ADVERTISEMENT

ಶೇ 40 ಲಂಚ ವರದಿ: ಅಧ್ಯಯನಕ್ಕೆ ಸುಧೀರ್ ಕೃಷ್ಣ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 23:30 IST
Last Updated 13 ಸೆಪ್ಟೆಂಬರ್ 2025, 23:30 IST
<div class="paragraphs"><p>ವಿಧಾನಸೌಧ</p></div>

ವಿಧಾನಸೌಧ

   

ಬೆಂಗಳೂರು: ಹಿಂದಿನ ಬಿಜೆ‍ಪಿ ನೇತೃತ್ವದ ಸರ್ಕಾರದ ವಿರುದ್ಧ ಗುತ್ತಿಗೆದಾರರು ಮಾಡಿದ್ದ ಶೇ 40 ಲಂಚ ಆರೋಪ ಕುರಿತು ತನಿಖೆ ನಡೆಸಿ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನದಾಸ್‌ ನೇತೃತ್ವದ ವಿಚಾರಣಾ ಆಯೋಗ ಸಲ್ಲಿಸಿರುವ ವರದಿಯನ್ನು ಕೂಲಂಕಶವಾಗಿ ಅಧ್ಯಯನ ಮಾಡಿ ವರದಿ ಸಲ್ಲಿಸಲು ನಿವೃತ್ತ ಐಎಎಸ್ ಅಧಿಕಾರಿ ಸುಧೀರ್ ಕೃಷ್ಣ ಅಧ್ಯಕ್ಷತೆಯಲ್ಲಿ ರಾಜ್ಯ ಸರ್ಕಾರ ಸಮಿತಿ ರಚಿಸಿದೆ.

ನಿವೃತ್ತ ಮುಖ್ಯ ಎಂಜಿನಿಯರ್‌ಗಳಾದ ಶ್ರೀನಿವಾಸ್, ಕೆ.ಪಿ. ಶಿವಕುಮಾರ್, ರಾಷ್ಟ್ರೀಯ ಹೆದ್ದಾರಿ ದಕ್ಷಿಣ ವಲಯ ಲೆಕ್ಕಾಧಿಕಾರಿ (ಮುಖ್ಯ ಎಂಜಿನಿಯರ್‌) ಲೋಕೇಶ್ ವಿ. ಕುಕ್ಯಾನ, ಲೋಕೋಪಯೋಗಿ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ (ಸಂಪರ್ಕ ಮತ್ತು ಕಟ್ಟಡ), ಅಧೀಕ್ಷಕ ಎಂಜಿನಿಯರ್ (ಸಂಪರ್ಕ ಮತ್ತು ಕಟ್ಟಡ, ದಕ್ಷಿಣ)) ಈ ಐವರು ಸಮಿತಿಯ ಸದಸ್ಯರು. ಯೋಜನೆ ಮತ್ತು ರಸ್ತೆಗಳ ಆಸ್ತಿ ನಿರ್ವಹಣಾ ಕೇಂದ್ರದ ಮುಖ್ಯ ಎಂಜಿನಿಯರ್ ಸದಸ್ಯ ಕಾರ್ಯದರ್ಶಿ.

ADVERTISEMENT

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ 2019ರ ಜುಲೈ 26ರಿಂದ 2023ರ ಮಾರ್ಚ್‌ 31ರ ಅವಧಿಯಲ್ಲಿ ಬಿಬಿಎಂಪಿ, ಬಿಡಿಎ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಹಾಗೂ ಜಲಸಂಪನ್ಮೂಲ ಇಲಾಖೆಗೆ ಸಂಬಂಧಪಟ್ಟ ಕಾಮಗಾರಿಗಳ ಬಿಲ್‌ ಮಂಜೂರು ಮಾಡಲು ಶೇ 40 ಲಂಚ, ಅವ್ಯವಹಾರ ನಡೆದಿದೆ ಎಂದು ಗುತ್ತಿಗೆದಾರರು ಆರೋಪಿಸಿದ್ದರು. ಈ ಬಗ್ಗೆ ತನಿಖೆ ನಡೆಸಲು ಆಡಳಿತಾರೂಢ ಕಾಂಗ್ರೆಸ್‌ ಸರ್ಕಾರ ನಾಗಮೋಹನದಾಸ್‌ ನೇತೃತ್ವದಲ್ಲಿ ಆಯೋಗ ರಚಿಸಿತ್ತು.

ಆಯೋಗವು ಮೂರು ಲಕ್ಷ ಕಾಮಗಾರಿಗಳ ಪೈಕಿ, 1,729 ಕಾಮಗಾರಿಗಳನ್ನು ಮಾದರಿಯಾಗಿ ತೆಗೆದುಕೊಂಡು ಪರಿಶೀಲನೆ ನಡೆಸಿತ್ತು. ಕೆಲವು ಪ್ರಕರಣಗಳಲ್ಲಿ ವ್ಯತ್ಯಾಸಗಳಿವೆ. ಕೆಲವು ಕಾಮಗಾರಿಗಳಲ್ಲಿ ಹೆಚ್ಚು ಹಣ ಪಾವತಿಯಾಗಿದೆ. ಕೆಲವು ಸಂಶಯಾಸ್ಪದವಾಗಿವೆ. ಟೆಂಡರ್‌ ಪ್ರಕ್ರಿಯೆಯಲ್ಲಿ ಲೋಪವಾಗಿದೆ ಎಂದು ವರದಿ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.