ADVERTISEMENT

Karnataka bypoll result| ಹಣದ ಹೊಳೆ, ಅಭಿವೃದ್ಧಿ ಯೋಚನೆ ಗೆಲುವಿಗೆ ದಾರಿ: ಅಶೋಕ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2024, 15:55 IST
Last Updated 23 ನವೆಂಬರ್ 2024, 15:55 IST
ಆರ್. ಅಶೋಕ
ಆರ್. ಅಶೋಕ   

ಬೆಂಗಳೂರು: ಉಪ ಚುನಾವಣೆಯಲ್ಲಿ ಅಧಿಕಾರಿಗಳು, ಗುತ್ತಿಗೆದಾರರು ಸರ್ಕಾರದ ಪರವಾಗಿ ಕೆಲಸ ಮಾಡಿದ್ದಾರೆ ಹಣದ ಹೊಳೆ ಹರಿಸಿದ ಕಾಂಗ್ರೆಸ್‌ ವಿಜಯ ಸಾಧಿಸಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಆರೋಪಿಸಿದರು.

ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ಹಣದ ಹೊಳೆಯ ಜತೆಗೆ, ಆಡಳಿತದಲ್ಲಿರುವ ಸರ್ಕಾರದ ಶಾಸಕ ಇದ್ದರೆ ಅಭಿವೃದ್ಧಿಯಾಗುತ್ತದೆ. ಇಲ್ಲದಿದ್ದರೆ ಕ್ಷೇತ್ರ ಅಭಿವೃದ್ಧಿಯಿಂದ ವಂಚಿತವಾಗುತ್ತದೆ ಎನ್ನುವ ಕಾರಣಕ್ಕೂ ಜನರು ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಈ ಫಲಿತಾಂಶದ ಕುರಿತು ಪಕ್ಷದ ವೇದಿಕೆಯಲ್ಲಿ ಚರ್ಚಿಸಲಾಗುವುದು. ಕಾಂಗ್ರೆಸ್‌ ಸರ್ಕಾರದ ಹಗರಣಗಳನ್ನು ಬಯಲಿಗೆಳೆಯುವ ಕೆಲಸ ಮಾಡಲಾಗುವುದು ಎಂದರು.

ADVERTISEMENT

ಶಿಗ್ಗಾವಿ, ಚನ್ನಪಟ್ಟಣದ ಅಭ್ಯರ್ಥಿಗಳ ಆಯ್ಕೆ ವಿಳಂಬವಾಯಿತು. ಸಂಡೂರಿನ ಮೈತ್ರಿ ಅಭ್ಯರ್ಥಿ ಉತ್ತಮ ಸ್ಪರ್ಧೆ ನೀಡಿದ್ದಾರೆ. ಎರಡು ಬಾರಿ ಸೋತಿರುವುದು ಚನ್ನಪಟ್ಟಣದಲ್ಲಿ ನಿಖಿಲ್‌ಗೆ ವರವಾಗಬೇಕಿತ್ತು. ನಿರೀಕ್ಷೆ ಸುಳ್ಳಾಗಿದೆ. ಇದು ಸಿದ್ದರಾಮಯ್ಯ ಅಥವಾ ಡಿ.ಕೆ. ಶಿವಕುಮಾರ್‌ ಗೆಲುವಲ್ಲ. ಹಣ, ಅಧಿಕಾರದ ಗೆಲುವು. ಇದು ಸಾಮಾನ್ಯ ಫಲಿತಾಂಶ, ಅದಕ್ಕಾಗಿ ಕಾಂಗ್ರೆಸ್‌ ಬೀಗಬೇಕಿಲ್ಲ ಎಂದರು.

ಮಹಾರಾಷ್ಟ್ರದಲ್ಲಿ ಮುಸ್ಲಿಮರಿಗೆ ಮೀಸಲಾತಿ ಕೊಡುವುದಾಗಿ ಕಾಂಗ್ರೆಸ್‌ ಹೇಳಿತ್ತು. ಆದರೆ, ಜನರು ಅವರನ್ನು ತಿರಸ್ಕರಿಸಿದ್ದಾರೆ ಎಂದರು.

ನಿರಾಸೆ ಮೂಡಿಸಿದ ಫಲಿತಾಂಶ: ವಿಜಯೇಂದ್ರ

‘ಉಪ ಚುನಾವಣೆಯ ಫಲಿತಾಂಶ ನಿರಾಸೆ ಮೂಡಿಸಿದೆ. ಶಿಗ್ಗಾವಿ ಸೋಲು ಆಘಾತ ತಂದಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು. ‘ಗೆಲ್ಲುವ ವಿಶ್ವಾಸವಿತ್ತು. ಮೈತ್ರಿ ಪಕ್ಷಗಳಿಗೆ ಮೂರು ಕ್ಷೇತ್ರಗಳಲ್ಲೂ ಹಿನ್ನಡೆಯಾಗಿದೆ. ಗೆಲುವು ಏಕೆ ಸಾಧ್ಯವಾಗಿಲ್ಲ ಎನ್ನುವ ಕುರಿತು ಎರಡೂ ಪಕ್ಷಗಳ ಮುಖಂಡರು ಕುಳಿತು ಚರ್ಚಿಸುತ್ತೇವೆ. ತಪ್ಪು ಸರಿಪಡಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ’ ಎಂದರು. ‘ಸಂಡೂರು ಕ್ಷೇತ್ರದಲ್ಲಿ ಮೊದಲ ಬಾರಿ ಬಿಜೆಪಿ ಸುಮಾರು 80 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದಿದೆ. ಗೆಲುವಿಗೆ ಹೆಚ್ಚಿನ ಶ್ರಮ ಹಾಕಿದ್ದೆವು. ಶಿಗ್ಗಾವಿಯಲ್ಲಿ ಬಸವರಾಜ ಬೊಮ್ಮಾಯಿ ಅವರು ಬಹಳ ಕೆಲಸ ಮಾಡಿದ್ದಾರೆ. ಬಿಜೆಪಿ ಕಾರ್ಯಕರ್ತರು ಹಗಲು–ರಾತ್ರಿ ಶ್ರಮ ಹಾಕಿದ್ದರು. ಪಕ್ಷದ ಎಲ್ಲ ಹಿರಿಯರು ನಾಯಕರು ಕುಳಿತು ಸೋಲಿನ ವಿಮರ್ಶೆ ಮಾಡುತ್ತೇವೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.