ADVERTISEMENT

ಮಂಗನ ಕೈಗೆ ಮಾಣಿಕ್ಯ ಕೊಡಬಾರದು: ತೇಜಸ್ವಿ ಸೂರ್ಯ ವಿರುದ್ಧ ಕಾಂಗ್ರೆಸ್‌ ಟೀಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಜನವರಿ 2023, 8:59 IST
Last Updated 18 ಜನವರಿ 2023, 8:59 IST
   

ಬೆಂಗಳೂರು: ವಿಮಾನದ ತುರ್ತು ನಿರ್ಗಮನ ದ್ವಾರ ತೆಗೆದ ಘಟನೆಗೆ ಸಂಬಂಧಿಸಿದಂತೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರನ್ನು ಕಾಂಗ್ರೆಸ್‌ ಕಟುವಾಗಿ ಟೀಕಿಸಿದೆ.

ಘಟನೆ ಕುರಿತು ಟ್ವೀಟ್‌ ಮಾಡಿರುವ ಕರ್ನಾಟಕ ಕಾಂಗ್ರೆಸ್‌, ಮಂಗನ ಕೈಗೆ ಮಾಣಿಕ್ಯ ಕೊಡಬಾರದು, ಆಡುವ ಮಕ್ಕಳಿಗೆ ಯಜಮಾನಿಕೆ ಕೊಡಬಾರದು ಎಂದು ವ್ಯಂಗ್ಯವಾಡಿದೆ.


ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಹಾಗೂ ಬಿಜೆಪಿ ಯುವ ಮೋರ್ಚಾ ಮುಖ್ಯಸ್ಥ ತೇಜಸ್ವಿ ಸೂರ್ಯ ಅವರು ಚೆನ್ನೈನಿಂದ ತಿರುಚಿನಾಪಳ್ಳಿಗೆ ಹೊರಡಲು ಸಿದ್ಧವಾಗಿದ್ದ ಇಂಡಿಗೊ ವಿಮಾನದ ತುರ್ತು ನಿರ್ಗಮನ ದ್ವಾರ ತೆರೆದು ಟೀಕೆಗೆ ಗುರಿಯಾಗಿದ್ದರು.

ADVERTISEMENT

ರಾಜ್ಯದಲ್ಲಿ ನೆರೆ ಸಂಕಷ್ಟದ ವೇಳೆ ಸಂಸದ ತೇಜಸ್ವಿ ಸೂರ್ಯ ಹೋಟೆಲೊಂದರಲ್ಲಿ ಮಸಾಲೆ ದೋಸೆ ತಿನ್ನುತ್ತಿರುವ ಪೋಸ್ಟ್‌ ಅನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಅದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ಕಾಂಗ್ರೆಸ್‌ ಕಾರ್ಯಕರ್ತರು ಸೂರ್ಯ ಮನೆಗೆ ಮಸಾಲೆ ದೋಸೆ ತಲುಪಿಸಿ ಪ್ರತಿಭಟಿಸಿದ್ದರು. ಮತ್ತೆ ಆ ಘಟನೆಯನ್ನು ನೆನಪಿಸಿಕೊಂಡಿರುವ ಕಾಂಗ್ರೆಸ್‌, ದೋಸೆಪ್ರೇಮಿ ತೇಜಸ್ವಿಯಂತವರಿಗೆ ಹುದ್ದೆ, ಅಧಿಕಾರ ಕೊಡಬಾರದು. ಕೊಟ್ಟರೆ ಏನಾಗಲಿದೆ ಎಂಬುದಕ್ಕೆ ಉದಾಹರಣೆ ಇದು ಎಂದು ಲೇವಡಿ ಮಾಡಿದೆ.

ತೇಜಸ್ವಿ ಅವರು ತಮಿಳುನಾಡು ಬಿಜೆಪಿ ಯುವ ಮೋರ್ಚಾದ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಬಿಜೆಪಿ ತಮಿಳುನಾಡು ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಜೊತೆ ಡಿಸೆಂಬರ್‌ 10ರಂದು ಚೆನ್ನೈನಿಂದ ತಿರುಚಿನಾಪಳ್ಳಿಗೆ ಹೊರಡಲು ವಿಮಾನ ಏರಿದ್ದರು. ಈ ವೇಳೆ ತುರ್ತು ನಿರ್ಗಮನ ದ್ವಾರದ ‘ಲಿವರ್‌’ ಎಳೆದಿದ್ದರು. ಕ್ಷಮಾಪಣಾ ಪತ್ರ ನೀಡಿದ ಬಳಿಕ ಅದೇ ವಿಮಾನದಲ್ಲಿ ಪ್ರಯಾಣಿಸಲು ಅವರಿಗೆ ಅನುವು ಮಾಡಿಕೊಡಲಾಗಿತ್ತು.

ಕಳ್ಳನಿಗೆ ಕಾವಲು ಕೊಡಬಾರದು, ಶ್ವಾನವನ್ನು ಪಲ್ಲಕ್ಕಿಗೆ ಏರಿಸಬಾರದು, ಬಿಜೆಪಿಗೆ ಆಡಳಿತ ಕೊಡಬಾರದು ಎಂದು ಕಾಂಗ್ರೆಸ್‌ ತನ್ನ ಟ್ವೀಟ್‌ನಲ್ಲಿ ವ್ಯಂಗ್ಯವಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.