ಸಿಎಂ ಸಿದ್ದರಾಮಯ್ಯ
ಬೆಂಗಳೂರು: ‘ದೇಶದ ಸೇನಾ ಪಡೆ ‘ಆಪರೇಷನ್ ಸಿಂಧೂರ’ ಹೆಸರಿನಲ್ಲಿ ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಒಂಬತ್ತು ಉಗ್ರಗಾಮಿಗಳ ನೆಲೆಗಳನ್ನು ನಾಶಗೊಳಿಸಿ ಪರಾಕ್ರಮ ಮೆರೆದಿದೆ. ಇದು ಪಾಕಿಸ್ತಾನಕ್ಕೆ ಎಚ್ಚರಿಕೆಯ ಗಂಟೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ತಮ್ಮ ಸರ್ಕಾರಿ ನಿವಾಸ ಕಾವೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ನೀತಿ ವಿರುದ್ಧ ಪ್ರತಿಭಟನೆ ನಡೆಸುವುದು ಸಮಂಜಸವಲ್ಲ ಎಂಬ ಕಾರಣಕ್ಕೆ ರಾಯಚೂರಿನಲ್ಲಿ ಪಕ್ಷದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ರದ್ದುಗೊಳಿಸಲಾಗಿದೆ’ ಎಂದರು.
‘ಪಾಕಿಸ್ಥಾನಕ್ಕೆ ಮಾತ್ರವಲ್ಲ ಭಾರತದ ಜೊತೆ ಕಿಡಿಗೇಡಿತನ ನಡೆಸುವ ನೆರೆಯ ಎಲ್ಲ ದೇಶಗಳಿಗೂ ಈ ಸೇನಾ ದಾಳಿ ಎಚ್ಚರಿಕೆಯ ಗಂಟೆ’ ಎಂದರು.
‘ರಾಷ್ಟ್ರೀಯ ಭದ್ರತೆ ವಿಷಯಲ್ಲಿ ಯಾವುದೇ ರಾಜಿ ಸಾಧ್ಯವಿಲ್ಲ. ಈ ದಾಳಿಯನ್ನು ಎಲ್ಲರೂ ಬೆಂಬಲಿಸಿದ್ದೇವೆ. ನಮ್ಮ ಸರ್ಕಾರ ನೂರಕ್ಕೆ ನೂರರಷ್ಟು ಸೇನೆ ಕೈಗೊಂಡಿರುವ ಕ್ರಮವನ್ನು ಬೆಂಬಲಿಸುತ್ತದೆ. ರಾಜ್ಯದಲ್ಲಿ ಸುರಕ್ಷತೆಯ ಕುರಿತು ಎಲ್ಲ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ’ ಎಂದರು.
‘ರಾಜ್ಯದ ಭದ್ರತಾ ವ್ಯವಸ್ಥೆ ಮೇಲೆ ನಿಗಾ ಇಡುವಂತೆ ಪೊಲೀಸ್ ವರಿಷ್ಠರಿಗೆ ಸೂಚನೆ ನೀಡಿದ್ದೇನೆ. ನಮ್ಮ ಸರ್ಕಾರ ಕೇಂದ್ರ ಸರ್ಕಾರದ ಜೊತೆಯಲ್ಲಿಯೂ ಸಂಪರ್ಕದಲ್ಲಿರುತ್ತದೆ. ಅಲ್ಲಿಂದ ಬರುವ ಸೂಚನೆಗಳನ್ನು ಪಾಲಿಸಲಾಗುತ್ತದೆ. ಯಾರೂ ಭಯಭೀತರಾಗುವ ಅವಶ್ಯಕತೆ ಇಲ್ಲ. ಕಟ್ಟುನಿಟ್ಟಿನ ಕ್ರಮಗಳೊಂದಿಗೆ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲಾಗುವುದು’ ಎಂದರು.
‘ನಮ್ಮ ಸೇನೆಯು ಕೇವಲ ಉಗ್ರಗಾಮಿಗಳ ನೆಲೆಗಳ ಮೇಲೆ ಮಾತ್ರ ದಾಳಿ ನಡೆಸಿದೆ. ನಮ್ಮ ಸೈನಿಕರು ಉಗ್ರರ ನೆಲೆಗಳನ್ನು ಪತ್ತೆ ಹಚ್ಚಿ ದಾಳಿ ಮಾಡಿದ್ದು, ಅಮಾಯಕ ಜನರ ಸಾವು ನೋವು ತಪ್ಪಿಸಿದ್ದಾರೆ. ನಮ್ಮ ಸೈನಿಕರ ಕಾರ್ಯದಕ್ಷತೆಗೆ ದೊಡ್ಡ ಸಲಾಂ’ ಎಂದರು.
‘ಕಾಶ್ಮೀರದ ಪಹಲ್ಗಾಮ್‌ನಲ್ಲಿ ಅಮಾಯಕ 26 ಜನರ ಹತ್ಯೆ ನಡೆಸಿದ ಉಗ್ರರನ್ನು ಬೆಂಬಲಿಸುವವರು, ಸಾಕುವವರು ಕೂಡಾ ಪಾಕಿಸ್ತಾನದವರೇ ಎಂಬುವುದು ಸ್ಪಷ್ಟವಾಗಿದೆ. ಸೇನೆ ನಡೆಸಿರುವ ಈ ದಾಳಿ ಭಾರತದ ಮೇಲೆ ಸತತವಾಗಿ ದಾಳಿ ನಡೆಸಿ ಹತ್ಯಾಕಾಂಡ ನಡೆಸುತ್ತಿದ್ದ ಉಗ್ರಗಾಮಿಗಳಿಗೆ ಕಲಿಸಿದ ಪಾಠ. ಮಾತ್ರವಲ್ಲ ಈ ಉಗ್ರರಿಗೆ ಆಶ್ರಯ ಮತ್ತು ನೆರವು ನೀಡಿ ಭಾರತದ ವಿರುದ್ದ ಅವರನ್ನು ಛೂಬಿಡುತ್ತಿದ್ದ ಪಾಕಿಸ್ತಾನಕ್ಕೂ ನೀಡಿರುವ ಎಚ್ಚರಿಕೆ’ ಎಂದರು.
‘ಸೇನಾದಾಳಿ ನಡೆಸದೆ ಭಾರತದ ಮುಂದೆ ಬೇರೆ ಆಯ್ಕೆಗಳಿರಲಿಲ್ಲ. ಪಹಲ್ಗಾಮ್‌ನಲ್ಲಿ ನಡೆದ ಹತ್ಯಾಕಾಂಡ ನಡೆಸಿದ ಉಗ್ರಗಾಮಿಗಳು ಪಾಕಿಸ್ತಾನಕ್ಕೆ ಸೇರಿದವರೆಂದು ಜಗಜ್ಜಾಹೀರಾಗಿದ್ದರೂ ಪಾಕಿಸ್ತಾನ ಇದನ್ನು ಒಪ್ಪಿಕೊಂಡು ಕ್ರಮಕೈಗೊಳ್ಳುವ ಭರವಸೆ ನೀಡಿಲ್ಲ. ಈ ಹಠಮಾರಿ ಧೋರಣೆ ತಳೆದಿರುವ ಕಾರಣದಿಂದಾಗಿ ಭಾರತಕ್ಕೂ ಈ ದಾಳಿ ನಡೆಸದೆ ಬೇರೆ ಆಯ್ಕೆಗಳಿರಲಿಲ್ಲ’ ಎಂದರು.
‘ಉಗ್ರಗಾಮಿಗಳ ನೆಲೆಗಳನ್ನು ಧೂಳೀಪಟ ಮಾಡಿ ಉಗ್ರರನ್ನು ಶಿಕ್ಷಿಸಿದ ನಮ್ಮ ಸೈನಿಕರ ಧೀರೋದ್ದಾತ ಪರಾಕ್ರಮದಿಂದ ಪಹಲ್ಗಾಮ್ ಹತ್ಯಾಕಾಂಡದಲ್ಲಿ ತಮ್ಮವರನ್ನು ಕಳೆದುಕೊಂಡ ಕುಟುಂಬಗಳಿಗೆ ತುಸು ನೆಮ್ಮದಿ, ಸಮಾಧಾನ ಸಿಕ್ಕಿರಬಹುದೆಂದು ಭಾವಿಸಿದ್ದೇನೆ’ ಎಂದೂ ಹೇಳಿದರು.
ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ‘ಇದು ಗಾಂಧಿ, ಬಸವಣ್ಣನ ಕಾಲ ಅಲ್ಲ. ಈಗ ಕಾಲ ಬದಲಾಗಿದೆ. ಅವರು (ಪಾಕಿಸ್ತಾನ) ಕಾಲು ಕೆರೆದು ಜಗಳಕ್ಕೆ ಬಂದರೆ ಸುಮ್ಮನೆ ಇರಲು ಆಗುತ್ತಾ’ ಎಂದರು.
ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ‘ಆಪರೇಷನ್ ಸಿಂಧೂರ್ ಕಾರ್ಯಾಚರಣೆಗೆ ನಮ್ಮ ಸಂಪೂರ್ಣ ಬೆಂಬಲ ಇದೆ. ಕೇಂದ್ರ ಸರ್ಕಾರದ ಯಾವುದೇ ನಿಲುವಿಗೆ ನಮ್ಮ ಬೆಂಬಲ ಇದೆ ಎಂದಿದ್ದೆವು’ ಎಂದರು.
‘ಭಾರತೀಯ ಸೇನೆ ಭಯೋತ್ಪಾದಕರ ನೆಲೆಯನ್ನು ಅಷ್ಟೇ ಗುರಿ ಮಾಡಿದೆ. ಪಾಕಿಸ್ತಾನ ಈ ದಾಳಿಗೆ ತಿರುಗೇಟು ಕೊಟ್ಟರೆ ಎದುರಿಸಲು ಸಿದ್ದವೆಂದು ನಮ್ಮ ಸೇನೆ ಸಂದೇಶ ಕೊಟ್ಟಿದೆ. ರಾಷ್ಟ್ರದ ಐಕ್ಯತೆ ಬಂದಾಗ ಯಾವುದೇ ರಾಜಕೀಯ ಇಲ್ಲ. ಎಲ್ಲರೂ ಒಗ್ಗಟ್ಟಾಗಿ ಭಾರತೀಯ ಸೇನೆಯ ಜೊತೆಗೆ ಇದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.