
ಬೆಂಗಳೂರು: ‘ಪಕ್ಷದಲ್ಲಿ ಎಲ್ಲವೂ ತಿಳಿಯಾಗಿದೆ. ಈಗ ಸಂತೋಷದ ವಾತಾವರಣವಿದೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಸದ್ಯಕ್ಕೆ ಅವರು (ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ) ಇಬ್ಬರೇ ತಿಂಡಿ ತಿನ್ನುತ್ತಿದ್ದಾರೆ. ನಮ್ಮನ್ನೂ ಕರೆದರೆ ನಾವೂ ತಿಂಡಿ ತಿನ್ನಲು ಹೋಗುತ್ತೇವೆ. ಅಗತ್ಯ ಬಿದ್ದರೆ ನಮ್ಮ ಮನೆಗೂ ಉಪಾಹಾರಕ್ಕೆ ಕರೆಯುತ್ತೇನೆ’ ಎಂದರು.
‘ಎರಡನೇ ಉಪಾಹಾರ ಕೂಟಕ್ಕೂ ನನ್ನನ್ನು ಕರೆದಿಲ್ಲ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಇಬ್ಬರನ್ನೂ ನನ್ನ ಮನೆಗೂ ಉಪಾಹಾರಕ್ಕೆ ಯಾಕೆ ಕರೆಯಬಾರದು’ ಎಂದು ಪರಮೇಶ್ವರ ಪ್ರಶ್ನಿಸಿದರು.
‘ಕೆಲವರಿಗೆ ಸಿದ್ದರಾಮಯ್ಯ ಮುಂದುವರಿಯಲಿ, ಇನ್ನೂ ಕೆಲವರಿಗೆ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಲಿ, ಕೆಲವರಿಗೆ ಪರಮೇಶ್ವರ ಮುಖ್ಯಮಂತ್ರಿ ಆಗಲಿ ಎಂದು ಇದೆ. ಇದೆಲ್ಲ ಜನರ ಅಭಿಲಾಷೆ. ಅದನ್ನು ತಪ್ಪು ಎಂದು ಹೇಳಲು ಆಗುವುದಿಲ್ಲ. ನಮ್ಮ ಹೈಕಮಾಂಡ್ ಏನು ನಿರ್ಧಾರ ಮಾಡುತ್ತದೊ ಅದು ಮುಖ್ಯವಾಗುತ್ತದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.