ನವದೆಹಲಿ: ಕರ್ನಾಟಕ ಭವನದ ನಿವಾಸಿ ಆಯುಕ್ತರ ಕಚೇರಿಯ ಕಾನೂನು ಅಧಿಕಾರಿಯಾಗಿ ಸಂಸದರ ಕೋಶದ ಸಮನ್ವಯ ಅಧಿಕಾರಿ ಎಲ್.ದಿವಾಕರ್ ನೇಮಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸೋಮವಾರ ಆದೇಶ ಹೊರಡಿಸಿದೆ.
ಸಿದ್ದರಾಮಯ್ಯ ಅವರ ವಿಶೇಷ ಕರ್ತವ್ಯ ಅಧಿಕಾರಿಯೂ ಆಗಿರುವ ಕರ್ನಾಟಕ ಭವನದ ಸಹಾಯಕ ನಿವಾಸಿ ಆಯುಕ್ತ ಮೋಹನ್ ಕುಮಾರ್ ಸಿ. ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿಶೇಷ ಅಧಿಕಾರಿ ಎಚ್.ಆಂಜನೇಯ ನಡುವೆ ಕಳೆದ ತಿಂಗಳು ಗಲಾಟೆ ನಡೆದಿತ್ತು. ಮುಖ್ಯ ಕಾರ್ಯದರ್ಶಿ ಅವರಿಗೆ ದೂರು ಸಲ್ಲಿಕೆಯಾಗಿತ್ತು. ಆ ಬಳಿಕ, ಆಂಜನೇಯ ಅವರನ್ನು ಕಾನೂನು ಅಧಿಕಾರಿಯಾಗಿ ನೇಮಿಸಲಾಗಿತ್ತು.
‘ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಡಿ.ಕೆ. ಶಿವಕುಮಾರ್ ಜತೆಗೆ ಆಂಜನೇಯ ಸಹ ಆರೋಪಿಯಾಗಿದ್ದಾರೆ. ಅವರಿಗೆ ಕಾನೂನುಬಾಹಿರವಾಗಿ ಈ ಹುದ್ದೆ ನೀಡಲಾಗಿದೆ’ ಎಂದು ಎದುರು ಬಣದವರು ಆರೋಪಿಸಿದ್ದರು. ‘ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ನನ್ನ ವಿರುದ್ಧ ಯಾವುದೇ ಪ್ರಕರಣಗಳಿಲ್ಲ. ಸೇವಾ ಹಿರಿತನದ ಆಧಾರದಲ್ಲಿ ಈ ಹುದ್ದೆಗೆ ನನ್ನ ನೇಮಕ ಮಾಡಲಾಗಿದೆ’ ಎಂದು ಆಂಜನೇಯ ಸ್ಪಷ್ಟಪಡಿಸಿದ್ದರು. ಇದೀಗ, ದಿವಾಕರ್ ಅವರನ್ನು ನೇಮಿಸಲಾಗಿದೆ. ವರ್ಗಾವಣೆ ಬೆನ್ನಲ್ಲೇ, ಆಂಜನೇಯ ಅವರು ದೀರ್ಘ ರಜೆಯಲ್ಲಿ ತೆರಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.