ADVERTISEMENT

ಹೇಳಿದ್ದು ₹50 ಸಾವಿರ ಕೋಟಿ, ಕೊಟ್ಟಿದ್ದು ₹8 ಸಾವಿರ ಕೋಟಿ: ಎಚ್‌ಡಿಕೆ ಕಿಡಿ

ಚುನಾವಣೆಗಾಗಿ ಮೇಕೆದಾಟು ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2021, 1:43 IST
Last Updated 23 ಡಿಸೆಂಬರ್ 2021, 1:43 IST
   

ಬೆಳಗಾವಿ: ‘ಕಾಂಗ್ರೆಸ್‌ ನಡಿಗೆ ಕೃಷ್ಣೆಯ ಕಡೆಗೆ’ ಎಂದು ಪಾದಯಾತ್ರೆ ಮಾಡಿ ಪ್ರತಿ ವರ್ಷ ₹10 ಸಾವಿರ ಕೋಟಿ ನೀಡುವುದಾಗಿ ಹೇಳಿದ್ದ ಕಾಂಗ್ರೆಸ್‌ ಸರ್ಕಾರ, ಐದು ವರ್ಷಗಳಲ್ಲಿ ₹8,076 ಕೋಟಿ ಕೊಟ್ಟರು. ಈಗ ಚುನಾವಣೆಗಾಗಿ ‘ಮೇಕೆದಾಟು ಪಾದಯಾತ್ರೆ’ ಆರಂಭಿಸಿದ್ದಾರೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ವಿಧಾನಸಭೆಯಲ್ಲಿ ಹರಿಹಾಯ್ದರು.

ಅವರು, ನಿಯಮ 69 ರಡಿ (ರಾಜ್ಯದಲ್ಲಿ ನನೆಗುದಿಗೆ ಬಿದ್ದಿರುವ ಕೃಷ್ಣಾ ಮೇಲ್ದಂಡೆ, ಮಹದಾಯಿ ತಿರುವು, ಕಾರಂಜಾ ಯೋಜನೆ, ಸಿಂಗಟಾಲೂರು ಏತ ನೀರಾವರಿ ಯೋಜನೆಗಳ ಅನುಷ್ಠಾನ) ಚರ್ಚೆಯಲ್ಲಿ ಮಾತನಾಡಿದರು.

ಕೃಷ್ಣಾ ಮೇಲ್ದಂಡೆಯ ಮೂರನೇ ಹಂತದ ಯೋಜನೆಗೆ ಈವರೆಗೆ ಎಲ್ಲ ಸರ್ಕಾರಗಳು ಸೇರಿ ₹13,320 ಕೋಟಿ ಮಾತ್ರ ಖರ್ಚು ಮಾಡಿವೆ. 1.34 ಲಕ್ಷ ಎಕರೆ ಭೂಮಿ ಸ್ವಾಧೀನ ಆಗಬೇಕಾಗಿದೆ. ಈ ದಿಸೆಯಲ್ಲಿ ಪ್ರಗತಿಯೇ ಆಗಿಲ್ಲ ಎಂದರು.

ADVERTISEMENT

ಯೋಜನೆಯ ಮುಖ್ಯ ನಾಲೆಗಳು ಆಗಿವೆ, ವಿತರಣಾ ನಾಲೆಗಳು ಆಗಿಲ್ಲ. ಇದರಿಂದ ಹೊಲಗಳಿಗೆ ನೀರು ಹರಿಸಲು ಸಾಧ್ಯವಾಗಿಲ್ಲ. ಕೆಲವು ಕಡೆ ಪ್ರಾಯೋಗಿಕವಾಗಿ ನೀರು ಹರಿಸಿದ್ದು ಬಿಟ್ಟರೆ ಬೇರೆ ಏನೂ ಆಗಿಲ್ಲ ಎಂದು ಟೀಕಿಸಿದರು.

ಮಹದಾಯಿ ಯೋಜನೆಯಡಿ ಕಳಸಾ ಬಂಡೂರಿಗೆ ನೀರು ಹಂಚಿಕೆಯ ಅಧಿಕಾರವನ್ನು ಕೇಂದ್ರ ಜಲ ಆಯೋಗಕ್ಕೆ ಅಧಿಕಾರ ಕೊಟ್ಟವರು ಯಾರು? ಯೋಜನೆಗೆ ಅಡಿಗಲ್ಲು ಹಾಕಿ 14 ವರ್ಷವಾಗಿದೆ. ₹1000 ಕೋಟಿ ಖರ್ಚು ಮಾಡಿದ್ದರೂ ನೀರು ಕೊಡಲು ಆಗಿಲ್ಲ. ಸಮಗ್ರ ಯೋಜನಾ ವರದಿಯೂ ಆಗಿಲ್ಲ. ಅರಣ್ಯ ಇಲಾಖೆಯ ಅನುಮತಿಯೂ ಸಿಕ್ಕಿಲ್ಲ ಎಂದೂ ಹೇಳಿದರು.

ಈಗ ಮೇಕೆದಾಟು ಪಾದಯಾತ್ರೆಯನ್ನು ಕಾಂಗ್ರೆಸ್‌ ಹಮ್ಮಿಕೊಂಡಿದೆ. ಚುನಾವಣೆ ಹೆಸರಿನಲ್ಲಿ ಸುತ್ತಾಡಿ ಬರುತ್ತಾರೆ. ಜೆಡಿಎಸ್‌ನವರು ಈ ಹೋರಾಟ ಕೈಗೆತ್ತಿಕೊಳ್ಳುತ್ತಾರೆ ಎಂದು ಇವರು ಹೊರಟಿದ್ದಾರೆ ಎಂದು ಕಟಕಿಯಾಡಿದರು.

ಬಿಜೆಪಿಯ ಬಿ.ಎಸ್‌.ಯಡಿಯೂರಪ್ಪ, ಉತ್ತರ ಕರ್ನಾಟಕ ಅಭಿವೃದ್ಧಿಗೆ ನೀರಾವರಿ ಯೋಜನೆಗಳನ್ನು ಆದ್ಯತೆ ನೀಡಬೇಕು. ಇತರ ಕಾರ್ಯಗಳನ್ನು ಬದಿಗಿಟ್ಟು, ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಬೇಕು ಎಂದರು.

ಜೆಡಿಎಸ್‌ನ ಬಂಡೆಪ್ಪ ಕಾಶೆಂಪೂರ ಮಾತನಾಡಿ, ‘ಕಾರಂಜಾ ಯೋಜನೆ 1972 ರಲ್ಲಿ ಆರಂಭಿಸಿದರೂ ಇನ್ನೂ ಪೂರ್ಣ ಆಗಿಲ್ಲ. ಕಾಲುವೆಗಳಲ್ಲಿ ನೀರು ಹರಿದಿಲ್ಲ. ಈ ವರ್ಷ ಮಳೆಯಿಂದ ಬೆಳೆ ನಾಶವಾಗಿದೆ. ಇನ್ನೂ ಪರಿಹಾರ ಸಿಕ್ಕಿಲ್ಲ, ನಾವು ಬೀದರ್‌ನವರು ಏನು ಪಾಪ ಮಾಡಿದ್ದೇವೆ’ ಎಂದು ಪ್ರಶ್ನಿಸಿದರು.

ಭೂಸ್ವಾಧೀನ ಪ್ರಕ್ರಿಯೆ ಸ್ಥಗಿತ: ಕಾಂಗ್ರೆಸ್‌
ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ಆ ಪ್ರಕ್ರಿಯೆ ನಡೆಸಿ ಸಮರೋಪಾದಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಕಾಂಗ್ರೆಸ್‌ನ ಎಂ.ಬಿ.ಪಾಟೀಲ ಆಗ್ರಹಿಸಿದರು.

ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು ಹಂತ ಹಂತವಾಗಿ ಹೆಚ್ಚಿಸಲು ರಾಜ್ಯ ಸರ್ಕಾರ ಮುಂದಾಗಿದೆ. 519 ಅಡಿಯಿಂದ 521 ಅಡಿಗೆ, 521 ಅಡಿಯಿಂದ 523 ಅಡಿ... ಹೀಗೆ ಏರಿಸಲು ಯೋಜಿಸಿದೆ. ಈ ರೀತಿ ಹಂತ ಹಂತವಾಗಿ ಏರಿಸಿ ಯೋಜನಾ ವೆಚ್ಚ ದುಪ್ಪಟ್ಟು ಆಗಲಿದೆ. ಈ ಪ್ರಸ್ತಾವ ಕೈಬಿಟ್ಟು ಒಂದೇ ಸಲ ಅಣೆಕಟ್ಟಿನ ಎತ್ತರವನ್ನು 524 ಅಡಿಗೆ ಏರಿಸಬೇಕು ಎಂದು ಸಲಹೆ ನೀಡಿದರು.

ಕಾಂಗ್ರೆಸ್‌ನ ಈಶ್ವರ ಖಂಡ್ರೆ ಮಾತನಾಡಿ, ಸರ್ಕಾರ ಭರವಸೆ ನೀಡಿದಂತೆ ಕಲ್ಯಾಣ ಕರ್ನಾಟಕ ಮಂಡಳಿಯನ್ನು ರಚಿಸಿಲ್ಲ. 371(ಜೆ) ತಿದ್ದುಪಡಿ ಆದ ಮೇಲೆ ವಿಶೇಷ ಅನುದಾನ ನೀಡಬೇಕಿತ್ತು. ವಿಶೇಷ ಅನುದಾನ ನೀಡದೇ, ಘೋರ ಅನ್ಯಾಯ ಮಾಡಲಾಗಿದೆ ಮತ್ತು ಮಲತಾಯಿ ಧೋರಣೆ ತಾಳಲಾಗಿದೆ ಎಂದು ಕಿಡಿಕಾರಿದರು.

*
ಎತ್ತಿನ ಹೊಳೆ ಯೋಜನೆಯಡಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ 10 ಟಿಎಂಸಿ ಅಡಿ ನೀರು ಹರಿಸಲು ಸಾಧ್ಯವಿಲ್ಲ. ಹಣ ಯಾರದ್ದೋ ಕಿಸೆಗೆ ಹೋಗಿದೆ
-ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.