ADVERTISEMENT

ಪರ್ವ ನಾಟಕ ನಿರ್ದೇಶನ, ಸರ್ಕಾರ ಮೂಗು ತೂರಿಸುವುದಿಲ್ಲ: ಸಚಿವ ಸುನೀಲ್‌ಕುಮಾರ್‌

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2021, 21:56 IST
Last Updated 13 ಡಿಸೆಂಬರ್ 2021, 21:56 IST
ವಿ. ಸುನೀಲ್ಕುಮಾರ್
ವಿ. ಸುನೀಲ್ಕುಮಾರ್   

ಬೆಳಗಾವಿ (ಸುವರ್ಣ ವಿಧಾನಸೌಧ): ‘ಎಸ್.ಎಲ್. ಭೈರಪ್ಪ ಅವರ ‘ಪರ್ವ’ ಕಾದಂಬರಿ ಆಧಾರಿತ ನಾಟಕ ನಿರ್ದೇಶನ ಮಾಡಿರುವುದು ಪ್ರಕಾಶ್ ಬೆಳವಾಡಿ. ಮೈಸೂರಿನ ರಂಗಾಯಣ ಮೂಲಕ ಈ ನಾಟಕ ಪ್ರದರ್ಶನ ಏರ್ಪಡಿಸಲಾಗುತ್ತಿದೆ. ನಾಟಕದ ನಿರ್ದೇಶನದಲ್ಲಿ ಸರ್ಕಾರ ಮೂಗು ತೂರಿಸುವುದಿಲ್ಲ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್‌ಕುಮಾರ್‌ ಸ್ಪಷ್ಟಪಡಿಸಿದರು.

ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ಸಿನ ಪಿ.ಆರ್. ರಮೇಶ್, ‘ಸರಸ್ವತಿ ಸನ್ಮಾನ್ ಪ್ರಶಸ್ತಿ ಪುರಸ್ಕೃತ ಭೈರಪ್ಪ ಅವರ ‘ಪರ್ವ’ ಕಾದಂಬರಿ ಆಧರಿಸಿದ ನಾಟಕ ಪ್ರದರ್ಶನಕ್ಕೆ ರಾಜ್ಯ ಸರ್ಕಾರ ₹ 1 ಕೋಟಿ ಖರ್ಚುಮಾಡುತ್ತಿದೆ. ಕಾದಂಬರಿಯಲ್ಲಿ ಸನಾತನ ಆಹಾರ ಪದ್ಧತಿಯ ಕುರಿತು ಉಲ್ಲೇಖಿಸಲಾಗಿದೆ. ಸನಾತನ ಧರ್ಮದಲ್ಲಿ ಮಾಂಸಾಹಾರ ಜಾರಿಯಲ್ಲಿತ್ತು ಎಂದು ಕಾದಂಬರಿಯಲ್ಲಿ ಲೇಖಕ ಭೈರಪ್ಪ ಅವರು ಉಲ್ಲೇಖಿಸಿದ್ದಾರೆ. ಕಾದಂಬರಿಯಲ್ಲಿರುವ ಸಂಭಾಷಣೆಗಳನ್ನು ಯಥಾವತ್ತಾಗಿ ನಾಟಕದಲ್ಲಿಯೂ ಅಳವಡಿಸಬೇಕು’ ಎಂದು ಆಗ್ರಹಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಪರ್ವ ನಾಟಕವನ್ನು ರಾಜ್ಯದಲ್ಲಿ 21 ಕಡೆ ಪ್ರದರ್ಶನ ಮಾಡಲಾಗಿದೆ. ನಾಟಕ ಪ್ರದರ್ಶನ ವಿಷಯದಲ್ಲಿ ಸರ್ಕಾರ ಮಧ್ಯಪ್ರವೇಶಿಸುವುದಿಲ್ಲ. ಸರ್ಕಾರ ರಂಗಾಯಣಕ್ಕೆ ಅನುದಾನ ಬಿಡುಗಡೆ ಮಾಡುತ್ತಿದೆ. ನಾಟಕದ ಪ್ರದರ್ಶನಕ್ಕೆ ನವೆಂಬರ್‌ವರೆಗೆ ₹ 70 ಲಕ್ಷ ಖರ್ಚು ಮಾಡಲಾಗಿದೆ. ಈಗಾಗಲೇ ₹ 50 ಲಕ್ಷ ಬಿಡುಗಡೆ ಮಾಡಲಾಗಿದೆ. ಬಾಕಿ ಅನುದಾನವನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು’ ಎಂದರು.

ADVERTISEMENT

‘ನಾಟಕ ಪ್ರದರ್ಶನಕ್ಕೆ ಸರ್ಕಾರ ಅನುದಾನ ನೀಡುತ್ತಿದೆ. ಹೀಗಾಗಿ ಸೂಕ್ತ ಸಲಹೆಯನ್ನೂ ನೀಡಬೇಕು’ ಎಂದೂ ರಮೇಶ್ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.