ADVERTISEMENT

Caste Census | ಸಮೀಕ್ಷೆಗೆ ಆತುರ: ಆಯೋಗದಲ್ಲಿ ಅಪಸ್ವರ

ಜಾತಿವಾರು ಸಮೀಕ್ಷೆ ಇಂದಿನಿಂದ * ಅಂತಿಮಗೊಳ್ಳದ ಆ್ಯಪ್‌, ಪೂರ್ಣವಾಗದ ತರಬೇತಿ * ಪಾರದರ್ಶಕತೆ ಕುರಿತು ಪ್ರಶ್ನೆ

ರಾಜೇಶ್ ರೈ ಚಟ್ಲ
Published 22 ಸೆಪ್ಟೆಂಬರ್ 2025, 0:30 IST
Last Updated 22 ಸೆಪ್ಟೆಂಬರ್ 2025, 0:30 IST
<div class="paragraphs"><p>ಮಧುಸೂದನ್‌ ಆರ್‌. ನಾಯ್ಕ್</p></div>

ಮಧುಸೂದನ್‌ ಆರ್‌. ನಾಯ್ಕ್

   

ಬೆಂಗಳೂರು: ಮೊಬೈಲ್‌ ಆ್ಯಪ್ ಅಂತಿಮಗೊಳ್ಳದೆ, ಗಣತಿದಾರರಿಗೆ ತರಬೇತಿ ನೀಡದೆ, ಜಾತಿ ಪಟ್ಟಿ ವಿವಾದದ ನಡುವೆಯೇ ತರಾತುರಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿವಾರು ಸಮೀಕ್ಷೆ) ಆರಂಭವಾಗುತ್ತಿರುವುದು ಹಿಂದುಳಿದ ವರ್ಗಗಳ ಆಯೋಗದಲ್ಲೇ ಅಸಮಾಧಾನಕ್ಕೆ ಕಾರಣವಾಗಿದೆ.

ಸೋಮವಾರದಿಂದ (ಸೆ. 22) ಅ. 7ರವರೆಗೆ ಈ ಸಮೀಕ್ಷೆ ನಡೆಯಲಿದೆ. ಆದರೆ, ಸಮೀಕ್ಷೆಗೆ ಅಗತ್ಯವಾದ ಡಿಜಿಟಲ್‌ ಆ್ಯಪ್‌ನ ಫೀಚರ್ಸ್‌ಗಳು ಸಿದ್ಧವಾಗಿ ಅಳವಡಿಕೆ ಆಗಿಲ್ಲ. ಜಿಲ್ಲಾ, ತಾಲ್ಲೂಕು ಮಟ್ಟಕ್ಕೆ ಇನ್ನೂ ಸಮೀಕ್ಷೆಯ ಕೈಪಿಡಿ ತಲುಪಿಲ್ಲ. ಗಣತಿದಾರರಿಗೆ ತರಬೇತಿಯೂ ಪೂರ್ಣ ಆಗಿಲ್ಲ. ಪಾರದರ್ಶಕತೆಯಿಂದ ಕೂಡಿದ ಚರ್ಚೆಗಳೂ ನಡೆದಿಲ್ಲ. ಅದಕ್ಕೂ ಮೊದಲೇ ಸಮೀಕ್ಷೆ ಆರಂಭಿಸುವ ನಿರ್ಧಾರ ಆಯೋಗದಲ್ಲಿ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ.

ADVERTISEMENT

ಗಡಿಬಿಡಿಯಲ್ಲಿ ಸಮೀಕ್ಷೆ ಆರಂಭಿಸುವ ಬದಲು, ಕನಿಷ್ಠ ಒಂದು ತಿಂಗಳು ಮುಂದೂಡುವಂತೆ ಆಯೋಗದ ಸದಸ್ಯರ ಪೈಕಿ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಮೀಕ್ಷೆಗೆ ಮಾಡಿಕೊಂಡಿರುವ ಸಿದ್ಧತೆಯ ವಿಚಾರಗಳನ್ನು ಉಲ್ಲೇಖಿಸಿ, ತಮ್ಮ ಅಸಮ್ಮತಿ ವ್ಯಕ್ತಪಡಿಸಿ ಸದಸ್ಯ ರೊಬ್ಬರು ಲಿಖಿತವಾಗಿ ಆಯೋಗದ ಅಧ್ಯಕ್ಷ ಮಧುಸೂದನ್ ಆರ್‌. ನಾಯ್ಕ್‌ ಅವರಿಗೆ ಆಕ್ಷೇಪ ಸಲ್ಲಿಸಿದ್ದಾರೆ ಎಂದು ಗೊತ್ತಾಗಿದೆ.

ಸಮೀಕ್ಷೆಗೆ ಸಂಬಂಧಿಸಿದಂತೆ ಆಯೋಗದ ಸಭೆಯಲ್ಲಿ ವಿಸ್ತೃತವಾಗಿ ಚರ್ಚೆಯಾಗಿಲ್ಲ. ಕೆಲವು ತೀರ್ಮಾನ ಗಳನ್ನುಯಾವುದೇ ಪರಿಶೀಲನೆ ನಡೆಸದೆ, ಆತುರಾತುರವಾಗಿ ತೆಗೆದುಕೊಳ್ಳಲಾಗಿದೆ. ಸಮೀಕ್ಷೆಯ ಕೈಪಿಡಿಯ ಕರಡು ಪ್ರತಿಯನ್ನೂ ಸರಿಯಾಗಿ ಪರಿಶೀಲಿಸದೆ, ಸುಮಾರು 75 ಸಾವಿರದಷ್ಟು ಮುದ್ರಿಸ ಲಾಗಿತ್ತು. ತಪ್ಪುಗಳಿರುವುದುಗೊತ್ತಾಗುತ್ತಿದ್ದಂತೆ ಹೊಸತಾಗಿ ಕೈಪಿಡಿ ಮುದ್ರಿಸಲಾಗಿದೆ. ಸಮೀಕ್ಷೆಯ ಕೈಪಿಡಿ ಸಹಿತ ತರಬೇತಿ ಕೊಡಬೇಕು. ಆದರೆ, ಇನ್ನೂ ತರಬೇತಿ ಕೆಲಸ ಶೇ 60ರಷ್ಟೂ ಆಗಿಲ್ಲ. ಸಮೀಕ್ಷೆಗೆ ಅಗತ್ಯವಾದ ಪರಿಕರಗಳಿರುವ ಕಿಟ್‌ ಕೂಡಾ ಗಣತಿದಾರರ ಕೈಸೇರಿಲ್ಲ.ಸಮೀಕ್ಷೆಗೆ ಸಂಬಂಧಿಸಿದಂತೆ ಪ್ರಶ್ನಾವಳಿಗಳನ್ನು ಅಂತಿಮಗೊಳಿಸಲು ಆಗಸ್ಟ್‌ 29ರಂದು ಆಯೋಗದ ಸಭೆ ನಡೆದಿತ್ತು. ಪ್ರಶ್ನಾವಳಿಯಲ್ಲಿ ಹಲವು ಗಂಭೀರ ನ್ಯೂನತೆಗಳಿದ್ದು, ಅದನ್ನು ಆಧರಿಸಿ ಮಾಡುವ ಸಮೀಕ್ಷೆಯು ಗಂಭೀರ ಲೋಪಗಳಿಂದ ಕೂಡಿರಲಿದೆ ಎಂದು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರು.


ಸಿದ್ಧಪಡಿಸಿರುವ ಪ್ರಶ್ನಾವಳಿಯಲ್ಲಿ ಶೇ 70ಕ್ಕೂ ಹೆಚ್ಚಿನ ಪ್ರಶ್ನೆಗಳನ್ನು ಯಾವುದೇ ಚರ್ಚೆಯಿಲ್ಲದೇ ಈ ಹಿಂದಿನ ಕಾಂತರಾಜ ಆಯೋಗದ ಕೈಪಿಡಿಯಿಂದ ಯಥಾವತ್ ಅಳವಡಿಸಿಕೊಳ್ಳಲಾಗಿದೆ. ಉಳಿದ ಶೇ 30 ಪ್ರಶ್ನೆಗಳಿಗೆ ಆಯೋಗದ ಸದಸ್ಯರಿಂದ ಯಾವುದೇ ಸಲಹೆ– ಸೂಚನೆಗಳನ್ನು ಪಡೆದಿಲ್ಲ ಎನ್ನುವ ಆಕ್ಷೇಪವಿದೆ.

ಪ್ರಶ್ನಾವಳಿಗೆ ಕೆಲವು ಪ್ರಶ್ನೆಗಳನ್ನು ಬಾಹ್ಯ ಮೂಲದಿಂದ ಸ್ವೀಕರಿಸಿ ಅಳವಡಿಸಲಾಗಿದೆ. ಈ ರೀತಿ ಸೇರ್ಪಡೆ ಮಾಡುವ ಉದ್ದೇಶವನ್ನು ಆಯೋಗದ ಸಭೆಯಲ್ಲಿ ಚರ್ಚಿಸಿಲ್ಲ. ಹೀಗಾಗಿ ಪ್ರಶ್ನೆಗಳು ಪಾರದರ್ಶಕವಾಗಿಲ್ಲ.  ವಿಶ್ವಾಸಾರ್ಹ ದತ್ತಾಂಶದಿಂದ ಕೂಡಿದ ಸಮೀಕ್ಷೆಯು ಜನರಿಗೆ ನಂಬಲರ್ಹವಾಗಿರುತ್ತದೆ. ಸುಮಾರು 60 ಮುಖ್ಯ ಪ್ರಶ್ನಾವಳಿಗಳು ಹಾಗೂ ಇತರ ಉಪ ಪ್ರಶ್ನಾವಳಿಗಳಿಗೆ ಸಂಬಂಧಿಸಿದಂತೆ ತಜ್ಞರ ಜೊತೆ ಆನ್‌ಲೈನ್‌ ಮೂಲಕ ಕೇವಲ ಔಪಚಾರಿಕವಾಗಿ ಸಭೆ ನಡೆಸಲಾಗಿದೆ ಎಂಬ ವಿರೋಧವೂ ವ್ಯಕ್ತವಾಗಿದೆ.

ಪ್ರಶ್ನಾವಳಿಯನ್ನು ಸಾಮಾಜಿಕ ಹಾಗೂ ಶೈಕ್ಷಣಿಕ ಹಿಂದುಳಿದಿರುವಿಕೆ ಅರಿಯಲು ವಿಶ್ವಾಸಾರ್ಹ ದತ್ತಾಂಶ ಹಾಗೂ ವರದಿ ಪಡೆಯುವ ಹಿತದೃಷ್ಟಿಯಿಂದ ಅಗತ್ಯವಿರುವ ಎಲ್ಲ ಅಂಶಗಳನ್ನು ವೈಜ್ಞಾನಿಕವಾಗಿ ಅಳವಡಿಸಿ ಸಿದ್ಧಪಡಿಸಿಲ್ಲ. ಎಲ್ಲ ಪ್ರಶ್ನೆ ಗಳನ್ನು ಹಲವು ದೃಷ್ಟಿಕೋನಗಳಿಂದ ಪರಿಶೀಲಿಸಿ, ಸಭೆಯಲ್ಲಿ ಚರ್ಚಿಸಿ ಅಳ ವಡಿಸಿಕೊಂಡಿರುವುದಿಲ್ಲ. ಅಲ್ಲದೆ, ತಜ್ಞರ ಸಲಹೆಯನ್ನೂ ಗಣನೆಗೆ ತೆಗೆದುಕೊಂಡಿಲ್ಲ. ಈ ಎಲ್ಲ ಕಾರಣಗಳಿಗೆ ಸಿದ್ಧಪಡಿಸಿರುವ ಪ್ರಶ್ನಾವಳಿಯ ಕುರಿತಂತೆ ಕ್ಷೇತ್ರಮಟ್ಟದಲ್ಲಿ ಪ್ರಾಯೋಗಿಕವಾಗಿ ಅಧ್ಯಯನ ಮಾಡಿ, ಸಾಧಕ– ಬಾಧಕಗಳ ಬಗ್ಗೆ ವಿಮರ್ಶಿಸಿ ಅಗತ್ಯ ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಂಡು ಪುನರ್‌ ಪರಿಷ್ಕರಿಸಿ ಆಯೋಗದ ಸಭೆಯಲ್ಲಿ ವಿವರವಾಗಿ ಚರ್ಚಿಸಬೇಕು. ಅಂತಿಮವಾಗಿ ಕ್ರಮಬದ್ಧವಾಗಿ ತೀರ್ಮಾನಿಸಿ, ನಂತರ ಗಣತಿದಾರರಿಗೆ ಸಮೀಕ್ಷೆಗೆ ನೀಡಲು ಕ್ರಮ ವಹಿಸಬೇಕು ಎಂದು ಸದಸ್ಯರು ಆಗ್ರಹಿಸಿದ್ದರು ಎಂದು ಗೊತ್ತಾಗಿದೆ.

ಮೀಟರ್‌ ರೀಡರ್‌ಗಳಿಂದ ಮನೆಪಟ್ಟಿ ಮಾಡುವ ವಿಧಾನವೂ ಹೊಸ ಪ್ರಯೋಗ. ಯಾವುದೇ ಪ್ರಯೋಗ ಮಾಡುವ ಮೊದಲು ಪ್ರಾಯೋಗಿಕವಾಗಿ ಮಾಡಿ, ವರದಿ ಸಿದ್ಧಪಡಿಸಿ, ಸಾಧಕ– ಬಾಧಕಗಳ ಬಗ್ಗೆ ಆಯೋಗದ ಸಭೆಯಲ್ಲಿ ಚರ್ಚಿಸಿ, ನಂತರ ತೀರ್ಮಾನ ಮಾಡಬೇಕಿತ್ತು. ಆದರೆ, ಇಂತಹ ವೈಜ್ಞಾನಿಕ ಕ್ರಮ ಆಗಿಲ್ಲ. ಮಲೆನಾಡು, ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಮನೆಗಳು ದೂರ ದೂರವಿದ್ದು, ಆ ಪ್ರದೇಶಗಳಿಗೆ ಮೀಟರ್‌ ರೀಡರ್‌ ಭೇಟಿ ನೀಡದಿರುವುದು ಆಯೋಗದ ಸಭೆಯಲ್ಲಿ ಚರ್ಚೆಯಾಗಿದೆ. ಅಂತಹ ಪ್ರದೇಶಗಳಲ್ಲಿ ಆಯಾ ಪಂಚಾಯಿತಿಗಳಿಗೆ ಮನೆಪಟ್ಟಿ ಸಿದ್ಧಪಡಿಸುವ ಹೊಣೆಗಾರಿಕೆ ವಹಿಸಲು ತೀರ್ಮಾನಿಸಿದ್ದರೂ ಈ ದಿನದವರೆಗೆ ಯಾವುದೇ ಕ್ರಮ ಆಗಿಲ್ಲ. ವಾಸದ ಮನೆಗಳ ಪಟ್ಟಿ ಮಾತ್ರ ಮಾಡಲಾಗುತ್ತಿದ್ದು, ವಾಣಿಜ್ಯ ಕಟ್ಟಡಗಳಲ್ಲಿ ಅವುಗಳ ನಿರ್ವಹಣೆಗೆ ನೆಲಸಿರುವ ಕುಟುಂಬಗಳು ಸಮೀಕ್ಷೆಯಿಂದ ಕೈಬಿಟ್ಟು ಹೋಗಲಿವೆ. ತೃಪ್ತಿಕರವಾದ ಮನೆಪಟ್ಟಿ ಹಾಗೂ ಗಣತಿ ಬ್ಲಾಕ್‌ಗಳ ಪ್ರಕ್ರಿಯೆ ನಡೆದಿರುವ ಬಗ್ಗೆ ಮಾಹಿತಿ ಪಡೆಯದೆ ಸಮೀಕ್ಷೆ ನಡೆಸುವುದು ಮುಂದೆ ಸಂಶಯಕ್ಕೆ ಎಡೆ ಮಾಡಿಕೊಡಬಹುದು. ಹೀಗಾಗಿ ವಿದ್ಯುತ್‌ ಮೀಟರ್‌ ಸಂಪರ್ಕ ಬಳಸಿಕೊಂಡು ಮನೆಪಟ್ಟಿ ಮಾಡುವ ಕ್ರಮಕ್ಕೂ ಸದಸ್ಯರ ನಡುವೆ ಒಮ್ಮತ ಮೂಡಿಲ್ಲ ಎಂದೂ ಗೊತ್ತಾಗಿದೆ.

‘ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ’

ಸಮೀಕ್ಷೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಗೃಹಬಳಕೆ ವಿದ್ಯುತ್‌ ಮೀಟರ್‌ ಸಂಪರ್ಕ ಆಧರಿಸಿ 2 ಕೋಟಿಗೂ ಹೆಚ್ಚು ಮನೆಗಳನ್ನು ಗುರುತಿಸಿ ಜಿಯೋಟ್ಯಾಗಿಂಗ್‌ ಮಾಡಿ ಗಣತಿಯ ಬ್ಲಾಕ್‌ನ ನಕ್ಷೆ ರೂಪಿಸುವ ಕಾರ್ಯ ಪೂರ್ಣಗೊಂಡಿದೆ. ಇದರಿಂದ ಗಣತಿದಾರರು ಸುಲಭವಾಗಿ ಮನೆಗಳನ್ನು ತಲುಪಿ ಸಮೀಕ್ಷೆ ನಡೆಸಲು ನೆರವಾಗಲಿದೆ. ಒಬ್ಬ ಗಣತಿದಾರನಿಗೆ 140ರಿಂದ 150 ಮನೆಗಳನ್ನು ಹೊಂದಿರುವ ಬ್ಲಾಕ್‌ ಹಂಚಿಕೆ ಮಾಡಲಾಗಿದೆ. 1.75 ಲಕ್ಷ ಶಿಕ್ಷಕರು ಹಾಗೂ ಇತರೆ ಸಿಬ್ಬಂದಿ ಸಮೀಕ್ಷೆ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
ಮಧುಸೂದನ್‌ ಆರ್‌. ನಾಯ್ಕ್, ಅಧ್ಯಕ್ಷರು, ಹಿಂದುಳಿದ ವರ್ಗಗಳ ಆಯೋಗ

2 ಕೋಟಿ ನಮೂನೆಗೆ ₹2 ಕೋಟಿ ವೆಚ್ಚ

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಕುರಿತಂತೆ ಆಶಾ ಕಾರ್ಯಕರ್ತೆಯರ ಮೂಲಕ ಜಾಗೃತಿ ಮೂಡಿಸಲು ಸರ್ಕಾರ ಯೋಜನೆ ರೂಪಿಸಿತ್ತು. ಆ ಉದ್ದೇಶದಿಂದ ಪ್ರತಿ ನಮೂನೆಗೆ ತಲಾ ₹1 ರಂತೆ 2 ಕೋಟಿ ನಮೂನೆಗಳನ್ನು ಮುದ್ರಿಸಲಾಗಿತ್ತು. ಆದರೆ, ಹಲವು ಬೇಡಿಕೆಗಳನ್ನು ಮುಂದಿಟ್ಟು ಆಶಾ ಕಾರ್ಯಕರ್ತೆಯರು ಜಾಗೃತಿ ಅಭಿಯಾನಕ್ಕೆ ಕೈಜೋಡಿಸಲು ಹಿಂದೇಟು ಹಾಕಿದ್ದಾರೆ. ಪರಿಣಾಮ, ನಮೂನೆಗಳನ್ನು ಮನೆ–ಮನೆಗೆ ವಿತರಿಸಿ ಮೊದಲೇ ಜಾಗೃತಿ ಮೂಡಿಸುವ ಮೂಲಕ ಸಮೀಕ್ಷೆಯನ್ನು ಅತ್ಯಂತ ಸಮರ್ಪಕವಾಗಿ ಮಾಡಬೇಕೆಂಬ ಉದ್ದೇಶ ಈಡೇರಿಲ್ಲ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಗಳು ತಿಳಿಸಿವೆ.

ಎರಡು ಬಾರಿ ಕೈಪಿಡಿ ಮುದ್ರಣ

ಸಮೀಕ್ಷೆಯ ಮಾಹಿತಿಯನ್ನು ಒಳಗೊಂಡ ಕೈಪಿಡಿಯ ಕರಡು ಪ್ರತಿಯನ್ನು ಸರಿಯಾಗಿ ಪರಿಶೀಲಿಸದೆ ಆತುರಾತುರವಾಗಿ ಸುಮಾರು 75 ಸಾವಿರ ಪ್ರತಿಗಳನ್ನು ಮುದ್ರಿಸಲಾಗಿತ್ತು. ಹೀಗೆ ಮುದ್ರಿಸಿದ ಪ್ರತಿಯಲ್ಲಿ ಹಲವು ತಪ್ಪುಗಳು ನುಸುಳಿಕೊಂಡ ಕಾರಣ ಎರಡನೇ ಬಾರಿಗೆ ಕೈಪಿಡಿ ಮುದ್ರಿಸಲಾಗಿದೆ. ಮೊದಲ ಬಾರಿ ಮುದ್ರಿಸಲು ಸುಮಾರು ₹30 ಲಕ್ಷ ವೆಚ್ಚವಾಗಿದೆ ಎಂದೂ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.