ADVERTISEMENT

ನೆರೆಪೀಡಿತ ಪ್ರದೇಶದಲ್ಲಿ ಸಂಕಷ್ಟ ಮರೆಸಿದ ಕಟ್ಟುವ ಕಾರ್ಯ!

ಇಂಗಳಗಿ ಗ್ರಾಮಸ್ಥರಿಂದ ‘ಅಜ್ಜನ ಕಟ್ಟೆ’ಗೆ ಕಾಯಕಲ್ಪ

ವೆಂಕಟೇಶ್ ಜಿ.ಎಚ್
Published 24 ಆಗಸ್ಟ್ 2019, 19:34 IST
Last Updated 24 ಆಗಸ್ಟ್ 2019, 19:34 IST
ಬಾಗಲಕೋಟೆ ತಾಲ್ಲೂಕಿನ ಇಂಗಳಗಿಯಲ್ಲಿ ಗ್ರಾಮಸ್ಥರು ಶನಿವಾರ ಪ್ರವಾಹಕ್ಕೆ ಸಿಲುಕಿ ಹಾನಿಗೀಡಾಗಿದ್ದ ಗೋರಿಗಳನ್ನು ಕಟ್ಟುವ ಕಾರ್ಯದಲ್ಲಿ ತೊಡಗಿದ್ದರುಪ್ರಜಾವಾಣಿ ಚಿತ್ರ: ಮಂಜುನಾಥ ಗೋಡೆಪ್ಪನವರ
ಬಾಗಲಕೋಟೆ ತಾಲ್ಲೂಕಿನ ಇಂಗಳಗಿಯಲ್ಲಿ ಗ್ರಾಮಸ್ಥರು ಶನಿವಾರ ಪ್ರವಾಹಕ್ಕೆ ಸಿಲುಕಿ ಹಾನಿಗೀಡಾಗಿದ್ದ ಗೋರಿಗಳನ್ನು ಕಟ್ಟುವ ಕಾರ್ಯದಲ್ಲಿ ತೊಡಗಿದ್ದರುಪ್ರಜಾವಾಣಿ ಚಿತ್ರ: ಮಂಜುನಾಥ ಗೋಡೆಪ್ಪನವರ   

ಬಾಗಲಕೋಟೆ: ಮಲಪ್ರಭೆಯ ಮುನಿಸಿಗೆ ತುತ್ತಾಗಿ ಮನೆ–ಮಠ ಕಳೆದುಕೊಂಡರೂ ಇಂಗಳಗಿ ಗ್ರಾಮಸ್ಥರು, ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ತಮ್ಮೂರಿನ ‘ಕಟ್ಟಿ ಅಜ್ಜ’ನ ನೆಲೆಯನ್ನು ಮತ್ತೆ ಕಟ್ಟುವ ಕಾರ್ಯದಲ್ಲಿ ತೊಡಗಿದ್ದರು. ತಮ್ಮ ಸಂಕಷ್ಟ ಬದಿಗಿರಿಸಿ ಜಾತಿ–ಧರ್ಮ ಬೇಧವಿಲ್ಲದೇ ಎಲ್ಲರೂ ಕೈ ಜೋಡಿಸಿದ್ದರು.

ಇಂಗಳಗಿ ಬಾಗಲಕೋಟೆ ತಾಲ್ಲೂಕಿನ ಕೊನೆಯ ಊರು. ನದಿ ದಂಡೆಯಲ್ಲಿಯೇ ಇದ್ದು, ಅಲ್ಲಿ ಮೂರು ಪುರಾತನ ಗೋರಿಗಳಿವೆ. ಸ್ಥಳೀಯರಿಗೆ ಅದು ‘ಕಟ್ಟಿ ಅಜ್ಜ’ ಹೆಸರಿನ ಶ್ರದ್ಧಾ ತಾಣ. ಹಿಂದೂ–ಮುಸ್ಲಿಮ್ ಬೇಧವಿಲ್ಲದೇ ಎಲ್ಲರೂ ಸೇರಿ ಪ್ರತಿ ವರ್ಷ ಅಲ್ಲಿ ಮೊಹರಂ ಆಚರಿಸಿ, ಹರಕೆ ತೀರಿಸುತ್ತಾರೆ.

ಪ್ರವಾಹದ ಆರ್ಭಟಕ್ಕೆ ಇಡೀ ಊರು ನಲುಗಿದೆ. ಗೋರಿಗಳು ಕೊಚ್ಚಿ ಹೋಗಿವೆ. ಬಹುತೇಕ ಮನೆಗಳು ಕುಸಿದಿವೆ. ಅಲ್ಲೀಗ ಯಾರೂ ವಾಸವಿಲ್ಲ. ಕೆಲವರು ಸಮೀಪದ ಗುಡ್ಡದಲ್ಲಿರುವ ಆಸರೆ ಮನೆಗಳಲ್ಲಿದ್ದಾರೆ. ಇನ್ನೂ ಕೆಲವರು ಅಲ್ಲಿಯೇ ತಗಡಿನ ಶೆಡ್ ಹಾಕಿಕೊಂಡಿದ್ದಾರೆ.

ADVERTISEMENT

‘ಪ್ರಜಾವಾಣಿ’ ಶನಿವಾರ ಇಂಗಳಗಿಗೆ ಭೇಟಿ ಕೊಟ್ಟಾಗ ಊರು ಬಿಕೊ ಎನ್ನುತ್ತಿತ್ತು. ಅಜ್ಜನ ಕಟ್ಟೆ ಬಳಿ ಮಾತ್ರ ಜನರಿದ್ದರು.ನದಿ ದಂಡೆಯ ಆಸುಪಾಸಿನಲ್ಲಿ ಬಿದ್ದಿದ್ದ ಕಲ್ಲುಗಳನ್ನು ಹೆಕ್ಕಿ ತಂದು ಗೋರಿಗಳನ್ನು ಕಟ್ಟುವಲ್ಲಿ ನಿರತರಾಗಿದ್ದರು.

‘ನಮ್ಮಲ್ಲಿ ಯಾವುದೇ ಬೇಧವಿಲ್ಲ, ಏನೇ ಕಷ್ಟಗಳಿದ್ದರೂ ಇಲ್ಲಿ ಪರಿಹಾರವಾಗುತ್ತದೆ ಎಂಬ ಪ್ರತೀತಿ ಇದೆ. ಮೊಹರಂನ ಗಂಧದ ರಾತ್ರಿ (ಸಂದಲ್) ಹಾಗೂ ಕತ್ತಲ ರಾತ್ರಿ ದಿನವೂ ಹೇಳಿಕೆ ಆಗುತ್ತದೆ’ ಎಂದು ಮುತ್ತಪ್ಪ ನಿಂಬಲಗುಂದಿ ಹೇಳಿದರು.

ಅಲ್ಲಿಯೇ ಸಮೀಪದ ಅಗಸಿ ಬಳಿ ಒಂದೇ ಪ್ರಾಂಗಣದಲ್ಲಿ ಹನುಮಪ್ಪ ಹಾಗೂ ವೀರಭದ್ರೇಶ್ವರನ ಗುಡಿಗಳು ಮತ್ತು ಮಸೀದಿ ಕಾಣಿಸಿದವು.

ಈರಣ್ಣನ ಹೇಳಿಕೆ!..
‘ಶ್ರಾವಣ ಸೋಮವಾರ ನಮ್ಮೂರಿನ ಈರಣ್ಣನ (ವೀರಭದ್ರೇಶ್ವರ) ಗುಡಿಯಲ್ಲಿ ಜಾತ್ರೆ ಮಾಡಿದ್ದೆವು. ಈ ವೇಳೆ ಹಿರಿಯರಿಂದ (ಮೈಯಲ್ಲಿ ದೇವರು ಬಂದು) ಹೇಳಿಕೆ ಆಗಿದ್ದು, ಹಾಳಾಗಿರುವ ಕಟ್ಟೆಯನ್ನು ಮೊಹರಂ ಒಳಗಡೆ ಸರಿಪಡಿಸಲು ಸೂಚಿಸಲಾಗಿದೆ. ಅಮಾವಾಸ್ಯೆ ಮುಗಿದು ಎಂಟು ದಿನಕ್ಕೆ ಮೊಹರಂ ಬರಲಿದೆ’ ಎಂದು ಗ್ರಾಮಸ್ಥ ಹನುಮಂತ ವಾಲ್ಮೀಕಿ ಹೇಳಿದರು.

‘ದುರಸ್ತಿ ಕಾರ್ಯ ಆರಂಭಿಸಿದರೆ ಒಂದೇ ದಿನದಲ್ಲಿ ಮುಗಿಸಬೇಕು ಎಂದು ಹೇಳಿಕೆ ಆಗಿದೆ. ಹೀಗಾಗಿ ದಿನಕ್ಕೊಂದು ಕಟ್ಟೆ ಕಟ್ಟುವ ಕಾರ್ಯ ಪೂರ್ಣಗೊಳಿಸುತ್ತಿದ್ದೇವೆ. ಪಾಳಿ ಪ್ರಕಾರ ಬಂದು ಸೇವೆ ಮಾಡುತ್ತಿದ್ದಾರೆ’ ಎಂದು ದಾವಲ್‌ಸಾಬ್ ನದಾಫ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.