರು ಅಡಿ ಬೆಂಗಳೂರು ವಿಭಜನೆ ಮತ್ತು ಬ್ರ್ಯಾಂಡ್‌ ಬೆಂಗಳೂರು ವಿಚಾರವಾಗಿಯೂ ಬಿಜೆಪಿ ಮತ್ತು ಕಾಂಗ್ರೆಸ್‌ ಸದಸ್ಯರ ಮಧ್ಯೆ ಬಿರುಸಿನ ಚರ್ಚೆ ನಡೆಯುವ ಸಂಭವ ಇದೆ.

ರಾಜ್ಯ ಹಲವು ಕಡೆಗಳಲ್ಲಿ ನಡೆದಿರುವ ಹತ್ಯೆಗಳ ಕುರಿತು ಪ್ರಸ್ತಾಪಿಸಲು ಬಿಜೆಪಿ ತಯಾರಿ ನಡೆಸಿದೆ. ಮಂಗಳೂರಿನಲ್ಲಿ ಮೇ ತಿಂಗಳಿನಲ್ಲಿ ನಡೆದ ಕೋಮು ವೈಷಮ್ಯದ ಹತ್ಯೆಗಳು, ಕೊಪ್ಪಳ ಮತ್ತು ಕೊರಟಗೆರೆಯಲ್ಲಿ ನಡೆದ ಕೊಲೆಗಳು ಮತ್ತು ಬೆಂಗಳೂರಿನಲ್ಲಿ ಬಾಲಕನನ್ನು ಹಣಕ್ಕಾಗಿ ಅಪಹರಿಸಿ ಹತ್ಯೆಗೈದ ಪ್ರಕರಣಗಳು ಪ್ರಸ್ತಾಪವಾಗಲಿದೆ. ಧರ್ಮಸ್ಥಳ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ ರಚನೆ, ಆ ಗ್ರಾಮದ ಸುತ್ತಮುತ್ತ ಹೂತ ಶವಗಳಿವೆ ಎಂದು ಆಪಾದಿಸಲಾದ ಪ್ರಕರಣದಲ್ಲಿ ನಡೆಯುತ್ತಿರುವ ಉತ್ಖನನ ಮತ್ತು ಶೋಧದ ವಿಚಾರವೂ ಪ್ರಸ್ತಾಪವಾಗುವ ಸಾಧ್ಯತೆ ಇದೆ. 

ಅಲ್ಲದೇ, ಕಳೆದ ಅಧಿವೇಶನದ ಕಲಾಪದ ವೇಳೆ ಅಮಾನತ್ತಿಗೆ ಒಳಗಾಗಿದ್ದ 18 ಶಾಸಕರ ಅಮಾನತು ರದ್ದು ಕ್ರಮವನ್ನು ಸಭಾಧ್ಯಕ್ಷರು ಸೋಮವಾರವೇ ಪ್ರಕಟಿಸಲಿದ್ದಾರೆ. ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗುವುದು.

ಈ ಬಾರಿ 17 ಮಸೂದೆಗಳ ಮಂಡನೆ
ದೇವದಾಸಿ ಪದ್ಧತಿ ನಿರ್ಮೂಲನೆ, ಸೌಹಾರ್ದ ಸಹಕಾರಿ ತಿದ್ದುಪಡಿ, ಅಂತರ್ಜಲ ಬಳಕೆ ನಿಯಂತ್ರಣದ ಮಸೂದೆಯೂ ಸೇರಿ 17 ಮಸೂದೆಗಳನ್ನು ಅಧಿವೇಶನದಲ್ಲಿ ಮಂಡಿಸಲಾಗುವುದು.

ಪ್ರಮುಖ ಮಸೂದೆಗಳು:

  • ಕರ್ನಾಟಕ ದೇವದಾಸಿ ಪದ್ಧತಿ (ತಡೆಗಟ್ಟುವಿಕೆ, ನಿಷೇಧ, ಪರಿಹಾರ ಮತ್ತು ಪುನರ್ವಸತಿ) ಮಸೂದೆ 2025

  • ಕರ್ನಾಟಕ ಸೌಹಾರ್ದ ಸಹಕಾರಿ(ತಿದ್ದುಪಡಿ)ಮಸೂದೆ 2025

  • ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆ, ನಿಯಂತ್ರಣ) (ತಿದ್ದುಪಡಿ) ಮಸೂದೆ–2025

  • ಕರ್ನಾಟಕ ಪ್ರವಾಸೋದ್ಯಮ ವ್ಯಾಪಾರ (ಅನುಕೂಲ ಮತ್ತು ನಿಯಂತ್ರಣ)(ತಿದ್ದುಪಡಿ) ಮಸೂದೆ 2025

  • ಕರ್ನಾಟಕ ಪುರಸಭೆಗಳ ಹಾಗೂ ಇತರೆ ಕಾನೂನುಗಳ(ತಿದ್ದುಪಡಿ) ಮಸೂದೆ 2025

  • ಕರ್ನಾಟಕ ಬಂದರು(ಲ್ಯಾಂಡಿಂಗ್‌ ಮತ್ತು ಶಿಪ್ಪಿಂಗ್ ಫೀಸ್)(ತಿದ್ದುಪಡಿ) ಮಸೂದೆ 2025

  • ಕರ್ನಾಟಕ ಸರ್ಕಾರಿ ವ್ಯಾಜ್ಯ ನಿರ್ವಹಣೆ (ತಿದ್ದುಪಡಿ) ಮಸೂದೆ 2025

  • ಕರ್ನಾಟಕ ಭೂ ಸುಧಾರಣೆಗಳು ಮತ್ತು ಇತರೆ ಕಾನೂನು(ತಿದ್ದುಪಡಿ) ಮಸೂದೆ 2025

ಸರ್ಕಾರಕ್ಕೆ 2 ವರ್ಷ ತುಂಬಿದ್ದು, ರಾಜ್ಯದಲ್ಲಿ ಇನ್ನೂ ರಸ್ತೆ ಗುಂಡಿಗಳನ್ನು ಮುಚ್ಚಿಲ್ಲ. ಔಷಧಗಳ ಕೊರತೆ ಇದೆ. ಶೇ 60 ಕಮಿಷನ್‌ ವಸೂಲಿಗೆ ರಾಜ್ಯದ ಎಲ್ಲೆಡೆ ಚೆಕ್‌ಪೋಸ್ಟ್‌ ಸ್ಥಾಪಿಸಲಾಗಿದೆ.
–ಆರ್‌.ಅಶೋಕ, ವಿರೋಧಪಕ್ಷದ ನಾಯಕ
ಶಾಸಕರ ಅನುದಾನ ನೀಡಿಕೆಯಲ್ಲಿ ತಾರತಮ್ಯ ಆಗಿದೆ. ರಸಗೊಬ್ಬರ ಸಮಸ್ಯೆ, ಕಾಲ್ತುಳಿತ ಹಾಗೂ ಬೆಲೆ ಏರಿಕೆಯ ಬಗ್ಗೆ ಚರ್ಚೆ ಮಾಡುತ್ತೇವೆ.
–ಸುರೇಶ್‌ ಬಾಬು, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.