ADVERTISEMENT

ಏಕರೂಪತೆ ಹೇಗೆ ತರುತ್ತೀರಿ?: ಕೃಷ್ಣ ಬೈರೇಗೌಡ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2020, 20:51 IST
Last Updated 10 ಮಾರ್ಚ್ 2020, 20:51 IST
ಕೃಷ್ಣ ಬೈರೇಗೌಡ
ಕೃಷ್ಣ ಬೈರೇಗೌಡ   

ಬೆಂಗಳೂರು: ‘ಇಸ್ರೇಲ್‌, ಎಸ್ಟೋನಿಯಾದಂತಹ ಸಣ್ಣ ದೇಶಗಳಲ್ಲೂ ಏಕರೂಪತೆ ಸಾಧ್ಯವಾಗಿಲ್ಲ. ಸಾವಿರಾರು ಭಾಷೆ, ವೈವಿಧ್ಯ ಹೊಂದಿರುವ ನಮ್ಮ ದೇಶದಲ್ಲಿ ಏಕರೂಪತೆ ತರಲು ಸಾಧ್ಯವೇ ಇಲ್ಲ. ಒಂದು ವೇಳೆ ತರಲು ಹೊರಟರೆ ಮೂರ್ಖತನದ ಪರಮಾವಧಿ ಆಗುತ್ತದೆ’ ಎಂದು ಕಾಂಗ್ರೆಸ್‌ನ ಕೃಷ್ಣ ಬೈರೇಗೌಡ ‍ಪ್ರತಿಪಾದಿಸಿದರು.

ವಿಧಾನಸಭೆಯಲ್ಲಿ ಮಂಗಳವಾರ ಸಂವಿಧಾನದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ‘ಏಕರೂಪತೆ ತಂದರೆ ನಮ್ಮ ಮುನೇಶ್ವರ, ಸರ್ಕಲ್‌ ಮಾರಮ್ಮನ ಸ್ಥಿತಿ ಏನಾಗುತ್ತದೆ. ಅವರಿಗೆ ಎಲ್ಲಿ ಸ್ಥಾನ ಕಲ್ಪಿಸುತ್ತೀರಿ’ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.

‘ನಮ್ಮ ದೇಶದ ವೈವಿಧ್ಯತೆಯನ್ನು ಸಂಭ್ರಮಿಸಬೇಕೇ ಹೊರತು ಅದಕ್ಕೆ ಧಕ್ಕೆ ತಂದು ಏಕರೂಪತೆ ತರುತ್ತೇವೆ ಎಂಬುದು ಮೂರ್ಖತನ. ಇತ್ತೀಚಿನ ದಿನಗಳಲ್ಲಿ ವೈವಿಧ್ಯ ಮತ್ತು ಸ್ವಾತಂತ್ರ್ಯಕ್ಕೆ ಕುತ್ತು ಬರುತ್ತಿರುವುದು ಕಳವಳಕಾರಿ’ ಎಂದರು.

ADVERTISEMENT

‘ಪ್ರಜಾಪ್ರಭುತ್ವವನ್ನು ಮೌಲ್ಯಮಾಪನ ಮಾಡುವ ಅಂತರ ರಾಷ್ಟ್ರೀಯ ಸಂಸ್ಥೆಯ ವರದಿಯ ಪ್ರಕಾರ, ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಜಾಗತಿಕ ಮಟ್ಟದಲ್ಲಿ 2014ರಲ್ಲಿ 27 ಸ್ಥಾನದಲ್ಲಿತ್ತು. ಈಗ ಅದು 51ನೇ ಸ್ಥಾನಕ್ಕೆ ಕುಸಿದಿದೆ. ಜಾಗತಿಕ ಮಟ್ಟದ ಸಂಸ್ಥೆ ‘ಫ್ರೀಡಂ ಹೌಸ್‌’ ಕಳೆದ ವಾರ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಮುಕ್ತ ಸ್ವಾತಂತ್ರ್ಯ ಇರುವ 86 ದೇಶಗಳ ಪಟ್ಟಿ ಮಾಡಿದೆ. ಈ ಪಟ್ಟಿಯಲ್ಲಿ ಭಾರತ 83ನೇ ಸ್ಥಾನದಲ್ಲಿದೆ’ ಎಂದರು.

‘ದೇಶದ 116 ಸಮುದಾಯಗಳು ತಮ್ಮನ್ನು ಹಿಂದೂ ಮತ್ತು ಕ್ರೈಸ್ತರು ಎಂದು, 35 ಸಮುದಾಯಗಳು ತಾವು ಹಿಂದೂ ಮತ್ತು ಇಸ್ಲಾಂ ಅನುಯಾಯಿಗಳು ಎಂದೂ 94 ಸಮುದಾಯಗಳು ತಮ್ಮನ್ನು ಕ್ರಿಶ್ಚಿಯನ್ ಮತ್ತು ಬುಡಕಟ್ಟು ಅನುಯಾಯಿಗಳು ಎಂದೂ 12 ಸಮುದಾಯಗಳು ತಮ್ಮನ್ನು ಮುಸ್ಲಿಂ ಮತ್ತು ಬ್ರಾಹ್ಮಣರು ಎಂದು ಕರೆದುಕೊಳ್ಳುತ್ತವೆ. ನಮ್ಮ ನಾಡಿನಲ್ಲಿ ಇಂತಹ ವೈವಿಧ್ಯತೆ ಇರುವಾಗ ಏಕರೂಪತೆ ತರಲು ಸಾಧ್ಯವೇ‘ ಎಂದು ಕೇಳಿದರು.

‘ಪದೇ ಪದೇ ಸಂವಿಧಾನ ಬದಲು’
‘ಪೋಲೆಂಡ್‌ನಲ್ಲಿ 10 ಬಾರಿ ಸಂವಿಧಾನ ಬದಲಾವಣೆಯಾಗಿದ್ದರೆ, ಗ್ರೀಕ್‌ನಲ್ಲಿ 13 ಬಾರಿ, ಫ್ರಾನ್ಸ್‌ನಲ್ಲಿ 16 ಬಾರಿ, ವೆನಿಜುವೆಲಾದಲ್ಲಿ 24 ಬಾರಿ, ಡೊಮಿನಿಕ್ ರಿಪಬ್ಲಿಕ್‌ನಲ್ಲಿ 32 ಬಾರಿ ಸಂವಿಧಾನ ಬದಲಾವಣೆ ಆಗಿದೆ. ನೆರೆಯ ಪಾಕಿಸ್ತಾನನಲ್ಲಿ 4 ಬಾರಿ, ಶ್ರೀಲಂಕಾ 3 ಬಾರಿ ಬದಲಾವಣೆ ಆಗಿದೆ’ ಎಂದು ಕೃಷ್ಣ ಬೈರೇಗೌಡ ಹೇಳಿದರು.

‘ಶೇ 50ರಷ್ಟು ಸಂವಿಧಾನಗಳ ಆಯಸ್ಸು ಸರಾಸರಿ 18 ವರ್ಷಗಳು. ಶೇ 19ರಷ್ಟು ಸಂವಿಧಾನಗಳ ಬಾಳಿಕೆ 50 ವರ್ಷಗಳಾಗಿದ್ದರೆ, 70 ವರ್ಷ ದಾಟಿರುವ ಸಂವಿಧಾನಗಳ ಪ್ರಮಾಣ ಶೇ 10ರಷ್ಟು ಮಾತ್ರ’ ಎಂದರು.

‘70 ವರ್ಷಗಳು ಕಳೆದಿದ್ದರೂ ನಮ್ಮ ಸಂವಿಧಾನ ಉಳಿದಿದೆ ಮತ್ತು ನಮ್ಮನ್ನು ಅದು ಮುಂದುವರಿಸಿಕೊಂಡು ಹೋಗುತ್ತಿದೆ ಎಂಬುದೇ ದೊಡ್ಡ ಸಾಧನೆ’ ಎಂದು ‍ಪ್ರತಿಪಾದಿಸಿದರು.

*
ಯುರೋಪ್‌ನ 75 ಕೋಟಿ ಜನಸಂಖ್ಯೆಗೆ 52 ದೇಶಗಳಿವೆ. ನಮ್ಮ 135 ಕೋಟಿ ಜನಸಂಖ್ಯೆಗೆ ಇರುವುದು ಒಂದೇ ದೇಶ. ಇದೇ ಭಾರತೀಯತೆ.
-ಕೃಷ್ಣ ಬೈರೇಗೌಡ, ಕಾಂಗ್ರೆಸ್‌ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.