ADVERTISEMENT

ಇತರೆ ರಾಜ್ಯಗಳ ಮುಂದೆ ಬಿಎಸ್‌ವೈ ಘೋಷಿಸಿರುವ ಪ್ಯಾಕೇಜ್ ಏನೇನೂ ಅಲ್ಲ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 19 ಮೇ 2021, 14:07 IST
Last Updated 19 ಮೇ 2021, 14:07 IST
ಸಿದ್ದರಾಮಯ್ಯ
ಸಿದ್ದರಾಮಯ್ಯ    

ಬೆಂಗಳೂರು: ಆಂಧ್ರಪ್ರದೇಶ, ದೆಹಲಿ, ಕೇರಳ ಮುಂತಾದ ರಾಜ್ಯಗಳು ಜನಪರವಾದ ಪ್ಯಾಕೇಜ್‌ಗಳನ್ನು ಘೋಷಿಸಿವೆ. ಆ ರಾಜ್ಯಗಳ ಮುಂದೆ ಯಡಿಯೂರಪ್ಪ ಅವರು ಘೋಷಣೆ ಮಾಡಿರುವ ಪ್ಯಾಕೇಜ್ ಏನೇನೂ ಅಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯ ಸರ್ಕಾರದ ವಿರುದ್ಧ ಸರಣಿ ಟ್ವೀಟ್‌ ಮಾಡಿರುವ ಅವರು, ‘ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಜೆಟ್ ಮೇಲಿನ ಉತ್ತರದ ವೇಳೆ ತಮಿಳುನಾಡು, ಮಹಾರಾಷ್ಟ್ರ, ತೆಲಂಗಾಣ, ಕೇರಳ ರಾಜ್ಯಗಳಿಗಿಂತ ನಮ್ಮ ಆರ್ಥಿಕತೆ ಉತ್ತಮವಾಗಿದೆ ಎಂದು ಹೇಳಿದ್ದರು. ಆದರೆ ಈಗ ರಾಜ್ಯದ ಆರ್ಥಿಕ ಸ್ಥಿತಿ ಸರಿ ಇಲ್ಲ ಎನ್ನುತ್ತಿದ್ದಾರೆ. ಇದರಲ್ಲಿ ಯಾವುದು ಸತ್ಯ? ಯಾವುದು ಸುಳ್ಳು?’ ಎಂದು ಪ್ರಶ್ನಿಸಿದ್ದಾರೆ.

‘ತಮಿಳುನಾಡಿನಲ್ಲಿ 2 ಕೋಟಿಗೂ ಅಧಿಕ ಕುಟುಂಬಗಳಿಗೆ ತಲಾ 4 ಸಾವಿರ ರೂ.ಗಳ ಪ್ರಕಾರ ಸುಮಾರು 8,368 ಕೋಟಿ ರೂ. ಪರಿಹಾರದ ಪ್ಯಾಕೇಜ್ ಅನ್ನು ಘೋಷಿಸಲಾಗಿದೆ. ಬಡ ಜನರಿಗೆ ನೆರವಾಗುವ ಇಂಥಾ ಪ್ಯಾಕೇಜ್ ನಮ್ಮ ರಾಜ್ಯದಲ್ಲೂ ಅವಶ್ಯವಾಗಿ ಬೇಕಿತ್ತು’ ಎಂದು ಆಗ್ರಹಿಸಿದ್ದಾರೆ.

ADVERTISEMENT

‘ಕಳೆದ ಬಾರಿ ಸವಿತಾ ಸಮಾಜದ ಶೇ. 50 ರಷ್ಟು ಜನರಿಗೂ ಪರಿಹಾರ ಸಿಗಲಿಲ್ಲ. ಅದೇ ರೀತಿ ರೈತರಿಗೆ, ಹೂ ಬೆಳೆಗಾರರಿಗೆ, ಹಣ್ಣು ಬೆಳಗಾರರಿಗೆ ಘೋಷಿಸಿದ್ದ ಪರಿಹಾರದ ಹಣ ಶೇ. 50 ರಷ್ಟು ಜನರನ್ನು ತಲುಪಿಲ್ಲ. ಈ ಬಾರಿಯಾದರೂ ರಾಜ್ಯ ಸರ್ಕಾರ ಇವರಿಗೆ ಸೂಕ್ತ ಪರಿಹಾರ ನೀಡಬೇಕಿತ್ತು’ ಎಂದಿದ್ದಾರೆ.

ಕಳೆದ ಬಾರಿಯ ₹2100 ಕೋಟಿಗಳ ಪ್ಯಾಕೇಜ್‍ನಲ್ಲಿ ಬಹುಪಾಲು ಹಣವನ್ನು ನೊಂದ ಜನರಿಗೆ ನೀಡಲೇ ಇಲ್ಲ. ಆಟೋ, ಕ್ಯಾಬ್, ಚಾಲಕರುಗಳಿಗೆ ಸಂಬಂಧಿಸಿದಂತೆ 7.75 ಲಕ್ಷ ಜನರಿಗೆ ತಲಾ 5 ಸಾವಿರ ಪರಿಹಾರ ಕೊಡುವುದಾಗಿ ಘೋಷಿಸಿ, ನೀಡಿದ್ದು, ಕೇವಲ 2.10 ಲಕ್ಷ ಜನರಿಗೆ ಮಾತ್ರ ಎಂದು ಕಿಡಿಕಾರಿದ್ದಾರೆ.

‘ಈ ಬಾರಿ ವಿಶೇಷ ಪ್ಯಾಕೇಜ್ ಘೋಷಿಸುವ ಮೂಲಕ ನೇಕಾರರು, ಅಕ್ಕಸಾಲಿಗರು, ಕಮ್ಮಾರರು, ಮಡಿವಾಳರು, ಛಾಯಾಗ್ರಾಹಕರು, ಟೈಲರಿಂಗ್ ವೃತ್ತಿಯವರು, ಸವಿತಾ ಸಮಾಜದವರಿಗೆ ಪರಿಹಾರ ನೀಡಬೇಕು ಮತ್ತು ಸೋಂಕು ನಿಯಂತ್ರಣಕ್ಕೆ ಬರುವವರೆಗೆ ಕಟ್ಟುನಿಟ್ಟಾಗಿ ಲಾಕ್‍ಡೌನ್ ಜಾರಿಯಾಗಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತೇನೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.