
ಬೆಂಗಳೂರು: ‘ಕರ್ನಾಟಕ ಮತ್ತು ಜರ್ಮನಿಯ ಬವೇರಿಯಾ ಪ್ರಾಂತ್ಯವು ಮಾಹಿತಿ ತಂತ್ರಜ್ಞಾನ, ವೈಮಾಂತರಿಕ್ಷ, ರಕ್ಷಣೆ, ಸಂಶೋಧನೆ ಮತ್ತು ಅಭಿವೃದ್ಧಿ, ಸೆಮಿಕಂಡಕ್ಟರ್, ನವೋದ್ಯಮ ಮುಂತಾದ ಕ್ಷೇತ್ರಗಳಲ್ಲಿ ಅಪಾರ ಪ್ರಗತಿ ಸಾಧಿಸಿದ್ದು, ದ್ವಿಪಕ್ಷೀಯ ಸಹಭಾಗಿತ್ವ ಮತ್ತು ಹೂಡಿಕೆಗೆ ಯಥೇಚ್ಛ ಅವಕಾಶಗಳಿವೆ. ಈ ಸಂಬಂಧ ನೀಲನಕ್ಷೆ ರೂಪಿಸಿ, ಶೀಘ್ರ ಅಂತಿಮರೂಪ ನೀಡಲಾಗುವುದು’ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ.
ವಿಧಾನಸೌಧದಲ್ಲಿ ತಮ್ಮನ್ನು ಭೇಟಿಯಾದ ಬವೇರಿಯಾದ ಪ್ರಾಂತೀಯ ಸಂಸತ್ತಿನ ಅಧ್ಯಕ್ಷೆ ಐಲ್ ಏಗ್ನರ್ ನೇತೃತ್ವದ ನಿಯೋಗದ ಜತೆ ಅವರು ಮಾತುಕತೆ ನಡೆಸಿದರು.
‘ಕರ್ನಾಟಕವು ಬವೇರಿಯಾದ ಅತ್ಯುನ್ನತ ಪಾಲುದಾರ ಆಗಬೇಕೆಂದು ಈ ನಿಯೋಗದ ಸದಸ್ಯರು ಬಯಸಿದ್ದಾರೆ. ಈ ಸಂಬಂಧ ವಿಸ್ತೃತ ಚರ್ಚೆ ನಡೆಯಬೇಕಾದ ಅಗತ್ಯವಿದ್ದು, ತಂತ್ರಜ್ಞಾನ ವಿನಿಮಯ ಮಾಡಿಕೊಳ್ಳಲು ಪರಿಸ್ಥಿತಿ ನಿಚ್ಚಳವಾಗಿದೆ. ಸೂಪರ್ ಕಂಪ್ಯೂಟಿಂಗ್, ಕ್ವಾಂಟಂ ತಂತ್ರಜ್ಞಾನ ಕ್ಷೇತ್ರಗಳಲ್ಲೂ ಬವೇರಿಯಾ ಮುಂಚೂಣಿಯಲ್ಲಿದೆ. ನಾವು ಕೂಡ ಕ್ವಾಂಟಂ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ನೀತಿ ರೂಪಿಸಿದ್ದೇವೆ’ ಎಂದಿದ್ದಾರೆ.
‘ಬೆಂಗಳೂರಿನಲ್ಲಿ 20 ವರ್ಷಗಳಿಂದಲೂ ತನ್ನ ಪ್ರತಿನಿಧಿ ಕಚೇರಿಯನ್ನು ಹೊಂದಿರುವ ಬವೇರಿಯಾದಲ್ಲಿ ಉನ್ನತ ಶಿಕ್ಷಣ ಚೆನ್ನಾಗಿದೆ. ಅಲ್ಲಿನ ವಿಶ್ವವಿದ್ಯಾಲಯಗಳು ನಾವು ನಿರ್ಮಿಸುತ್ತಿರುವ ಕ್ವಿನ್ ಸಿಟಿಯಲ್ಲಿ ಕ್ಯಾಂಪಸ್ ತೆರೆಯಬಹುದು ಮತ್ತು ಸ್ಥಳೀಯ ವಿಶ್ವವಿದ್ಯಾಲಯಗಳೊಂದಿಗೆ ಜ್ಞಾನಾಧಾರಿತ ಒಡಂಬಡಿಕೆ ಮಾಡಿಕೊಳ್ಳಬಹುದು. ಜರ್ಮನಿಯಲ್ಲಿ ಭಾರತದ 200ಕ್ಕೂ ಹೆಚ್ಚು ಮತ್ತು ಭಾರತದಲ್ಲಿ ಅಲ್ಲಿನ 2 ಸಾವಿರಕ್ಕೂ ಹೆಚ್ಚು ಕಂಪನಿಗಳು ನೆಲೆಯೂರಿವೆ’ ಎಂದು ಅವರು ಹೇಳಿದ್ದಾರೆ.
‘ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ಯುವತಿಯರು ತಾಂತ್ರಿಕ ಶಿಕ್ಷಣ ಪಡೆಯುತ್ತಿರುವುದು ಅವರಿಗೆ ಅಚ್ಚರಿ ಮೂಡಿಸಿದೆ. ತಮ್ಮಲ್ಲೂ ಇಂತಹ ಕ್ರಮಗಳನ್ನು ಅಳವಡಿಸಿಕೊಳ್ಳಲು ಅವರು ಆಸಕ್ತಿ ತೋರಿಸಿದ್ದಾರೆ’ ಎಂದರು.
ನಿಯೋಗದಲ್ಲಿ ಅಲ್ಲಿನ ಸಂಸತ್ತಿನ ಉಪಾಧ್ಯಕ್ಷ ಮಾರ್ಕಸ್ ರಿಂಡರ್ ಸ್ಪೇಕರ್, ಸಂಸದರಾದ ಮಾರ್ಟಿನಾ ಗ್ಯುಬೆಲ್, ಟೋಬಿಯಾಸ್ ರೀಬ್, ಅಲೆಕ್ಸಾಂಡರ್ ಹೋಲ್ಡ್, ಲುಡ್ವಿಗ್ ಹಾರ್ಟ್ಮನ್ ಮತ್ತು ಬ್ಯಾಂಕಿಂಗ್ ಪರಿಣತ ಆಂಡ್ರಿಯಾಸ್ ಜಾಕೆಲ್ ಇದ್ದರು. ಈ ಭೇಟಿಯ ವೇಳೆ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ ಕೂಡಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.