ADVERTISEMENT

ಭಯದ ವಾತಾವರಣ ಸೃಷ್ಟಿಸುವುದೇ ಪ್ರವೀಣ್ ನೆಟ್ಟಾರು ಹತ್ಯೆಯ ಹಿಂದಿನ ಉದ್ದೇಶ: ಎನ್‌ಐಎ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಆಗಸ್ಟ್ 2022, 2:57 IST
Last Updated 17 ಆಗಸ್ಟ್ 2022, 2:57 IST
ಪ್ರವೀಣ್ ನೆಟ್ಟಾರು
ಪ್ರವೀಣ್ ನೆಟ್ಟಾರು   

ನವದೆಹಲಿ: ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ ಭಯದ ವಾತಾವರಣ ಸೃಷ್ಟಿಸುವ ಉದ್ದೇಶದಿಂದಲೇ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಣಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಸದಸ್ಯ ಪ್ರವೀಣ್ ನೆಟ್ಟಾರು (32) ಅವರನ್ನು ಹತ್ಯೆ ಮಾಡಲಾಗಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಿಳಿಸಿದೆ.

ಪ್ರವೀಣ್‌ ನೆಟ್ಟಾರು ಹತ್ಯೆ ಪ್ರ‌ಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಎನ್‌ಐಎ, ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿದೆ.

ಭಯದ ವಾತಾವರಣ ಸೃಷ್ಟಿಸುವ ಉದ್ದೇಶದಿಂದಲೇ ಪ್ರವೀಣ್ ಅವರನ್ನು ಕೊಲ್ಲಲು ಸಂಚು ರೂಪಿಸಲಾಗಿತ್ತು ಎಂದು ಎನ್‌ಐಎ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದೆ ಎಂದು ಹಿಂದೂಸ್ತಾನ್ ಟೈಮ್ಸ್‌ ವರದಿ ಮಾಡಿದೆ.

ADVERTISEMENT

ಜುಲೈ 26ರಂದು ಸುಳ್ಯ ತಾಲ್ಲೂಕಿನ ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಬೈಕ್‌ನಲ್ಲಿ ಬಂದ ಅಪರಿಚಿತರು ತಲವಾರಿನಿಂದ ಪ್ರವೀಣ್ ಅವರ ತಲೆಗೆ ಹೊಡೆದು ಪರಾರಿಯಾಗಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭದಲ್ಲಿ ಮೃತಪಟ್ಟಿದ್ದರು.

ಜುಲೈ 26ರಂದು ರಾತ್ರಿ 8:30 ರ ಸುಮಾರಿಗೆ ಪ್ರವೀಣ್ ನೆಟ್ಟಾರು ಕೋಳಿ ಅಂಗಡಿಯನ್ನು ಮುಚ್ಚಿದ್ದರು. ಬಳಿಕ ಬೈಕ್‌ನಲ್ಲಿ ಮನೆಗೆ ತೆರಳಲು ಮುಂದಾಗಿದ್ದರು. ಆದರೆ, ರೇನ್ ಕೋಟ್ ತೆಗೆದುಕೊಳ್ಳುವುದನ್ನು ಮರೆತಿದ್ದೆ. ಆದ್ದರಿಂದ ನಾನು ಅದನ್ನು ತರಲು ಅಂಗಡಿಯೊಳಗೆ ಹೋಗಿದ್ದೆ. ಈ ಸಂದರ್ಭದಲ್ಲಿ ಅಂಗಡಿಯ ಹೊರಗೆ ಕೂಗಾಡುವುದು ಕೇಳಿಸಿತು ಕೂಡಲೇ ಅಂಗಡಿಯಿಂದ ಹೊರಗೆ ಬಂದಾಗ ನೆಟ್ಟಾರು ರಸ್ತೆಯಲ್ಲಿ ಬಿದ್ದಿರುವುದು ಕಂಡು ಬಂತು ಎಂದು ದೂರುದಾರ (ಕೆಲಸಗಾರ) ದೂರಿನಲ್ಲಿ ತಿಳಿಸಿದ್ದಾರೆ.

ಬೈಕ್‌ನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ತಲವಾರಿನಿಂದ ಪ್ರವೀಣ್ ಅವರ ತಲೆಗೆ ಹೊಡೆದು ಪರಾರಿಯಾಗುತ್ತಿರುವುದನ್ನು ನೋಡಿದೆ. ಕೂಡಲೇ ತೀವ್ರವಾಗಿ ಗಾಯಗೊಂಡಿದ್ದ ಪ್ರವೀಣ್ ಅವರನ್ನು ಆಂಬ್ಯುಲೆನ್ಸ್‌ನಲ್ಲಿ ಪುತ್ತೂರು ಪೇಟೆಯ ಪ್ರಗತಿ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ, ಆಸ್ಪತ್ರೆಯ ತಲುಪುವಷ್ಟರಲ್ಲಿ ಪ್ರವೀಣ್ ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದರು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಆರೋಪಿಗಳು ನ್ಯಾಯಾಂಗ ಬಂಧನಕ್ಕೆ
ಸುಳ್ಯ:
ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕಸ್ಟಡಿಯಲ್ಲಿದ್ದ ಪ್ರಮುಖ ಆರೋಪಿಗಳಾದ ಶಿಯಾಬುದ್ದೀನ್, ರಿಯಾಜ್ ಅಂಕತಡ್ಕ, ಬಶೀರ್ ಎಂಬುವವರ ಪೊಲೀಸ್ ಕಸ್ಟಡಿ ಅವಧಿ ಮುಗಿದ ಕಾರಣ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಆರೋಪಿಗಳಿಗೆ ಆ.24ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.

ಇವ‌ನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.