
ಆಡಳಿತಾರೂಢ ಕಾಂಗ್ರೆಸ್ ಪಾಳಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಭಾನುವಾರವೂ ಮುಂದುವರಿದಿದೆ. ‘ಮುಖ್ಯಮಂತ್ರಿ ಬದಲಾಗುತ್ತಾರೆ ಎಂದು ಯಾರು ಹೇಳಿದರು’ ಎಂದು ಪ್ರಶ್ನಿಸುತ್ತಲೇ ಹಲವು ಸಚಿವರು, ಪಕ್ಷ ಅದನ್ನು ತೀರ್ಮಾನಿಸುತ್ತದೆ ಎಂದು ಒತ್ತಿ ಹೇಳುತ್ತಿದ್ದಾರೆ. ಸಚಿವ, ಶಾಸಕರ ಈ ಮಾತುಗಳು ಅಧಿಕಾರ ಬದಲಾವಣೆಯ ಕಿಡಿಗೆ ತಿದಿ ಒತ್ತುತ್ತಲೇ ಇವೆ. ಪಕ್ಷದ ನಾಯಕರ ಸಾಲು–ಸಾಲು ದೆಹಲಿ ಭೇಟಿಗಳೂ ಇದಕ್ಕೆ ತುಪ್ಪ ಸುರಿಯುತ್ತಿವೆ
ನನಗೆ ದೊಡ್ಡ ಹುದ್ದೆ ಸಿಗುವ ವಿಚಾರ ಈಗ ಮುಖ್ಯವಲ್ಲ. ತೇಜಸ್ವಿ ಯಾದವ್ ಬಿಹಾರದ ಮುಖ್ಯಮಂತ್ರಿ ಆಗಬೇಕು. ರಾಹುಲ್ ಗಾಂಧಿ ಪ್ರಧಾನಿ ಆಗಬೇಕುಡಿ.ಕೆ.ಶಿವಕುಮಾರ್ ಉಪ ಮುಖ್ಯಮಂತ್ರಿ
ಬೆಂಗಳೂರು: ‘ಡಿ.ಕೆ.ಶಿವಕುಮಾರ್ ಅವರು ಶೀಘ್ರದಲ್ಲೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಾರೆಯೇ’ ಎಂದು ಸುದ್ದಿಗಾರರು ಪ್ರಶ್ನಿಸಿದಾಗ ಸಚಿವ ಪ್ರಿಯಾಂಕ್ ಖರ್ಗೆ ಅವರು ‘ಇದನ್ನು ನಿಮಗೆ ಯಾರು ಹೇಳಿದರು? ಯಾರಾದರೂ ಅಧಿಕೃತವಾಗಿ ಹೇಳಿದ್ದರೆ ನಾನು ಮಾತನಾಡಬಹುದು. ಡಿ.ಕೆ.ಶಿವಕುಮಾರ್ ಅವರೇ ಈ ಬಗ್ಗೆ ನಿನ್ನೆ ಮಾತನಾಡಿದ್ದಾರಲ್ಲ. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಅವರು ಹೇಳಿದರೆ ಮಾತ್ರ ಅಧಿಕೃತ ಎಂದೂ ಅವರು ಹೇಳಿದ್ದಾರೆ. ಹೀಗಿರುವಾಗ ನಾವು ಮಾತನಾಡಿ ಪ್ರಯೋಜನವಿಲ್ಲ’ ಎಂದರು.
‘ನಮ್ಮ ಪಕ್ಷದ ನಾಯಕರು ಸಚಿವರು ದೆಹಲಿ ಭೇಟಿಗೆ ಹೋಗುವುದು ಹೊಸ ಮತ್ತು ವಿಶೇಷ ವಿಚಾರವೇನೂ ಅಲ್ಲ. ದೆಹಲಿಗೆ ಹೋದವರು ಹೈಕಮಾಂಡ್ ಅನ್ನು ಭೇಟಿ ಮಾಡುವುದು ಸಾಮಾನ್ಯ. ಸತೀಶ ಜಾರಕಿಹೊಳಿ ಅವರ ದೆಹಲಿ ಭೇಟಿಯಲ್ಲಿ ವಿಶೇಷವೇನೂ ಇಲ್ಲ. ತಂತ್ರಜ್ಞಾನ ಶೃಂಗಸಭೆ ಬಗ್ಗೆ ಮಾತನಾಡಲು ನಾನೂ ನಾಡಿದ್ದು ದೆಹಲಿಗೆ ಹೋಗುತ್ತಿದ್ದೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ‘ನೀವು ಉಪ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯೇ’ ಎಂದು ಸುದ್ದಿಗಾರರು ಪ್ರಶ್ನಿಸಿದ್ದಕ್ಕೆ ‘ಸಚಿವ ಆಗಿದ್ದೇನೆ ಮತ್ತು ಜಿಲ್ಲಾ ಉಸ್ತುವಾರಿಯನ್ನೂ ನೀಡಿದ್ದಾರೆ. ಅವೆರಡನ್ನೂ ಮಾಡಿಕೊಂಡು ಹೋಗುತ್ತೇನೆ. ಈಗ ನನ್ನನ್ನು ಬಿಟ್ಟುಬಿಡಿ’ ಎಂದು ತೆರಳಿದರು.
ಕೊಪ್ಪಳ/ಹೊಸಪೇಟೆ: ‘ರಾಜ್ಯದಲ್ಲಿ ಮುಖ್ಯಮಂತ್ರಿ ಹಾಗೂ ಪಕ್ಷದ ಅಧ್ಯಕ್ಷ ಸ್ಥಾನದ ಹುದ್ದೆಗಳು ಸದ್ಯಕ್ಕೆ ಖಾಲಿಯಿಲ್ಲ. ಸಿದ್ದರಾಮಯ್ಯ ಅವರಿಗೆ ಎಲ್ಲ ಶಾಸಕರ ಬೆಂಬಲವಿದ್ದು 2028ರವರೆಗೆ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ. ಆ ಬಳಿಕ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು ಎನ್ನುವ ಆಸೆ ನನ್ನದು’ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಮುಖ್ಯಮಂತ್ರಿ ಆಗಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ಶಿವಕುಮಾರ್ ಅವರ ಅಭಿಮಾನಿಗಳು ಕೂಡ ಆಸೆ ಇಟ್ಟುಕೊಂಡಿದ್ದಾರೆ. ಶಿವಕುಮಾರ್ ಅಪಾರ ದೈವಭಕ್ತರಾಗಿದ್ದು ದೇವಸ್ಥಾನಗಳಿಗೆ ಹೋಗುವುದು ಸಾಮಾನ್ಯ. ಅವರು ದೇವಸ್ಥಾನಕ್ಕೆ ಹೋಗುವುದಕ್ಕೂ ಮುಖ್ಯಮಂತ್ರಿ ಸ್ಥಾನದ ಪೈಪೋಟಿಗೂ ಸಂಬಂಧವಿಲ್ಲ. ನವೆಂಬರ್‌ನಲ್ಲಿ ಯಾವ ಕ್ರಾಂತಿಯೂ ಇಲ್ಲ. ಎಲ್ಲವೂ ಬಿಜೆಪಿ ಸೃಷ್ಟಿ’ ಎಂದರು.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕೇಳಲಾದ ಪ್ರಶ್ನೆಗೆ ‘ವಿಸ್ತರಣೆ ಆಗಬಹುದು. ಪಕ್ಷ ಸೂಚಿಸಿದರೆ ಸಚಿವ ಸ್ಥಾನ ತ್ಯಾಗಕ್ಕೂ ಸಿದ್ಧನಿದ್ದೇನೆ. ನನಗೆ ಪಕ್ಷ ಉಪ ಮುಖ್ಯಮಂತ್ರಿ ಪಟ್ಟ ಕೊಟ್ರೆ ನಾನು ಬೇಡ ಅನ್ನಲ್ಲ. ಎಲ್ಲರಿಗೂ ಆಸೆ ಇರ್ತದೆ. ಪಕ್ಷ ಏನು ತೀರ್ಮಾನ ಮಾಡುತ್ತೋ ಅದಕ್ಕೆ ನಾನು ಬದ್ಧ’ ಎಂದಷ್ಟೇ ಹೇಳಿದರು.
‘ರಾಜ್ಯ ಸರ್ಕಾರವು ಸದೃಢವಾಗಿದ್ದು ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಸಾಮಾಜಿಕ ಜಾಲತಾಣದಲ್ಲಿ ಕೆಲವು ದಿನಗಳಿಂದ ಕೆಲವರು ‘ರಾಮಲಿಂಗಾರೆಡ್ಡಿ ಫಾರ್ ಸಿ.ಎಂ’ ಎಂದು ಸುದ್ದಿ ಹಬ್ಬಿಸುತ್ತಿದ್ದಾರೆ. ನಾನು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇನೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ನನ್ನ ಮೇಲೆ ಮತ್ತು ಪಕ್ಷದ ಮೇಲೆ ಗೌರವವಿದ್ದರೆ ದಯವಿಟ್ಟು ಈ ರೀತಿಯ ಆಧಾರರಹಿತ ಪ್ರಚಾರವನ್ನು ತಕ್ಷಣವೇ ನಿಲ್ಲಿಸಬೇಕು. ಮುಖ್ಯಮಂತ್ರಿಯವರ ನೇತೃತ್ವದಲ್ಲಿ ನಮ್ಮ ಸರ್ಕಾರ ಉತ್ತಮವಾಗಿ ಜನಪರ ಕಾರ್ಯಗಳನ್ನು ಮಾಡುತ್ತಿದೆ. ಈ ಸಮಯದಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಿ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವುದಷ್ಟೇ ನಮ್ಮ ಗುರಿಯಾಗಿರಬೇಕು’ ಎಂದು ವಿವರಿಸಿದ್ದಾರೆ. ‘ಪಕ್ಷ ಮತ್ತು ನಾಡಿನ ಜನತೆ ವಹಿಸಿರುವ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸುವುದರತ್ತ ಮಾತ್ರ ನನ್ನ ಗಮನವಿದೆ. ಆದ್ದರಿಂದ ಪಕ್ಷದ ಮುಖಂಡರು ಕಾರ್ಯಕರ್ತರು ಹಾಗೂ ನನ್ನ ಹಿತೈಷಿಗಳು ಯಾರೂ ಇಂತಹ ಗೊಂದಲಕಾರಿ ಪ್ರಚಾರಕ್ಕೆ ಕಿವಿಗೊಡಬಾರದು ಮತ್ತು ಇದರಲ್ಲಿ ಭಾಗಿಯಾಗಬಾರದು ಎಂದು ಕೋರುತ್ತೇನೆ. ನಾವೆಲ್ಲರೂ ಒಟ್ಟಾಗಿ ಪಕ್ಷವನ್ನು ಬಲಪಡಿಸಲು ಮತ್ತು ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸೋಣ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.