ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್
‘ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯಾಗಲು ಹೆಚ್ಚಿನ ಸಂಖ್ಯೆಯ ಶಾಸಕರ ಬೆಂಬಲ ಇಲ್ಲ’ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ನೀಡಿದ ನಂತರ ನಾಯಕತ್ವ ಬದಲಾವಣೆ ವಿಷಯ ರಾಜಕೀಯ ವಲಯದ ಚರ್ಚೆಯ ಕೇಂದ್ರ ಸ್ಥಾನಕ್ಕೆ ಬಂದು ನಿಂತಿದೆ. ಈ ಕುರಿತ ಸಚಿವರು, ಶಾಸಕರ ಹೇಳಿಕೆಗಳ ಸರಣಿ ಶನಿವಾರವೂ ಮುಂದುವರಿದಿದ್ದು, ಕಾಂಗ್ರೆಸ್ ಹೈಕಮಾಂಡ್‌ನತ್ತ ಎಲ್ಲರೂ ಕೈ ತೋರಿದ್ದಾರೆ.
ಹುಬ್ಬಳ್ಳಿ: ‘ಮುಖ್ಯಮಂತ್ರಿ ಬದಲಾಯಿಸಬೇಕೋ, ಬೇಡವೋ ಎನ್ನುವುದು ಹೈಕಮಾಂಡ್‌ಗೆ ಬಿಟ್ಟ ನಿರ್ಧಾರ. ಆ ಕುರಿತು ಅವರೇ ಮಾತನಾಡುತ್ತಿಲ್ಲ ಎಂದಾಗ, ನಾವು-ನೀವು ಚರ್ಚೆ ನಡೆಸುವುದರಲ್ಲಿ ಅರ್ಥವಿಲ್ಲ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಬದಲಾವಣೆ ಕುರಿತು ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಯಾರೊಂದಿಗೂ ಚರ್ಚಿಸಿಲ್ಲ. ಮುಖ್ಯಮಂತ್ರಿ ಬದಲಾಯಿಸುವ ಅಧಿಕಾರ ಇರುವ ಪಕ್ಷದ ನಾಯಕರು ಸುಮ್ಮನಿದ್ದಾರೆ’ ಎಂದರು.
‘ಸುರ್ಜೇವಾಲಾ ಅವರು ಸಭೆ ನಡೆಸಿದ್ದು, ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಶಾಸಕರಿಗೆ ಸೂಚಿಸಿದ್ದಾರೆ. ಕೆಪಿಸಿಸಿ ಅಧ್ಯಕರ ಬದಲಾವಣೆ ಕುರಿತು ಸಹ ಯಾವ ಚರ್ಚೆಗಳು ನಡೆದಿಲ್ಲ. ಎಲ್ಲವೂ ಹೈಕಮಾಂಡ್ ತೀರ್ಮಾನ’ ಎಂದು ಹೇಳಿದರು.
‘ರಾಹುಲ್ ಗಾಂಧಿ ಅವರು ಬಿಹಾರ ಪ್ರವಾಸದಲ್ಲಿದ್ದರು. ಹೀಗಾಗಿ, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಅವರಿಗೆ ರಾಹುಲ್ ಅವರನ್ನು ದೆಹಲಿಯಲ್ಲಿ ಭೇಟಿಯಾಗಲು ಸಾಧ್ಯವಾಗಿಲ್ಲ. ಈ ಕಾರಣದಿಂದ ರಾಜ್ಯ ನಾಯಕರು ವೀಕ್ ಆಗಿದ್ದಾರೆ ಎನ್ನಲು ಸಾಧ್ಯವಿಲ್ಲ' ಎಂದು ಸಚಿವ ಪ್ರಿಯಾಂಕ್ ಅಭಿಪ್ರಾಯಪಟ್ಟರು.
ಬೆಂಗಳೂರು: ‘ಶಿವಕುಮಾರ್ ಸದ್ಯ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಶಾಸಕರ ಬೆಂಬಲ ಕೇಳುವ, ಬಲಾಬಲ ಪ್ರದರ್ಶನದ ಸಮಯವಲ್ಲ. ಶಿವಕುಮಾರ್‌ಗೆ ಆತುರ, ಆತಂಕ ಇಲ್ಲ’ ಎಂದು ‘ಬಮೂಲ್’ ಅಧ್ಯಕ್ಷ ಡಿ.ಕೆ. ಸುರೇಶ್ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಪ್ರತಿಯೊಬ್ಬ ರಾಜಕಾರಣಿಗೂ ಮುಖ್ಯಮಂತ್ರಿ ಆಗಬೇಕು ಎನ್ನುವ ಆಸೆ ಇರುತ್ತದೆ. ಅವರ ಸಮುದಾಯ, ಅಭಿಮಾನಿಗಳು, ಅನುಯಾಯಿಗಳು ತಮ್ಮ ನಾಯಕ ಮುಖ್ಯಮಂತ್ರಿಯಾಗಲಿ ಎನ್ನುವ ಆಶಯ ವ್ಯಕ್ತಪಡಿಸುವುದು ಸಹಜ. ಎಲ್ಲ ಅವಧಿಯಲ್ಲೂ ಇಂತಹ ಆಶಯ ಅಭಿವ್ಯಕ್ತವಾಗುತ್ತಲೇ ಇರುತ್ತದೆ. ತಪ್ಪು ಎನ್ನಲಾಗದು’ ಎಂದರು.
ಶಿವಕುಮಾರ್ ಅವರು ಪಕ್ಷ ಕೊಟ್ಟಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್‌ನ ನಾಯಕರಿಗೆ ಗೌರವ ನೀಡುತ್ತಾರೆ. ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಸರ್ಕಾರ ಮುನ್ನಡೆದಿದೆ. ಅವರಿಗೆ ರಾಜಕೀಯ ಇಚ್ಛಾಶಕ್ತಿ ಇದೆ. ಹಾಗಾಗಿ, ಮಾಧ್ಯಮಗಳ ಜತೆ ಕೆಲ ವಿಚಾರ ಹಂಚಿಕೊಂಡಿರಬಹುದು ಎಂದು ಹೇಳಿದರು.
ಮೈಸೂರು: ‘ಸಂಕ್ರಾಂತಿಯಂತೂ ನಡೆದೇ ನಡೆಯುತ್ತದೆ. ನಾಯಕತ್ವ ಬದಲಾವಣೆ ಇಲ್ಲವೆಂದು ಮುಖ್ಯಮಂತ್ರಿ, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ ಸ್ಪಷ್ಟಪಡಿಸಿದ ಮೇಲೆ ಮತ್ತೇಕೆ ಪ್ರಶ್ನೆ ಕೇಳುತ್ತೀರಿ’ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಪ‍್ರಶ್ನಿಸಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಶಿವಕುಮಾರ್ ಅವರಿಗೆ ಹೆಚ್ಚಿನ ಶಾಸಕರ ಬೆಂಬಲವಿಲ್ಲ, ನಾನೇ 5 ವರ್ಷ ಮುಖ್ಯಮಂತ್ರಿ ಆಗಿರುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ ಮೇಲೆ ಎಲ್ಲ ಚರ್ಚೆಯೂ ಮುಗಿಯಿತಲ್ಲ ಬಿಡಿ’ ಎಂದು ಹೇಳಿದರು.
‘ಶಿವಕುಮಾರ್ ಪಕ್ಷ ಕಟ್ಟಿದ್ದಾರೆ, ಅಧಿಕಾರಕ್ಕೆ ತರಲು ಶ್ರಮಿಸಿದ್ದಾರೆ’ ಎಂಬ ವಿಚಾರ ಚರ್ಚೆಯಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಎಲ್ಲರೂ ಸೇರಿದರೆ ಅಲ್ವಾ ಕಟ್ಟುವುದಕ್ಕೆ ಆಗುವುದು? ಹನಿ ಹನಿ ಕೂಡಿದರೆ ಹಳ್ಳ ಎಂಬಂತೆ ಎಲ್ಲರೂ ಸೇರಿ ಪಕ್ಷ ಕಟ್ಟಿದ್ದೇವೆ. ಅದರಲ್ಲಿ ಶಿವಕುಮಾರ್ ಪ್ರಮುಖ ಪಾತ್ರ ವಹಿಸಿದ್ದಾರೆ. ಅದನ್ನು ನಾವು ಇಲ್ಲ ಎನ್ನಲಾಗುತ್ತದೆಯೇ’ ಎಂದು ಕೇಳಿದರು.
‘ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ, ದಿನೇಶ್ ಗುಂಡೂರಾವ್, ಆರ್.ವಿ.ದೇಶಪಾಂಡೆ ಪಾತ್ರ ಇಲ್ಲವೇ? ಯಾರ‍್ಯಾರಿಗೆ ಪಕ್ಷ ಏನೇನು ಜವಾಬ್ದಾರಿ ಕೊಟ್ಟಿದೆಯೋ ಅದನ್ನು ನಿರ್ವಹಿಸಿದ್ದಾರೆ. ಪ್ರಸ್ತಾಪಗಳು ಬಹಳಷ್ಟು ಬರುತ್ತವೆ. ಹೈಕಮಾಂಡ್ ಈಗಾಗಲೇ ನಿರ್ಧಾರ ಕೈಗೊಂಡಾಗಿದೆ. 5 ವರ್ಷ ನಾನೇ ಇರುತ್ತೇನೆ ಎಂದು ಸಿದ್ದರಾಮಯ್ಯ ಹೇಳಿರುವಾಗ ಯಾವುದೇ ಪ್ರಶ್ನೆ ಇಲ್ಲ’ ಎಂದು ಹೇಳಿದರು.
ಮೈಸೂರು: ‘ಅಧಿಕಾರ ಹಸ್ತಾಂತರ ಸೂತ್ರ ನಮಗೆ ಗೊತ್ತಿಲ್ಲ. ವರಿಷ್ಠರ ತೀರ್ಮಾನಕ್ಕೆ ನಾವು ಬದ್ಧ. ನಮ್ಮೆಲ್ಲ ಶಾಸಕರ ಬೆಂಬಲ ಪಕ್ಷಕ್ಕಿದೆ. ಇದು ರಾಜಕಾರಣ. ಪಕ್ಷದಲ್ಲಿ ಯಾವಾಗ ಬೇಕಾದರೂ ಕ್ರಾಂತಿ ಆಗಬಹುದು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಶಾಸಕ ತನ್ವೀರ್‌ಸೇಠ್ ಹೇಳಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಯಾರಿಗೂ ಅಧಿಕಾರ ಶಾಶ್ವತವಲ್ಲ. ನೂರು ವರ್ಷ ಬದುಕಬೇಕು ಅಂದುಕೊಂಡರೂ ಅದು ಸಾಧ್ಯವೇ ಎಂದು ನೋಡಬೇಕು. ನಾಳೆ ಬೆಳಿಗ್ಗೆ ಏನಾಗುತ್ತದೆಯೋ ಯಾರಿಗೂ ಗೊತ್ತಿಲ್ಲ. ಸಿದ್ದರಾಮಯ್ಯ ಎಲ್ಲಿಯವರೆಗೆ ಮುಖ್ಯಮಂತ್ರಿ ಆಗಿರುತ್ತಾರೆಯೋ ಅಲ್ಲಿಯವರೆಗೂ ಅವರೇ ನಮ್ಮ ಮುಖ್ಯಮಂತ್ರಿ. ಅವರಿಗೆ ದೇವರು ಆಯಸ್ಸು, ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಕೇಳಿಕೊಳ್ಳುತ್ತೇನೆ. ಜನರ ಆಸೆಗಳಿಗೆ ಸ್ಪಂದಿಸುವ ಸರ್ಕಾರ ಕೊಡಿ ಎಂದು ಬಯಸುತ್ತೇನೆ’ ಎಂದು ಪ್ರತಿಕ್ರಿಯಿಸಿದರು.
‘ಮುಖ್ಯಮಂತ್ರಿ ಬದಲಾವಣೆ ವಿಚಾರ ಮಾಧ್ಯಮದ ಮುಂದೆ ಮಾತನಾಡುವುದಿಲ್ಲ. ಐದು ವರ್ಷ ಸುಭದ್ರ ಸರ್ಕಾರ ಕೊಡಬೇಕಾದುದು ನಮ್ಮ ಜವಾಬ್ದಾರಿ. ಪಕ್ಷದಿಂದ ಸರ್ಕಾರ ಬಂದಿದೆಯೇ ಹೊರತು, ಸರ್ಕಾರದಿಂದ ಪಕ್ಷ ಬಂದಿಲ್ಲ. ಯಾರೋ ಮಾತನಾಡಿದಕ್ಕೆ ಪ್ರತಿಕ್ರಿಯಿಸುತ್ತಾ ಹೋದರೆ, ಅದಕ್ಕೆ ಕೊನೆಯೇ ಇರುವುದಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.