ADVERTISEMENT

ಸಿದ್ದರಾಮಯ್ಯ – ಖರ್ಗೆ ರಹಸ್ಯ ಚರ್ಚೆ | ಹೆಚ್ಚಿದ ಆಕಾಂಕ್ಷಿಗಳ ಕುತೂಹಲ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2023, 0:30 IST
Last Updated 27 ಫೆಬ್ರುವರಿ 2023, 0:30 IST
   

ಬೆಂಗಳೂರು: ಛತ್ತೀಸಗಢದ ರಾಯಪುರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಮಹಾಧಿವೇಶನದ ವೇಳೆ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸುಮಾರು 45 ನಿಮಿಷ ರಹಸ್ಯ ಮಾತುಕತೆ ನಡೆಸಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿಗಳ ಮೊದಲ ಪಟ್ಟಿ ಇನ್ನೇನು ಕೆಲವೇ ದಿನಗಳಲ್ಲಿ ಹೊರಬೀಳಲಿದ್ದು, ಈ ಮಧ್ಯೆ ಇಬ್ಬರ ನಡುವಿನ ಚರ್ಚೆ ಟಿಕೆಟ್‌ ಆಕಾಂಕ್ಷಿಗಳ ಕುತೂಹಲ ಹೆಚ್ಚಿಸಿದೆ.

‘ಸಿದ್ದರಾಮಯ್ಯ ವಾಸ್ತವ್ಯವಿದ್ದ ಹೋಟೆಲ್‌ ಕೊಠಡಿಯ ಎದುರಿನ ಕೊಠಡಿಯಲ್ಲಿ ಖರ್ಗೆ ಕೂಡಾ ಇದ್ದಾರೆ. ಶನಿವಾರ ರಾತ್ರಿ ಖರ್ಗೆಯವರ ಕೊಠಡಿಗೆ ತೆರಳಿದ ಸಿದ್ದರಾಮಯ್ಯ ಅವರು ರಾಜ್ಯ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಿದ್ದಾರೆ. ರಾಜ್ಯದಲ್ಲಿನ ಸದ್ಯದ ರಾಜಕೀಯ ಸ್ಥಿತಿಗತಿ, ಚುನಾವಣೆಗೆ ಪಕ್ಷದ ಸಿದ್ಧತೆ ಕುರಿತು ಇಬ್ಬರು ನಾಯಕರು ಚರ್ಚೆ ನಡೆಸಿದ್ದಾರೆ’ ಎಂದು ಸಿದ್ದರಾಮಯ್ಯ ಅವರ ಆಪ್ತ ಮೂಲಗಳು ತಿಳಿಸಿವೆ.

‘150 ಕ್ಷೇತ್ರಗಳಿಗೆ ರಾಜ್ಯ ಚುನಾವಣಾ ಸಮಿತಿ ಶಿಫಾರಸು ಮಾಡಿದ್ದ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಎಐಸಿಸಿ ರಚಿಸಿದ ಸ್ಕ್ರೀನಿಂಗ್‌ ಸಮಿತಿ ಈಗಾಗಲೇ ಪರಿಶೀಲಿಸಿದೆ. ಕೇಂದ್ರ ಚುನಾವಣಾ ಸಮಿತಿ ಇನ್ನೂ ರಚನೆ ಆಗಿಲ್ಲ. ಈ ಸಮಿತಿ ರಚನೆಯಾದ ಬಳಿಕ ಪಟ್ಟಿ ಅಂತಿಮಗೊಳ್ಳಲಿದೆ. ಶೀಘ್ರದಲ್ಲಿ ಸಮಿತಿ ರಚಿಸಿ, ಮೊದಲ ಪಟ್ಟಿ ಪ್ರಕಟಿಸುವ ಬಗ್ಗೆ ಖರ್ಗೆ ಸುಳಿವು ನೀಡಿದ್ದಾರೆ’ ಎಂದೂ ಮೂಲಗಳು ಹೇಳಿವೆ.

ADVERTISEMENT

ಏಪ್ರಿಲ್‌ ಕೊನೆ ಅಥವಾ ಮೇ ತಿಂಗಳ ಮೊದಲ ವಾರದಲ್ಲಿ ಚುನಾವಣೆ ನಡೆಯಲಿದೆ. ಅಭ್ಯರ್ಥಿಗಳನ್ನು ಮೊದಲೇ ಘೋಷಿಸಿ, ಪ್ರಚಾರಕ್ಕೆ ಹೆಚ್ಚಿನ ಸಮಯ ನೀಡುವ ಬಗ್ಗೆ ಈಗಾಗಲೇ ಚರ್ಚೆ ನಡೆದಿದೆ. ಆದರೆ, ಕೆಲವು ಕ್ಷೇತ್ರಗಳಲ್ಲಿ ಆಕಾಂಕ್ಷಿಗಳು ಟಿಕೆಟ್‌ ಗಿಟ್ಟಿಸಿಕೊಳ್ಳಲು ಪೈಪೋಟಿಗಿಳಿದಿದ್ದು, ಈ ವಿಚಾರವೂ ವರಿಷ್ಠರ ಗಮನದಲ್ಲಿದೆ. ಟಿಕೆಟ್‌ ಘೋಷಣೆಯಾದ ಬೆನ್ನಲ್ಲೆ, ಯಾವುದೇ ಭಿನ್ನಮತಕ್ಕೆ ಅವಕಾಶ ಇಲ್ಲದೆ ಕ್ಷೇತ್ರದ ಇತರ ಆಕಾಂಕ್ಷಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಹೊಣೆಗಾರಿಕೆಯನ್ನೂ ಅಭ್ಯರ್ಥಿಗೆ ನೀಡುವ ಬಗ್ಗೆಯೂ ಪಕ್ಷದ ವಲಯದಲ್ಲಿ ಚರ್ಚೆ ನಡೆದಿದೆ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.