ADVERTISEMENT

ಪೊಲೀಸರ ನಿಯಂತ್ರಿಸುವ ಕಾಣದ ಕೈಗಳು!

ಮಂಗಳೂರು ಗಲಭೆಯಲ್ಲಿ ಅಮಾಯಕರ ಬಂಧನ; ಎಚ್‌.ಡಿ. ಕುಮಾರಸ್ವಾಮಿ ಟೀಕೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2020, 22:56 IST
Last Updated 19 ಫೆಬ್ರುವರಿ 2020, 22:56 IST
ವಿಧಾನಸಭೆಯಲ್ಲಿ ಬುಧವಾರ ನಡೆದ ಕಲಾಪದಲ್ಲಿ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿದರು.
ವಿಧಾನಸಭೆಯಲ್ಲಿ ಬುಧವಾರ ನಡೆದ ಕಲಾಪದಲ್ಲಿ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿದರು.   
""

ಬೆಂಗಳೂರು:‘ ಮಂಗಳೂರಿನ ಪೊಲೀಸ್‌ ಅಧಿಕಾರಿಗಳನ್ನು ‘ಕಾಣದ ಕೈಗಳು’ ನಿಯಂತ್ರಿಸುತ್ತಿದ್ದು, ಈ ಅಧಿಕಾರಿಗಳು ಮುಖ್ಯಮಂತ್ರಿ ಅಥವಾ ಗೃಹ ಸಚಿವರ ಮಾತುಗಳನ್ನು ಕೇಳುತ್ತಿಲ್ಲ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ದೂರಿದರು.

ಮಂಗಳೂರು ಗೋಲಿಬಾರ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಲುವಳಿ ಸೂಚನೆ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗಲಭೆಯಲ್ಲಿ ಪೊಲೀಸ್‌ ಅಧಿಕಾರಿಗಳ ವೈಫಲ್ಯ ಎದ್ದು ಕಾಣುತ್ತಿದೆ. ಸಂಘಟನೆಯ ಚಿತಾವಣೆಯೂ ಇದೆ. ಆದ್ದರಿಂದ, ಸದನ ಸಮಿತಿಯಿಂದಲೇ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

‘ಪ್ರತಿಭಟನೆ ನಡೆಸಿದವರು ಮತ್ತು ಕಲ್ಲು ತೂರಿದವರು ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದರು ಎಂದು ಬಿಜೆಪಿ ಶಾಸಕರು ಹೇಳಿದ್ದಾರೆ. ಅವರು ಸಹಜವಾಗಿ ಬಟ್ಟೆ ಕಟ್ಟಿಕೊಂಡಿದ್ದಾರೆ. ಗೋಲಿಬಾರ್‌, ಅಶ್ರುವಾಯು ಸಿಡಿಸಿದ ಹೊಗೆ ಮತ್ತು ಧೂಳಿನ ಕಾರಣಕ್ಕೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡಿರಬಹುದು’ ಎಂದು ಕುಮಾರಸ್ವಾಮಿ ವ್ಯಾಖ್ಯಾನಿಸಿದರು.

ADVERTISEMENT

‘ಆಟೊ ಮತ್ತು ಟೆಂಪೋದಲ್ಲಿ ಕಲ್ಲು ತಂದು ಸುರಿದು ಬಳಿಕ ಅದನ್ನು ಪೊಲೀಸರ ಮೇಲೆ ತೂರಾಟ ಮಾಡಲಾಗಿದೆ ಎಂಬ ಮಾಹಿತಿ ತಪ್ಪು. ಹಾಜಿ ರೆಸಿಡೆನ್ಸಿ ಎಂಬ ಕಟ್ಟಡ ನಿರ್ಮಾಣಕ್ಕಾಗಿ ಟೈಲ್ಸ್‌ಗಳನ್ನು ತಂದು ಇಡುವ ದೃಶ್ಯ ದಾಖಲಾಗಿದೆ. ಗಲಾಟೆಗೆ ಮುನ್ನ ನಾಲ್ಕು ಲೋಡ್‌ಗಳನ್ನು ತಂದು ಹಾಕಲಾಗಿತ್ತು. ಅದಕ್ಕೂ ಗಲಾಟೆಗೂ ಸಂಬಂಧ ಇಲ್ಲ. ಸುಮ್ಮನೆ ಕಥೆ ಕಟ್ಟಲಾಗಿದೆ’ ಎಂದು ತಿಳಿಸಿದರು.

‘ಮೃತರ ಕುಟುಂಬಕ್ಕೆ ಮೊದಲಿಗೆ ತಲಾ ₹10 ಲಕ್ಷ ಪರಿಹಾರ ಪ್ರಕಟಿಸಲಾಯಿತು. ಬಳಿಕ ಸಂಘದ ಒತ್ತಡಕ್ಕೆ ಮಣಿದು ಹಿಂತೆಗೆದುಕೊಳ್ಳಲಾಯಿತು. ಗೋಲಿಬಾರ್‌ನಲ್ಲಿ ಸತ್ತವರು ಮತ್ತು ಬಂಧಿತರಾದವರ ವಿರುದ್ಧ ಪೊಲೀಸ್‌ ಪ್ರಕರಣ ದಾಖಲಾಗಿದ್ದರೆ ಸದನಕ್ಕೆ ಮಾಹಿತಿ ನೀಡಿ. ನೀವು ಸಂಘಟನೆ ಕೃಪೆಯಿಂದ ಇಲ್ಲಿಗೆ ಬಂದು ಕುಳಿತಿಲ್ಲ ಎಂಬುದು ನೆನಪಿರಲಿ’ ಎಂದು ಕುಮಾರಸ್ವಾಮಿ ಹೇಳಿದರು.

ಕೀಳುಮಟ್ಟದ ಪ್ರಚಾರ: ‘ಮಂಗಳೂರು ಬಾಂಬ್‌ ಪ್ರಕರಣದ ವಿಚಾರದಲ್ಲಿ ದೊಡ್ಡ ಪ್ರಹಸನವೇ ನಡೆಯಿತು. ಪಟಾಕಿಗೆ ಬಳಸುವ ಮಿನುಗುವ ಪೌಡರ್‌ ಅದರಲ್ಲಿ ಬಳಸಲಾಗಿದೆ ಎಂದು ಮಾಧ್ಯಮಗಳಲ್ಲಿ ಬಂದಿತ್ತು. ಮಿಣಿ ಮಿಣಿ ಪೌಡರ್‌ ಎಂದು ಹೇಳಿದ್ದಕ್ಕೆ ನನ್ನ ವಿರುದ್ಧ ಕೀಳು ಮಟ್ಟದ ಪ್ರಚಾರ ನಡೆಸಲಾಯಿತು. ಬಾಂಬ್‌ ನಿಷ್ಕ್ರಿಯ ಮಾಡಿದಾಗ ಹೊಗೆ ಬಂದಿದ್ದು ಬಿಟ್ಟರೆ ಮತ್ತೇನೂ ಆಗಲಿಲ್ಲ’ ಎಂದು ಅವರು ತಿಳಿಸಿದರು.

ಗೋಲಿಬಾರ್‌ಗೆ ಸಂಬಂಧಿಸಿದಂತೆ ತಪ್ಪಿತಸ್ಥ ಪೊಲೀಸ್‌ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು.

ಗದ್ದಲ ಸೃಷ್ಟಿಸಿದ ಮೋದಿ ಪಾಕಿಸ್ತಾನ ಭೇಟಿ!
ಬೆಂಗಳೂರು:
ಪ್ರಧಾನಮಂತ್ರಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಹೋದ ವಿಷಯ ವನ್ನು ಪ್ರಸ್ತಾಪಿಸಿ ಕಾಂಗ್ರೆಸ್‌ ಶಾಸಕ ಯು.ಟಿ.ಖಾದರ್‌ ಆಡಿದ ಮಾತೊಂದು ವಿಧಾನಸಭೆಯಲ್ಲಿ ಭಾರಿ ಗದ್ದಲಕ್ಕೆ ಕಾರಣವಾಯಿತು.

ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೇರಿ ಬಿಜೆಪಿ ಸದಸ್ಯರು ಕ್ಷಮೆಗೆ ಒತ್ತಾಯಿಸಿದ ಘಟನೆ ನಡೆಯಿತು.

ಈ ಸಂದರ್ಭದಲ್ಲಿ ಸದನದಲ್ಲಿ ಕಾವೇರಿದ ವಾತಾವರಣ ಸೃಷ್ಟಿಯಾಯಿತು. ಶಾಸಕರು ಪರಸ್ಪರ ದೂಷಣೆಯಲ್ಲಿ ತೊಡಗಿದರು.

ಖಾದರ್‌ ಆಡಿದ ಮಾತಿನ ಬಗ್ಗೆ ಕಾಂಗ್ರೆಸ್‌ನ ಹಿರಿಯ ಶಾಸಕರಾದ ಆರ್.ವಿ.ದೇಶಪಾಂಡೆ, ಕೆ.ಆರ್‌.ರಮೇಶ್‌ ಕುಮಾರ್‌ ಅವರೂ ಬೇಸರ ವ್ಯಕ್ತಪಡಿಸಿದರು. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕೂಡ ಅತೃಪ್ತಿ ವ್ಯಕ್ತಪಡಿಸಿದ ಬಳಿಕ ಖಾದರ್‌ ತಾವು ಬಳಸಿದ ಪದದ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

ನಾವು ಭಾರತೀಯರು ಪಾಕಿ ಸ್ತಾನಕ್ಕೆ ಹೋಗುವುದಿಲ್ಲ. ಆದರೆ, ಪ್ರಧಾನಿಯವರು ಪಾಕಿಸ್ತಾನಕ್ಕೆ ಹೋದಾಗ ಏನು ಮಾಡಿದರು... ಎಂದು ಖಾದರ್‌ ಹೇಳಿದಾಗ ಬಿಜೆಪಿಯ ಎಸ್‌.ಆರ್‌. ವಿಶ್ವನಾಥ್‌ ತೀವ್ರವಾಗಿ ಆಕ್ಷೇಪಿಸಿ, ಸರಿಯಾಗಿ ಮಾತನಾ ಡೋದನ್ನ ಕಲಿತುಕೊಳ್ಳಿ ಎಂದರು.

ಆಗ ಆಡಳಿತ ಪಕ್ಷದ ಎಲ್ಲ ಸದಸ್ಯರು ಖಾದರ್‌ ವಿರುದ್ಧ ಮುಗಿಬಿದ್ದರು. ‘ಅಯೋಗ್ಯ ಏನು ಮಾತನಾಡುತ್ತಿ’ ಎಂದು ಬಿಜೆಪಿ ವೀರಣ್ಣ ಚರಂತಿಮಠ ಹರಿಹಾಯ್ದರು. ಖಾದರ್‌ ಬಳಸಿದ ಪದ ವನ್ನು ಕಡತದಿಂತ ತೆಗೆಯಬೇಕು ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.

‘ನಾಯಿಬಾಲ ಎಷ್ಟಿದ್ದರೂ ಡೊಂಕೇ. ದಬ್ಬೆ ಕಟ್ಟುವುದರಿಂದ ಪ್ರಯೋಜನ ಆಗುವುದಿಲ್ಲ. ಬಾಲವನ್ನೇ ಕಟ್‌ ಮಾಡ ಬೇಕು’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಹೇಳಿದ ಮಾತು ಮತ್ತಷ್ಟು ವಿಕೋಪಕ್ಕೆ ಹೋಯಿತು. ತಾವು ಈ ಮಾತು ದೇಶ ವಿರೋಧಿಗಳ ಬಗ್ಗೆ ಆಡಿದ್ದೇ ಹೊರತು ಖಾದರ್‌ ಕುರಿತು ಅಲ್ಲ ಎಂದು ಸಮಜಾಯಿಷಿ ನೀಡಿದರು.

ರವಿ ಬಳಸಿದ ಪದಗಳ ಬಗ್ಗೆ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತೀವ್ರವಾಗಿ ಆಕ್ಷೇಪಿಸಿದರು. ಬಿಜೆಪಿಯ ಎಂ.ಪಿ.ರೇಣುಕಾಚಾರ್ಯ ಅವರು, ಖಾದರ್‌ಗೆ ದೇಶದ್ರೋಹಿ ಎಂದು ಏಕ ವಚನದಲ್ಲಿ ಹೇಳಿದರು. ಬುದ್ಧಿಮಾಂದ್ಯರನ್ನು ಕ್ಷಮಿಸುತ್ತೇನೆ ಎಂದು ಖಾದರ್‌ ತಿರುಗೇಟು ನೀಡಿದರು.

ವಿಧಾನಸಭೆಯ ಅಧಿವೇಶನದಲ್ಲಿ ಬುಧವಾರ ಸಚಿವರಾದ ಆನಂದ್‌ ಸಿಂಗ್‌ ಹಾಗೂ ಕೆ.ಎಸ್‌.ಈಶ್ವರಪ್ಪ, ಜೆಡಿಎಸ್ ನಾಯಕ ಎಚ್‌.ಡಿ. ಕುಮಾರಸ್ವಾಮಿಯೊಂದಿಗೆ ಚರ್ಚೆಯಲ್ಲಿ ತೊಡಗಿರುವುದು

ಕಲಾಪಕ್ಕೆ ಸಚಿವರ ಚಕ್ಕರ್‌
ಬೆಂಗಳೂರು:
ವಿಧಾನಸಭೆಯ ಕಲಾಪಕ್ಕೆ ಸಚಿವರ ಗೈರುಹಾಜರಿಗೆ ಕಾಂಗ್ರೆಸ್‌ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಕಲಾಪ ಆರಂಭವಾಗುತ್ತಿದ್ದಂತೆಯೇ ಕಾಂಗ್ರೆಸ್‌ ಸದಸ್ಯ ಪಿ.ಟಿ.ಪರಮೇಶ್ವರ ನಾಯ್ಕ್‌, ‘ಸದನದಲ್ಲಿ ಸಚಿವರೇ ಇಲ್ಲ. ಅವರಿಗೆ ಸದನ ನಡೆಸಲು ಆಸಕ್ತಿಯೇ ಇಲ್ಲ’ ಎಂದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ಇಲ್ಲಿ ಮಂತ್ರಿಗಳೇ ಇಲ್ಲವಲ್ಲ. ಎಲ್ಲ ಕಾಲದಲ್ಲೂ ಈ ರೋಗ ಇದೆ. ಈಗಲೂ ಮುಂದುವರಿದಿದೆ. ಡಾ.ಕೆ.ಸುಧಾಕರ್‌ ಬಿಟ್ಟು ಹೊಸ ಸಚಿವರು ಯಾರೂ ಬಂದಿಲ್ಲ. ಎರಡು ದಿನಗಳಲ್ಲೇ ಸದನದ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದಾರೆ. ಮುಂದೆ ಗತಿ ಏನು’ ಎಂದು ಪ್ರಶ್ನಿಸಿದರು.

‘ನಾನು ಮಂಗಳೂರು ಗೋಲಿಬಾರ್‌ ಬಗ್ಗೆ ಮಾತನಾಡಲಿದ್ದೇನೆ. ಈ ವೇಳೆ ಗೃಹ ಸಚಿವರು ಇರಬೇಕು. ಆದರೆ, ಅವರೂ ಸಹ ಇಲ್ಲ. ಮಾತು ಅರಣ್ಯ ರೋದನವಾಗುತ್ತದೆ. ಆಡಳಿತ ಪಕ್ಷದ ಹೆಚ್ಚಿನ ಸದಸ್ಯರು ಗೈರುಹಾಜರಾಗಿದ್ದಾರೆ. ನಾನು ಡಯಾರಿಗೆ ಮಾತನಾಡಲಿ’ ಎಂದು ಕೇಳಿದರು.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಪ್ರತಿಕ್ರಿಯಿಸಿ, ‘ಹೊಸ ಸಚಿವರು ಕಚೇರಿಗಳ ಪೂಜಾ ಕಾರ್ಯದಲ್ಲಿ ತೊಡಗಿದ್ದಾರೆ. ಅದು ಮುಗಿದ ಕೂಡಲೇ ಬರುತ್ತಾರೆ’ ಎಂದರು. ಆಗ ಸಿದ್ದರಾಮಯ್ಯ, ‘ಪೂಜೆ ಮುಗಿದ ಬಳಿಕವೇ ಕಲಾ‍‍ಪ ಆರಂಭಿಸಬಹುದಿತ್ತಲ್ಲ’ ಎಂದರು.

ಬಳಿಕ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ, ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸದನಕ್ಕೆ ಬಂದರು. ತಡವಾಗಿ ಬಂದಿದ್ದಕ್ಕೆ ಬೊಮ್ಮಾಯಿ ಕ್ಷಮೆಯಾಚಿಸಿದರು.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಕಲಾಪಕ್ಕೆ ಬರುವುದು ಸಚಿವರ ಹಾಗೂ ಶಾಸಕರ ಕರ್ತವ್ಯ. ಅದನ್ನು ಅರ್ಥಮಾಡಿಕೊಂಡು ಮುನ್ನಡೆಯಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.