ADVERTISEMENT

ಡಿಸೆಂಬರ್‌ಗೆ ಸಂಪುಟ ವಿಸ್ತರಣೆ ಸಾಧ್ಯತೆ: ಯತೀಂದ್ರ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 0:05 IST
Last Updated 13 ಅಕ್ಟೋಬರ್ 2025, 0:05 IST
ಡಾ.ಯತೀಂದ್ರ ಸಿದ್ದರಾಮಯ್ಯ
ಡಾ.ಯತೀಂದ್ರ ಸಿದ್ದರಾಮಯ್ಯ   

ರಾಯಚೂರು: ‘ಡಿಸೆಂಬರ್‌ನಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಆಗುವ ಸಾಧ್ಯತೆ ಇದೆ’ ಎಂದು ವಿಧಾನ ಪರಿಷತ್‌ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಇಲ್ಲಿ ಹೇಳಿದರು.

‘ಅನೇಕ ಹಿರಿಯರಿಗೆ ಸಚಿವ ಸ್ಥಾನ ಕೊಡಬೇಕು ಎನ್ನುವ ಬೇಡಿಕೆಯಿದೆ. ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಂತೆಯೇ ಮುಖ್ಯಮಂತ್ರಿಯವರು ಸೂಚ್ಯವಾಗಿ ಹೇಳಿಕೆ ಕೊಟ್ಟಿದ್ದಾರೆ’ ಎಂದು ನಗರದಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

‘ಮಾಜಿ ಸಂಸದ ಪ್ರತಾಪಸಿಂಹ ಅಪ್ರಸ್ತುತ ರಾಜಕಾರಣಿ. ಅವರ ಪಕ್ಷದವರೇ ಕೇಳುವುದಿಲ್ಲ. ನಾವೇಕೆ ಅವರ ಮಾತಿಗೆ ಬೆಲೆ ಕೊಡಬೇಕು. ಆಧಾರ ರಹಿತ ಟೀಕೆಗಳಿಗೆ ಅರ್ಥವಿಲ್ಲ’ ಎಂದರು.

ADVERTISEMENT

‘ಬಿಜೆಪಿ ಶಾಸಕ ಮುನಿರತ್ನ ಕಾಂಗ್ರೆಸ್‌ನಲ್ಲೇ ಇದ್ದವರು. ಸಲುಗೆಯಿಂದ ಅವರನ್ನು ‘ಕರಿ ಟೋಪಿ’ ಎಂದು ಕರೆದಿರಬಹುದು. ಅದನ್ನು ದೊಡ್ಡದು ಮಾಡುವ ಅವಶ್ಯಕತೆಯಿಲ್ಲ‘ ಎಂದು ಪ್ರತಿಕ್ರಿಯಿಸಿದರು. 

‘ಡಿ.ಕೆ.ಶಿವಕುಮಾರ್ ಅವರಿಗೆ ಶಿಷ್ಟಾಚಾರ ಗೊತ್ತಿದೆ. ಡಿಸಿಎಂ ಭೇಟಿ ವೇಳೆ ಶಾಸಕರನ್ನು ಕರಿಯಲೇಬೇಕು  ಎಂದಿಲ್ಲ. ಮುನಿರತ್ನ ಅವರಿಗೆ ಜನರ ಕಾಳಜಿ ಇದ್ದರೆ ಹೋಗಬೇಕಿತ್ತು‘ ಎಂದು ತಿರುಗೇಟು ನೀಡಿದರು.

ರಾಜ್ಯದಲ್ಲಿ ಐದು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ಸ್ಟ್ಯಾಂಪ್ ಪೇಪರ್ ಮೇಲೆ ಬರೆದು ಕೊಡಬೇಕಾ?
ಶರಣಬಸಪ್ಪ ದರ್ಶನಾಪುರ, ಸಚಿವ

ಹೈಕಮಾಂಡ್ ಸೂಚಿಸದೇ ವಿಸ್ತರಣೆ ಇಲ್ಲ –ಮಹದೇವಪ್ಪ

‘ಯಾರು ಏನೇ ಹೇಳಿದರೂ ಹೈಕಮಾಂಡ್ ಸೂಚಿಸುವವರೆಗೆ ಸಂಪುಟ ವಿಸ್ತರಣೆ ನಡೆಯುವುದಿಲ್ಲ’ ಎಂದು ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.  ಮಡಿಕೇರಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿರುವುದು ಇದುವರೆಗೂ ಕಂಡು ಬಂದಿಲ್ಲ’ ಎಂದರು. ‘ಮುಖ್ಯಮಂತ್ರಿ ಅವರು ಎಲ್ಲ ಸಚಿವರನ್ನೂ ಔತಣಕೂಟಕ್ಕೆ ಕರೆದಿದ್ದಾರೆ. ನಾನೂ ಹೋಗುವೆ. ಇದರಲ್ಲಿ ವಿಶೇಷ ಅರ್ಥ ಇಲ್ಲ’ ಎಂದು ಪ್ರತಿಕ್ರಿಯಿಸಿದರು.

ಹೊಸ ಮುಖಗಳಿಗೆ ಸ್ಥಾನ ಸಾಧ್ಯತೆ: ಜಮೀರ್

 ‘ಐದು ವರ್ಷ ಸಿದ್ದರಾಮಯ್ಯ ಅವರೇ ಸಿ.ಎಂ ಆಗಿರುವರು. ನವೆಂಬರ್‌ ಕ್ರಾಂತಿ ಮಾಧ್ಯಮಗಳ ಸೃಷ್ಟಿ’ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು. ‘ನವೆಂಬರ್‌ಗೆ ಸಂಪುಟ ಪುನರ್‌ರಚನೆ ಆಗಲಿದ್ದು ಹೊಸಮುಖಗಳಿಗೆ ಸ್ಥಾನ ನೀಡುವ ಸಾಧ್ಯತೆ ಇದೆ’ ಎಂದು ಭಾನುವಾರ ಸುದ್ದಿಗಾರರಿಗೆ ತಿಳಿಸಿದರು. ‘ಮುಖ್ಯಮಂತ್ರಿ ಆಗುವ ಆಸೆ ಕಾಂಗ್ರೆಸ್‌ನಲ್ಲಿ ಹಲವು ನಾಯಕರಿಗಿದೆ. ಅದಕ್ಕಾಗಿ ಪಕ್ಷದಲ್ಲಿ ಒಳಜಗಳ ಇಲ್ಲ. ಜಗಳ ಇರುವುದು ಬಿಜೆಪಿಯಲ್ಲಿ’ ಎಂದರು.

ಸಚಿವ ಸ್ಥಾನಕ್ಕೆ ಬಡಿದಾಟ: ಜೋಶಿ ವ್ಯಂಗ್ಯ

 ‘ಸಿದ್ದರಾಮಯ್ಯ ತಮಗೆ ಬೇಕಾದ ಸಚಿವರು ಶಾಸಕರನ್ನು ಡಿನ್ನರ್‌ ಮೀಟಿಂಗ್‌ಗೆ ಕರೆದಿದ್ದಾರೆ. ಸಂಪುಟದಲ್ಲಿ ಸ್ಥಾನ ಪಡೆಯಲು ಮತ್ತು ಸ್ಥಾನ ಉಳಿಸಿಕೊಳ್ಳಲು ಕಾಂಗ್ರೆಸ್‌ ಶಾಸಕರು ಸಚಿವರು ಬಡಿದಾಡುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದರು. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು‘ಪಕ್ಷದಲ್ಲಿನ ಈ ಗೊಂದಲದಿಂದಾಗಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ’ ಎಂದರು. ಶಾಸಕ ಮುನಿರತ್ನ ಅವರಿಗೆ ಡಿ.ಕೆ. ಶಿವಕುಮಾರ್‌ ಅವರು ‘ಕರಿ ಟೋಪಿ’ ಎಂದು ವ್ಯಂಗ್ಯವಾಡಿದ್ದು ಖಂಡನೀಯ. ‘‌‌‌ಧೈರ್ಯವಿದ್ದರೆ ಅವರು ಮುಸ್ಲಿಮರು ಧರಿಸುವ ಟೋಪಿಗೆ ಜಾಲರಿ ಟೋಪಿ ಎಂದು ಕರೆಯಲಿ?’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.