ADVERTISEMENT

ಸುಳ್ಳು ಸುದ್ದಿ ಕಡಿವಾಣಕ್ಕೆ ಎಐ ತಂತ್ರಾಂಶ

₹67.26 ಕೋಟಿ ವೆಚ್ಚದಲ್ಲಿ ಖರೀದಿಗೆ ಸಚಿವ ಸಂಪುಟ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 19:32 IST
Last Updated 5 ಫೆಬ್ರುವರಿ 2026, 19:32 IST
ಎಐ
ಎಐ   

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗುವ ಸುಳ್ಳು ಸುದ್ದಿ, ತಪ್ಪು ಮಾಹಿತಿ ಮತ್ತು ದ್ವೇಷಪೂರಿತ ಪೋಸ್ಟ್‌ಗಳನ್ನು ಪತ್ತೆ ಮಾಡಲು ಅನುಕೂಲವಾಗುವಂತೆ ₹67.26 ಕೋಟಿ ವೆಚ್ಚದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ತಂತ್ರಾಂಶ ಖರೀದಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಪ್ರಸ್ತಾವನೆಗೆ ಒಪ್ಪಿಗೆ ನೀಡಲಾಗಿದೆ.

₹50 ಕೋಟಿ ವೆಚ್ಚದಲ್ಲಿ ‘ಸೋಷಿಯಲ್‌ ಮೀಡಿಯಾ ಅನಲಿಟಿಕಲ್‌ ಸಲ್ಯೂಷನ್‌’ ಖರೀದಿಸಲಾಗುತ್ತಿದ್ದು, ₹7 ಕೋಟಿ ವೆಚ್ಚದಲ್ಲಿ ಸರ್ವರ್‌ ಮತ್ತು ಸರ್ವರ್ ನಿರ್ವಹಣಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ₹10.26 ಕೋಟಿಗೂ ಹೆಚ್ಚು ಜಿಎಸ್‌ಟಿ ಪಾವತಿ ಮಾಡಬೇಕಾಗುತ್ತದೆ ಎಂದು ಸಂಪುಟ ಸಭೆಯ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಕಾನೂನು ಸಚಿವ ಎಚ್‌.ಕೆ.ಪಾಟೀಲ ಅವರು ತಿಳಿಸಿದರು.

ADVERTISEMENT

ಯೂಟ್ಯೂಬ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ಎಕ್ಸ್‌ ಸೇರಿ ಎಲ್ಲ ಸ್ವರೂಪದ ಸಾಮಾಜಿಕ ಜಾಲತಾಣಗಳಲ್ಲಿ ಮಾಡಲಾಗುವ ಪೋಸ್ಟ್‌ಗಳು ಮತ್ತು ಸುದ್ದಿ ಜಾಲತಾಣಗಳಲ್ಲಿ ಪ್ರಕಟಿಸಲಾಗುವ ಸುದ್ದಿಗಳನ್ನು ಈ ತಂತ್ರಾಂಶವು ಸ್ವಯಂಚಾಲಿತವಾಗಿ ಪರಿಶೀಲನೆ ನಡೆಸಲಿದೆ. ಪೋಸ್ಟ್‌ಗಳಲ್ಲಿ ಸುಳ್ಳುಮಾಹಿತಿ, ದ್ವೇಷಪೂರಿತ ಸಂದೇಶಗಳು, ತಿರುಚಲಾದ ಸುದ್ದಿ–ಮಾಹಿತಿಗಳು ಇದ್ದರೆ, ಸಂಬಂಧಿತ ಜಿಲ್ಲಾ ಘಟಕಕ್ಕೆ ಸ್ವಯಂಚಾಲಿತವಾಗಿ ಮಾಹಿತಿ ರವಾನೆಯಾಗಲಿದೆ ಎಂದು ವಿವರಿಸಿದರು.

ಗೃಹ ಇಲಾಖೆಯು ಈ ಘಟಕಗಳನ್ನು ನಿರ್ವಹಿಸಲಿದ್ದು, ಅವುಗಳಿಂದ ಬಂದ ಸೂಚನೆಗಳನ್ನು ಆಧರಿಸಿ ಕ್ರಮ ತೆಗೆದುಕೊಳ್ಳಲಾಗುತ್ತದೆ. ಅಂತಹ ಪೋಸ್ಟ್‌ ಮಾಡಿದವರ ವಿರುದ್ಧ, ಈಗ ಇರುವ ಕಾನೂನಿನ ಅಡಿಯಲ್ಲಿಯೇ ಕ್ರಮ ತೆಗೆದುಕೊಳ್ಳಲಾಗುತ್ತದೆ. ಅಗತ್ಯ ಎನಿಸಿದರೆ, ಮುಂದಿನ ದಿನಗಳಲ್ಲಿ ಪ್ರತ್ಯೇಕ ಕಾನೂನು ರೂಪಿಸಲಾಗುತ್ತದೆ ಎಂದರು.

ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಮಾಹಿತಿ ತಂತ್ರಜ್ಞಾನ ಇಲಾಖೆ ಅಧೀನದಲ್ಲಿ ಈ ಹಿಂದೆ ‘ಫ್ಯಾಕ್ಟ್‌ಚೆಕ್‌’ ಘಟಕಗಳನ್ನು ಆರಂಭಿಸಲಾಗಿತ್ತು. ಹೊಸ ತಲೆಮಾರಿನ ಎಐ ಮತ್ತಿತರ ತಂತ್ರಜ್ಞಾನಗಳ ಎದುರು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಈ ಘಟಕಕ್ಕೆ ಸಾಧ್ಯವಿರಲಿಲ್ಲ. ಹೀಗಾಗಿ ಹೊಸ ತಲೆಮಾರಿನ ತಂತ್ರಾಂಶಗಳನ್ನು ಬಳಸಿಕೊಂಡು, ಪ್ರಬಲವಾದ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.