ADVERTISEMENT

Karnataka Politics | ಅಧಿವೇಶನ ಬಳಿಕ ಸಂದೇಶ: ಡಿಕೆಶಿ ಬಣ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 1:47 IST
Last Updated 19 ಜನವರಿ 2026, 1:47 IST
<div class="paragraphs"><p>ಡಿ.ಕೆ.ಶಿವಕುಮಾರ್</p></div>

ಡಿ.ಕೆ.ಶಿವಕುಮಾರ್

   

ನವದೆಹಲಿ: ಕರ್ನಾಟಕ ಕಾಂಗ್ರೆಸ್‌ ಸರ್ಕಾರದ ಅಧಿಕಾರ ಹಸ್ತಾಂತರ ಗೊಂದಲ ಬಗೆಹರಿಸುವ ಸಂಬಂಧ ಫೆಬ್ರುವರಿ ಮೊದಲ ವಾರದಲ್ಲಿ ಹೈಕಮಾಂಡ್‌ನಿಂದ ಸಂದೇಶ ಬರಲಿದೆ ಎಂಬ ಅಮಿತ ವಿಶ್ವಾಸವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಣ ತಾಳಿದೆ.

ಎರಡೂವರೆ ವರ್ಷಗಳ ಹಿಂದೆ ಕೊಟ್ಟ ಮಾತಿನಂತೆ ಅಧಿಕಾರ ಹಂಚಿಕೆ ಬಗ್ಗೆ ಸ್ಪಷ್ಟ ಸಂದೇಶವನ್ನು ಹೊತ್ತು ತರಲೇಬೇಕು ಎಂದು ನವದೆಹಲಿಯಲ್ಲಿ ವಾಸ್ತವ್ಯ ಹೂಡಿರುವ ಡಿ.ಕೆ. ಶಿವಕುಮಾರ್ ಅವರು ಪಕ್ಷದ ಉನ್ನತ ನಾಯಕ ರಾಹುಲ್‌ ಗಾಂಧಿ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡುವ ಅಭಿಲಾಷೆ ವ್ಯಕ್ತಪಡಿಸಿದ್ದರು. ಆದರೆ, ಭಾನುವಾರವೂ ಉಭಯ ನಾಯಕರ ಭೇಟಿ ಆಗಲಿಲ್ಲ.

ADVERTISEMENT

ಶಿವಕುಮಾರ್ ಅವರು ಬೆಂಗಳೂರಿಗೆ ಸೋಮವಾರ ನಿರ್ಗಮಿಸಲಿದ್ದಾರೆ. ಅಸ್ಸಾಂ ಚುನಾವಣೆಗೆ ಪಕ್ಷದ ಹಿರಿಯ ವೀಕ್ಷಕರಾಗಿರುವ ಅವರು ಮಂಗಳವಾರ ಬೆಳಿಗ್ಗೆ ಗುವಾಹಟಿಗೆ ತೆರಳಲಿದ್ದಾರೆ. ಅಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮತ್ತೆ ನವದೆಹಲಿಗೆ ಬರಲಿದ್ದಾರೆ. ಆಗ ರಾಹುಲ್ ಅವರನ್ನು ಕಂಡು ಮತ್ತೊಮ್ಮೆ ತಮ್ಮ ಮಹದಾಸೆಯನ್ನು ಹೇಳಿಕೊಳ್ಳುವ ಇರಾದೆಯಲ್ಲಿದ್ದಾರೆ. 

ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡುವ ಉದ್ದೇಶದಿಂದಲೇ ಇಲ್ಲಿಗೆ ಬಂದಿದ್ದೇನೆ ಎಂದು ಶುಕ್ರವಾರ ಮಧ್ಯಾಹ್ನ ಹೇಳಿಕೆ ಕೊಟ್ಟಿದ್ದ ಶಿವಕುಮಾರ್ ಅವರು ಅಸ್ಸಾಂ ಚುನಾವಣಾ ಪೂರ್ವಸಿದ್ಧತಾ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಿಂದ ರಾಹುಲ್‌ ಬೇಗನೇ ನಿರ್ಗಮಿಸಿದ್ದರಿಂದ ಭೇಟಿ ಸಾಧ್ಯವಾಗಿರಲಿಲ್ಲ. ರಾಷ್ಟ್ರೀಯ ನಾಯಕನನ್ನು ಶನಿವಾರ ಭೇಟಿ ಮಾಡುವ ತವಕದಲ್ಲಿದ್ದರು. ಮಾಜಿ ಸಚಿವ ಭೀಮಣ್ಣ ಖಂಡ್ರೆ ಅಂತಿಮ ದರ್ಶನ ಪಡೆಯುವ ಸಂಬಂಧ ಶನಿವಾರ ಮಧ್ಯಾಹ್ನ ಬೀದರ್‌ಗೆ ತೆರಳಿದ್ದರು. ಅಲ್ಲಿಂದ ರಾತ್ರಿಯೇ ನವದೆಹಲಿಗೆ ಬಂದಿದ್ದ ಅವರು ಭಾನುವಾರವಿಡೀ ಶತಪ್ರಯತ್ನ ನಡೆಸಿದರೂ ರಾಹುಲ್‌ ಭೇಟಿ ಭಾಗ್ಯ ಸಿಗಲಿಲ್ಲ. ಲೋಕಸಭೆಯ ವಿರೋಧ ಪಕ್ಷದ ನಾಯಕ ದೆಹಲಿಯಲ್ಲೇ ಇದ್ದರು. ರಾಹುಲ್‌ ಅವರು ಸೋಮವಾರ ಕೇರಳಕ್ಕೆ ತೆರಳಲಿದ್ದಾರೆ. 

ಭಾನುವಾರ ಮಧ್ಯಾಹ್ನ ಕರ್ನಾಟಕ ಭವನಕ್ಕೆ ಬಂದ ಉಪಮುಖ್ಯಮಂತ್ರಿಯವರು ಖುಷಿಯಿಂದಲೇ ಪತ್ರಕರ್ತರ ಜತೆಗೆ ಹರಟಿದರು. ಮನರೇಗಾ ಹೋರಾಟದ ಕುರಿತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ನೇತೃತ್ವದಲ್ಲಿ ಸಂಜೆ ನಡೆದ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳ ಸಭೆಗೆ ಕರ್ನಾಟಕ ಭವನದಿಂದಲೇ ‘ಜೂಮ್’ ಮೂಲಕ ಪಾಲ್ಗೊಂಡರು. 

‘ಮೈಸೂರು ವಿಮಾನ ನಿಲ್ದಾಣದಲ್ಲಿ ರಾಹುಲ್‌ ಜತೆಗೆ ಶಿವಕುಮಾರ್ ಅವರು ಎರಡು ಬಾರಿ ಚರ್ಚಿಸಿದ್ದರು. ಎರಡೂವರೆ ವರ್ಷಗಳ ಹಿಂದೆ ಹೈಕಮಾಂಡ್‌ ನಾಯಕರು ಕೊಟ್ಟ ಮಾತನ್ನು ನೆನಪಿಸಿದ್ದರು. ತಮ್ಮ ಮನದಿಂಗಿತ ಹೇಳಿಕೊಂಡಿದ್ದರು. ಈ ಮಾತುಗಳನ್ನು ತಾಳ್ಮೆಯಿಂದಲೇ ಕೇಳಿಸಿಕೊಂಡಿದ್ದ ರಾಹುಲ್ ಅವರು ದೆಹಲಿಗೆ ಬಂದು ಭೇಟಿ ಮಾಡುವಂತೆ ಸಲಹೆ ನೀಡಿದ್ದರು. ವಿವಾದ ಬಗೆಹರಿಸಲು ರಾಷ್ಟ್ರೀಯ ನಾಯಕರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಫೆಬ್ರುವರಿ ಮೊದಲ ವಾರದಲ್ಲಿ ಹೈಕಮಾಂಡ್‌ನಿಂದ ಸಂದೇಶ ಬರಲಿದೆ’ ಎಂದು ಶಿವಕುಮಾರ್‌ ಬಣ ವಿಶ್ವಾಸ ವ್ಯಕ್ತಪಡಿಸಿದೆ. 

‘ರಾಜ್ಯ ಕಾಂಗ್ರೆಸ್‌ನ ಬಣ ಜಗಳ ಬಗೆಹರಿಸಲು ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್‌ ಗಾಂಧಿ ಅವರು ಡಿಸೆಂಬರ್‌ನಲ್ಲಿ ಪ್ರಾಥಮಿಕ ಹಂತದ ಚರ್ಚೆ ನಡೆಸಿದ್ದಾರೆ. ಈ ಮೂವರು ನಾಯಕರು ಮತ್ತೊಮ್ಮೆ ಸಭೆ ಸೇರಿ ನಿರ್ಧಾರ ತೆಗೆದುಕೊಳ್ಳಬೇಕಿದೆ. ಆ ಬಳಿಕ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರನ್ನು ಕರೆಸಿ ಮಾತುಕತೆ ನಡೆಸಲಿದ್ದಾರೆ. ಸಂಧಾನ ಸೂತ್ರ ಹೆಣೆದು ರಾಜ್ಯಕ್ಕೆ ವೀಕ್ಷಕರನ್ನು ಕಳುಹಿಸಲಿದ್ದಾರೆ. ರಾಷ್ಟ್ರೀಯ ನಾಯಕರ ತೀರ್ಮಾನವನ್ನು ಶಾಸಕಾಂಗ ಪಕ್ಷದ ಸಭೆಯಲ್ಲೇ ತಿಳಿಸಲಿದ್ದಾರೆ. ಈ ಎಲ್ಲ ಪ್ರಕ್ರಿಯೆಗಳು 3–4 ದಿನಗಳಲ್ಲಿ ಮುಗಿದು ಹೋಗಲಿದೆ. ಆದರೆ, ಮೂವರು ಉನ್ನತ ನಾಯಕರು ಸಭೆ ಸೇರಲು ಮುಕ್ತ ಮನಸ್ಸು ಮಾಡಬೇಕಷ್ಟೇ’ ಎಂದು ಹೈಕಮಾಂಡ್‌ನ ಜತೆಗೆ ನಿಕಟ ಸಂಬಂಧ ಹೊಂದಿರುವ ನಾಯಕರೊಬ್ಬರು ತಿಳಿಸಿದರು. 

‘ಕಾಲ ಎಲ್ಲದಕ್ಕೂ ಉತ್ತರ ಕೊಡಲಿದೆ’

‘ನಾವು ದೆಹಲಿಗೆ ಬರುವುದೇ ಸರ್ಕಾರದ ಕೆಲಸಕ್ಕೆ, ಪಕ್ಷದ ಕೆಲಸಕ್ಕೆ ಹಾಗೂ ನಮ್ಮ ರಾಜಕಾರಣಕ್ಕೆ. ಹೈಕಮಾಂಡ್‌ ನಾಯಕರನ್ನು ಭೇಟಿ ಆಗಿರುವ ಬಗ್ಗೆ ಬಹಿರಂಗವಾಗಿ ಹೇಳುವುದಿಲ್ಲ. ಎಲ್ಲದಕ್ಕೂ ಕಾಲವೇ ಉತ್ತರ ನೀಡಲಿದೆ’ ಎಂದು ಡಿ.ಕೆ. ಶಿವಕುಮಾರ್ ಹೇಳಿದರು. 

ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ನಾವು ರಾಜಕಾರಣಿಗಳು. ಏನು ರಾಜಕಾರಣ ಮಾಡಬೇಕೋ ಅವೆಲ್ಲವನ್ನೂ ಮಾಡುತ್ತೇವೆ. ರಾಜಕಾರಣ ಮಾಡುವುದರಲ್ಲಿ ತಪ್ಪಿಲ್ಲ’ ಎಂದರು. 

ಸುರ್ಜೇವಾಲಾ ಭೇಟಿ ಮಾಡಿದ ಜಮೀರ್‌

ಇನ್ನೊಂದೆಡೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ವಸತಿ ಸಚಿವ ಜಮೀರ್ ಅಹಮದ್ ಖಾನ್ ಹರಿಯಾಣದಲ್ಲಿ ಭೇಟಿ ಮಾಡಿ ಸಮಾಲೋಚಿಸಿದರು. ಇದೇ ವೇಳೆ ರಾಜ್ಯದ ರಾಜಕೀಯ ವಿದ್ಯಮಾನಗಳ ಬಗ್ಗೆಯೂ ಪ್ರಮುಖವಾಗಿ ಪ್ರಸ್ತಾಪವಾಯಿತು ಎಂದು ಸಚಿವರ ಆಪ್ತ ಮೂಲಗಳು ತಿಳಿಸಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.