ಬೆಂಗಳೂರು: ಶಿಸ್ತು ಉಲ್ಲಂಘಿಸಿ, ಪಕ್ಷವನ್ನು ದುರ್ಬಲಗೊಳಿಸುತ್ತಿರುವ ಕೆಲವು ನಾಯಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಬಿಜೆಪಿ ವರಿಷ್ಠರು ತೀರ್ಮಾನಿಸಿದ್ದಾರೆ.
‘ರಾಜ್ಯ ಬಿಜೆಪಿಯಲ್ಲಿ ಕೆಲವರು ವಿವೇಚನೆಯಿಂದ ವರ್ತಿಸುತ್ತಿಲ್ಲ. ಇವರಿಗೆ ಪಕ್ಷ ಮತ್ತು ಸಂಘಟನೆಗಿಂತ ಸ್ವಹಿತವೇ ಹೆಚ್ಚಾಗಿದೆ. ಹೀಗಾಗಿ ಬೇಕಾಬಿಟ್ಟಿ ನಡೆದುಕೊಳ್ಳುತ್ತಿದ್ದಾರೆ. ವರಿಷ್ಠರು ಮಾಹಿತಿ ಕಲೆ ಹಾಕಿದ್ದು, ಅವರ ವಿರುದ್ಧ ಕ್ರಮಜರುಗಿಸುವ ಸಾಧ್ಯತೆ ಇದೆ’ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ವಿರುದ್ಧ ಆರಂಭದಲ್ಲಿ ಒಬ್ಬಿಬ್ಬರು ಮಾತ್ರ ಹೇಳಿಕೆ ನೀಡುತ್ತಿದ್ದರು. ಅವರಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮುಂಚೂಣಿಯಲ್ಲಿದ್ದರು. ಆದರೆ, ದಿನ ಕಳೆದಂತೆ ಭಿನ್ನಮತ ಕಾಳ್ಗಿಚ್ಚಿನಂತೆ ಹಬ್ಬುತ್ತಿರುವುದು, ಇತರರು ಹೇಳಿಕೆ ನೀಡುವುದನ್ನು ವರಿಷ್ಠರು ಗಂಭೀರವಾಗಿ ಪರಿಗಣಿಸಿದ್ದಾರೆ. ಬಹಿರಂಗವಾಗಿ ಟೀಕೆ– ಟಿಪ್ಪಣಿಯಲ್ಲಿ ತೊಡಗಿರುವುದು, ಪದೇ ಪದೇ ಸಭೆಗಳನ್ನು ನಡೆಸುವುದು ಹಾಗೂ ದೆಹಲಿಗೆ ತಂಡ ಕಟ್ಟಿಕೊಂಡು ಬರುವುದು ವರಿಷ್ಠರನ್ನು ಕೆರಳಿಸಿದೆ. ಇದರ ಹಿಂದಿನ ಸೂತ್ರಧಾರರು ಯಾರು ಮತ್ತು ಅವರ ಉದ್ದೇಶ ಏನು ಎಂಬ ವಿಷಯವೂ ವರಿಷ್ಠರ ಗಮನಕ್ಕೆ ಬಂದಿದೆ. ಸೂಕ್ತ ಸಮಯದಲ್ಲಿ ಕ್ರಮ ಜರುಗಿಸುವುದು ನಿಶ್ಚಿತ’ ಎಂದು ಮೂಲಗಳು ಹೇಳಿವೆ.
ಅಶೋಕ– ಬೊಮ್ಮಾಯಿ ಗುರಿ:
ಬಿ.ವೈ.ವಿಜಯೇಂದ್ರ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ‘ತಟಸ್ಥ’ ಬಣದವರ ಮೇಲೆ ಆಕ್ರಮಣಕಾರಿಯಾಗಿ ವಾಗ್ದಾಳಿ ನಡೆಸಿದ್ದಾರೆ. ಮುಖ್ಯವಾಗಿ ತಟಸ್ಥ ಬಣದಲ್ಲಿ ಗುರುತಿಸಿಕೊಂಡಿರುವ ವಿರೋಧಪಕ್ಷದ ನಾಯಕ ಆರ್.ಅಶೋಕ ಮತ್ತು ಸಂಸದ ಬಸವರಾಜ ಬೊಮ್ಮಾಯಿ ಹೆಸರನ್ನು ಪ್ರಸ್ತಾಪಿಸದೇ ಪರೋಕ್ಷವಾಗಿ ಟೀಕಾ ಪ್ರಹಾರ ನಡೆಸಿರುವುದು ಪಕ್ಷದಲ್ಲಿ ಚರ್ಚೆಗೆ ಕಾರಣವಾಗಿದೆ.
ಪಕ್ಷದ ವಿಚಾರದಲ್ಲಿ 15–20 ದಿನಗಳಲ್ಲಿ ಕೇಂದ್ರ ನಾಯಕರು ಅಂತಿಮ ತೀರ್ಮಾನ ಕೊಡಲಿದ್ದಾರೆ. ಆ ನಂತರ ಸಹಜ ಸ್ಥಿತಿಗೆ ಬರುತ್ತದೆ. ಪಕ್ಷದ ಉಸ್ತುವಾರಿಯೇ ನಮ್ಮ ‘ಸುಪ್ರೀಂ’.ಆರ್.ಅಶೋಕ, ವಿರೋಧ ಪಕ್ಷದ ನಾಯಕ
‘ಭಿನ್ನರು ಯಡಿಯೂರಪ್ಪ ಅವರ ಮೇಲೆ ಕೆಟ್ಟದಾಗಿ ವಾಗ್ದಾಳಿ ನಡೆಸಿದಾಗ, ಮೌನ ವಹಿಸುವುದು ಅಪರಾಧ’ ಎಂದು ಇವರಿಬ್ಬರನ್ನು ಉದ್ದೇಶಿಸಿ ವಿಜಯೇಂದ್ರ ಕುಟುಕಿದ್ದರು. ಈ ಮೂಲಕ ಅಧ್ಯಕ್ಷರಾದ ತಮ್ಮ ಮೇಲೆ ಭಿನ್ನರು ನಿರಂತರ ವಾಗ್ದಾಳಿ ನಡೆಸುವಾಗ ಅವರನ್ನು ತಡೆಯದೇ, ಇವರು (ಅಶೋಕ– ಬೊಮ್ಮಾಯಿ) ‘ಆನಂದ’ ಅನುಭವಿಸುತ್ತಿದ್ದರು’ ಎಂದು ಪರೋಕ್ಷವಾಗಿ ಬೇಸರ ಹೊರಹಾಕಿದ್ದರು.
‘ಆಂತರಿಕ ಭಿನ್ನಾಭಿಪ್ರಾಯದ ಸಮರ ದುರದೃಷ್ಟಕರ ಎಂಬ ಹೇಳಲು ಇವರಿಗೆ ವರ್ಷ ಬೇಕಾಯಿತೇ? ಇವರು ಹೇಗೆ ನನ್ನ ವಿರುದ್ಧ ದೂರು ನೀಡಿದ್ದಾರೋ, ಯಾರ್‍ಯಾರು ಏನು ಮಾಡುತ್ತಿದ್ದಾರೆ ಎಂದು ನಾನೂ ವರಿಷ್ಠರಿಗೆ ಮಾಹಿತಿ ನೀಡಿದ್ದೇನೆ’ ಎಂದು ಹೇಳಿದ್ದರು.
ವಿಜಯೇಂದ್ರ ಬದಲಾವಣೆ ಖಚಿತ:
ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಬದಲಿಸುವುದು ಖಚಿತ ಎಂದು ಯತ್ನಾಳ ಬಣದವರು ಬಲವಾಗಿ ನಂಬಿದ್ದಾರೆ.
‘ರಾಜ್ಯದಲ್ಲಿ ವಿಜಯೇಂದ್ರ ವಿರುದ್ಧ ದೊಡ್ಡ ಮಟ್ಟದ ವಿರೋಧ ಇರುವುದರಿಂದ ವರಿಷ್ಠರು ಎಲ್ಲ ಸೂಕ್ಷ್ಮವನ್ನೂ ಅರಿತಿದ್ದಾರೆ. ಹೀಗಾಗಿ ಇನ್ನು ಮುಂದೆ ಯಡಿಯೂರಪ್ಪ ಕುಟುಂಬದ ಆಟ ನಡೆಯುವುದಿಲ್ಲ’ ಎಂದು ಯತ್ನಾಳ ಬಣದ ಮುಖಂಡರೊಬ್ಬರು ತಿಳಿಸಿದರು.
ನಮ್ಮ ದೆಹಲಿ ಭೇಟಿ ಫಲಪ್ರದವಾಗಿದ್ದು, ಕೇಂದ್ರದ ನಾಯಕರು ಸ್ಪಂದಿಸಿದ್ದಾರೆ. ಯಾರನ್ನು ಭೇಟಿಯಾದೆವು ಎಂಬುದನ್ನು ಗೋಪ್ಯವಾಗಿಡಲು ತಿಳಿಸಿದ್ದಾರೆ.ಬಸನಗೌಡ ಪಾಟೀಲ ಯತ್ನಾಳ, ಶಾಸಕ
‘ಬಸನಗೌಡ ಪಾಟೀಲ ಯತ್ನಾಳ, ಅರವಿಂದ ಲಿಂಬಾವಳಿ ಅವರು ವರಿಷ್ಠರನ್ನು ಭೇಟಿ ಮಾಡಿ ವಿಜಯೇಂದ್ರ ಮತ್ತು ಯಡಿಯೂರಪ್ಪ ವಿರುದ್ಧ ಎಲ್ಲ ಮಾಹಿತಿಗಳನ್ನು ಕೊಟ್ಟಿದ್ದಾರೆ. ಎಲ್ಲವೂ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಯತ್ನಾಳ ಮತ್ತು ಇತರ ಕೆಲವರು ಪದೇ ಪದೇ ಬಹಿರಂಗವಾಗಿ ಮಾತನಾಡುವುದರಿಂದ ಪಕ್ಷಕ್ಕೆ ಹಾನಿಯಾಗುತ್ತದೆ. ಈ ವಿಚಾರವನ್ನು ಅವರಿಗೆ ಹಲವು ಬಾರಿ ಹೇಳಿದ್ದೇವೆ. ಆದರೆ, ಮಾಧ್ಯಮಗಳನ್ನು ಕಂಡಾಗ ತಮ್ಮನ್ನು ತಾವು ನಿಯಂತ್ರಣಕ್ಕೆ ತಂದುಕೊಳ್ಳುವುದಿಲ್ಲ’ ಎಂದು ಅವರು ಬೇಸರಿಸಿದರು.
ಪಕ್ಷದ ಶಿಸ್ತು ಮೀರಿ ಮಾತನಾಡಬೇಡಿ: ಸುಧಾಕರ ರೆಡ್ಡಿ
‘ಕೆಲವು ನಾಯಕರು ನೀಡುತ್ತಿರುವ ಬಹಿರಂಗ ಹೇಳಿಕೆಗಳಿಂದ ಕಾರ್ಯಕರ್ತರಿಗೆ ನೋವಾಗುತ್ತದೆ. ಶಿಸ್ತು ಮೀರಿ ಹೇಳಿಕೆ ನೀಡಬೇಡಿ’ ಎಂದು ರಾಜ್ಯ ಬಿಜೆಪಿ ಸಹ ಉಸ್ತುವಾರಿ ಸುಧಾಕರ ರೆಡ್ಡಿ ತಾಕೀತು ಮಾಡಿದ್ದಾರೆ.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ. ಆದರೆ, ಜವಾಬ್ದಾರಿ ವಹಿಸಿದರೆ ನಿರ್ವಹಿಸುವೆ. ಎಲ್ಲರನ್ನೂ ಒಟ್ಟಾಗಿ ಕರೆದೊಯ್ಯವ ಸಾಮರ್ಥ್ಯವಿದೆ.ಮುರುಗೇಶ ನಿರಾಣಿ, ಮಾಜಿ ಸಚಿವ
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಕೆಲವು ನಾಯಕರು ಹೇಳಿಕೆಗಳನ್ನು ಗಮನಿಸಿದ್ದೇನೆ. ಶಾಂತಿವಾಗಿರಿ. ಇದನ್ನು ಎರಡೂ ಬಣಗಳಿಗೆ ಕಾರ್ಯಕರ್ತನಾಗಿ ಕೋರುತ್ತೇನೆ’ ಎಂದರು.
‘ಸಮಸ್ಯೆಗಳನ್ನು ಮಾತುಕತೆ ಮೂಲಕ ಬಗೆಹರಿಸಲು ಕೇಂದ್ರ ನಾಯಕತ್ವ ಶಕ್ತಿ ಹೊಂದಿದೆ. ಪಕ್ಷದ ಹಿತದೃಷ್ಟಿಯಿಂದ ಪಕ್ಷದೊಳಗಿನ ವೇದಿಕೆಯಲ್ಲಿ ಮಾತನಾಡಲು ಅವಕಾಶವಿದೆ’ ಎಂದು ಹೇಳಿದರು.
ಸಿದ್ದರಾಮಯ್ಯ ಸಂಪರ್ಕಿಸಿದ್ದ ರಾಮುಲು?
ಶ್ರೀರಾಮುಲು ಅವರು ಸಂಡೂರು ವಿಧಾನಸಭೆ ಉಪಚುನಾವಣೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಕಾಂಗ್ರೆಸ್ ಸೇರುವ ಇಚ್ಛೆ ವ್ಯಕ್ತಪಡಿಸಿದ್ದರು. ಆದರೆ, ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿರಲಿಲ್ಲ. ಕಾಂಗ್ರೆಸ್‌ನಲ್ಲಿ ವಾಲ್ಮೀಕಿ ಸಮುದಾಯದ ಪ್ರಭಾವಿ ನಾಯಕರು ಇರುವುದರಿಂದ ರಾಮುಲು ಅವರ ಅಗತ್ಯವಿಲ್ಲ ಎಂಬ ಅಭಿಪ್ರಾಯ ಹೊಂದಿದ್ದರು ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.