
ಬೆಂಗಳೂರು: ಅಲ್ಪಸಂಖ್ಯಾತರ ಸಮುದಾಯದವರಿಗೆ ಸಾಂಸ್ಕೃತಿಕ ಮತ್ತು ಸಾಮಾಜಿಕ ಚಟುವಟಿಕೆ ಹಮ್ಮಿಕೊಳ್ಳಲು ‘ಬಹೂಪಯೋಗಿ ಭವನ’ಗಳನ್ನು ನಿರ್ಮಿಸಲು ಮುಸ್ಲಿಂ ಸಮುದಾಯದ 60 ಸಂಸ್ಥೆಗಳಿಗೆ ಒಟ್ಟು ₹ 67 ಕೋಟಿ ಅನುದಾನವನ್ನು ರಾಜ್ಯ ಸರ್ಕಾರ ಮಂಜೂರು ಮಾಡಿದೆ.
ಭವನ ನಿರ್ಮಿಸಲು ಪ್ರಸ್ತಾಪಿಸಿರುವ ಬಹುತೇಕ ಸಂಸ್ಥೆಗಳು ಮಸೀದಿಗಳಾಗಿವೆ. ಇನ್ನೂ ಕೆಲವು ವಕ್ಫ್ ಸಂಸ್ಥೆಯ ಜಾಗಗಳಲ್ಲಿ ತಲೆ ಎತ್ತಲಿವೆ. ಅಲ್ಪಸಂಖ್ಯಾತರ ಪಟ್ಟಿಯಲ್ಲಿರುವ ಕ್ರಿಶ್ಚಿಯನ್, ಸಿಖ್, ಜೈನ, ಬೌದ್ಧ ಸಮುದಾಯಗಳಿಗೆ ಸೇರಿದ ಸಂಸ್ಥೆಗಳ ಹೆಸರು ಅನುದಾನ ಮಂಜೂರಾಗಿರುವ ಪಟ್ಟಿಯಲ್ಲಿ ಇಲ್ಲ.
ಜಿಲ್ಲಾ ಮಟ್ಟದಲ್ಲಿ ತಲಾ ₹ 2 ಕೋಟಿ ಹಾಗೂ ತಾಲ್ಲೂಕುಮಟ್ಟದಲ್ಲಿ ತಲಾ ₹ 1 ಕೋಟಿ ವೆಚ್ಚದಲ್ಲಿ ಬಹೂಪಯೋಗಿ ಭವನ ನಿರ್ಮಿಸಲು ಮಂಜೂರಾತಿ ನೀಡಲಾಗಿದೆ.
ಈ ಕುರಿತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅ.11ರಂದು ಆದೇಶ ಹೊರಡಿಸಿದೆ. ಬಳ್ಳಾರಿ, ಹುಬ್ಬಳ್ಳಿ– ಧಾರವಾಡ, ಕಲಬುರಗಿ, ಕೊಪ್ಪಳ, ಮೈಸೂರು, ಶಿವಮೊಗ್ಗ, ಹೊಸಪೇಟೆ ಈ ಏಳು ಜಿಲ್ಲಾ ಕೇಂದ್ರಗಳಲ್ಲಿ ಮತ್ತು ಒಟ್ಟು 53 ತಾಲ್ಲೂಕುಗಳಲ್ಲಿ ಭವನ ನಿರ್ಮಿಸಲು ಅನುಮೋದನೆ ನೀಡಲಾಗಿದೆ.
ಅಲ್ಪಸಂಖ್ಯಾತರ ಸಮುದಾಯದವರಿಗೆ ಹೋಬಳಿ ಮತ್ತು ತಾಲ್ಲೂಕುಮಟ್ಟದಲ್ಲಿ ತಲಾ ₹ 50 ಲಕ್ಷ ಹಾಗೂ ಜಿಲ್ಲಾ ಮತ್ತು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ₹ 1 ಕೋಟಿ ವೆಚ್ಚದಲ್ಲಿ ಬಹೂಪಯೋಗಿ ಭವನಗಳನ್ನು ನಿರ್ಮಿಸಲಾಗುವುದು ಎಂದು ಈ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದರು. ‘ಹೋಬಳಿ ಮತ್ತು ತಾಲ್ಲೂಕುಮಟ್ಟದಲ್ಲಿ ₹ 2 ಕೋಟಿ ಹಾಗೂ ಜಿಲ್ಲಾ ಮತ್ತು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ₹ 3 ಕೋಟಿ ವೆಚ್ಚದಲ್ಲಿ ಬಹೂಪಯೋಗಿ ಭವನ ನಿರ್ಮಿಸಲು ಅನುಮತಿ ಕೊಡಿ’ ಎಂದು ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕ ಜೀಲಾನಿ ಎಚ್. ಮೊಕಾಶಿ ಅವರು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು.
ಜುಲೈ 3ರಂದು ಆದೇಶ ಹೊರಡಿಸಿದ್ದ ಸರ್ಕಾರ, ತಾಲ್ಲೂಕುಮಟ್ಟದಲ್ಲಿ ₹ 1 ಕೋಟಿ, ಜಿಲ್ಲಾಮಟ್ಟದಲ್ಲಿ ₹ 2 ಕೋಟಿ ವೆಚ್ಚದಲ್ಲಿ ಭವನ ನಿರ್ಮಿಸಲು ಮಂಜೂರಾತಿ ನೀಡಿತ್ತು. ಅಲ್ಲದೆ, ಕಡ್ಡಾಯವಾಗಿ ಸರ್ಕಾರಿ ಜಾಗ ಅಥವಾ ವಕ್ಫ್ ಮಂಡಳಿಯಿಂದ ನಿಯಮಾನುಸಾರ ಪಡೆದ ನಿವೇಶನದಲ್ಲಿಯೇ ಭವನ ನಿರ್ಮಿಸಬೇಕು. ಸಂಬಂಧಪಟ್ಟ ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ನಿವೇಶನ ಗುರುತಿಸಬೇಕು. ಜೊತೆಗೆ, ರಾಜ್ಯದಾದ್ಯಂತ ಏಕರೂಪವಾಗಿ ಭವನಗಳನ್ನು ನಿರ್ಮಿಸಲು ನಿರ್ದೇಶಕರು ಕ್ರಮ ತೆಗೆದುಕೊಳ್ಳಬೇಕು ಎಂದೂ ಆದೇಶ ಹೇಳಿತ್ತು.
ನಗರ ಪ್ರದೇಶಗಳಲ್ಲಿರುವ ಅಲ್ಪಸಂಖ್ಯಾತರ ಕೊಳೆಗೇರಿ, ಕಾಲೊನಿಗಳ ಅಭಿವೃದ್ಧಿ ಯೋಜನೆ ಮತ್ತು ಮುಖ್ಯಮಂತ್ರಿ ವಿಶೇಷ ಅಭಿವೃದ್ಧಿ ಯೋಜನೆಯಡಿ ಅಲ್ಪಸಂಖ್ಯಾತರಿಗೆ ಒದಗಿಸುವ ಅನುದಾನಕ್ಕೆ ಸೀಮಿತವಾಗಿ ರೂಪಿಸಲಾಗಿರುವ ಕ್ರಿಯಾಯೋಜನೆಯಲ್ಲಿ ಈ ಬಹೂಪಯೋಗಿ ಭವನಗಳನ್ನು ನಿರ್ಮಿಸಲು ₹ 50 ಕೋಟಿ ಅನುದಾನ ಮೀಸಲಿಡಲಾಗಿತ್ತು. ಅಲ್ಪಸಂಖ್ಯಾತ ಕಲ್ಯಾಣ ಸಚಿವ ಬಿ. ಝೆಡ್. ಜಮೀರ್ ಅಹ್ಮದ್ ಖಾನ್ ಅವರು, ಭವನ ನಿರ್ಮಿಸಲು ಸಂಸ್ಥೆಗಳನ್ನು ಆಯ್ಕೆ ಮಾಡಿ ಅನುದಾನ ನಿಗದಿಪಡಿಸಿದ್ದರು. ಅದರಂತೆ ಮೊದಲ ಹಂತದಲ್ಲಿ 59 ಸಂಸ್ಥೆಗಳಿಗೆ ಒಟ್ಟು ₹ 81 ಕೋಟಿ ಮಂಜೂರು ಮಾಡಬೇಕು. ಮೊದಲ ಕಂತು ₹ 40.50 ಕೋಟಿ ಬಿಡುಗಡೆ ಮಾಡುವ ಜೊತೆಗೆ, ಅನುಷ್ಠಾನ ಏಜೆನ್ಸಿಯನ್ನೂ ಆಯ್ಕೆ ಮಾಡಿ ಆದೇಶ ಹೊರಡಿಸಬೇಕು ಎಂದು ಜೀಲಾನಿ.ಎಚ್. ಮೊಕಾಶಿ ಅವರು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು.
ಈ ಪ್ರಸ್ತಾವವನ್ನು ಪರಿಗಣಿಸಿದ್ದ ಸರ್ಕಾರ, 59 ಸಂಸ್ಥೆಯ ಬದಲು ಹೆಚ್ಚುವರಿಯಾಗಿ ಒಂದು ಸಂಸ್ಥೆಯನ್ನು ಪಟ್ಟಿಯಲ್ಲಿ ಸೇರಿಸಿ ಒಟ್ಟು ₹ 67 ಕೋಟಿ ಮಂಜೂರು ಮಾಡಿದೆ. ಈ ಪೈಕಿ, ಶೇ 50ರಷ್ಟು ಅನುದಾನವನ್ನು ಬಿಡುಗಡೆ ಮಾಡಲು ಮತ್ತು ಭವನ ನಿರ್ಮಾಣ ಕಾಮಗಾರಿಯನ್ನು ರಾಜ್ಯ ಹ್ಯಾಬಿಟೇಟ್ ಕೇಂದ್ರದ ಮೂಲಕ ಅನುಷ್ಠಾನಗೊಳಿಸಲು ಅನುಮತಿ ನೀಡಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ.
ಯಾವೆಲ್ಲ ಸಂಸ್ಥೆಗಳಿಗೆ ₹2 ಕೋಟಿ ಅನುದಾನ
ಬಳ್ಳಾರಿ ನಗರದಲ್ಲಿ ವಕ್ಫ್ ಜಾಗ ಹುಬ್ಬಳ್ಳಿ–ಧಾರವಾಡದ ಇಸ್ಲಾಂಪುರ ಬೀದಿಯಲ್ಲಿರುವ ವಕ್ಫ್ ಜಾಗ ಕಲಬುರಗಿಯ ಹಜರತ್ ಸಯ್ಯದ್ ರುಕ್ಮೂದ್ದೀನ್ ತೋಲಾ ದರ್ಗಾ ಆವರಣ ಕೊಪ್ಪಳ ನಗರದ ಹಮಾಲರ ಕಾಲೊನಿಯ ಶಾದಿ ಮಹಲ್ (ಸರ್ಕಾರಿ ಜಾಗ) ಮೈಸೂರು ನಗರದ ವಕ್ಫ್ ಜಾಗ ಶಿವಮೊಗ್ಗ ನಗರದ ಗಾಂಧಿ ಬಜಾರ್‌ನಲ್ಲಿರುವ ಮರ್ಕಜಿ ಸುನ್ನಿ ಜಾಮಿಯಾ ಮಸೀದಿ ಮತ್ತು ಹೊಸಪೇಟೆ ನಗರದ ವಕ್ಫ್ ಜಾಗದಲ್ಲಿ ತಲಾ ₹ 2 ಕೋಟಿ ವೆಚ್ಚದಲ್ಲಿ ಬಹೂಪಯೋಗಿ ಭವನ ನಿರ್ಮಿಸಲು ಸರ್ಕಾರ ಅನುಮೋದನೆ ನೀಡಿದೆ. 57 ತಾಲ್ಲೂಕು ಕೇಂದ್ರಗಳಲ್ಲಿರುವ ಮಸೀದಿ ವಕ್ಫ್ ಸಂಸ್ಥೆಯ ಜಾಗ ಅಂಜುಮಾನ್ ಇಸ್ಲಾಂ ಸಮಿತಿಯ ಜಾಗ ಶಾದಿಮಹಲ್ ಇರುವ ಕಡೆಗಳಲ್ಲಿ ತಲಾ ₹ 1 ಕೋಟಿ ವೆಚ್ಚದಲ್ಲಿ ಈ ಭವನಗಳು ನಿರ್ಮಾಣ ಆಗಲಿವೆ.
ಈ ಹಿಂದೆ ‘ಶಾದಿ ಮಹಲ್’
2017ರಲ್ಲಿ ಅಲ್ಪಸಂಖ್ಯಾತರಾದ ಮುಸ್ಲಿಂ ಸಮುದಾಯಗಳಿಗೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆ ಹಮ್ಮಿಕೊಳ್ಳಲು ಈ ಸಮುದಾಯಗಳಿಗೆ ಸೇರಿದ ವಕ್ಪ್ ಮತ್ತು ಅರೆ ಸರ್ಕಾರಿ ಸಂಸ್ಥೆಗಳಿಗೆ ಜಿಲ್ಲಾ ಕೇಂದ್ರದಲ್ಲಿ ₹2 ಕೋಟಿ ಮತ್ತು ತಾಲ್ಲೂಕು ಕೇಂದ್ರ ಹಾಗೂ ಇತರೆ ಪ್ರದೇಶಗಳಲ್ಲಿ ₹1 ಕೋಟಿ ಅನುದಾನದಲ್ಲಿ ‘ಶಾದಿಮಹಲ್’ ನಿರ್ಮಿಸಲು ಅನುದಾನ ಬಿಡುಗಡೆ ಮಾಡಲಾಗಿತ್ತು. ಈ ಬಾರಿ ‘ಶಾದಿ ಮಹಲ್’ ಹೆಸರಿನ ಬದಲು ‘ಬಹೂಪಯೋಗಿ ಭವನ’ ಎಂದು ಹೆಸರು ಬದಲಿಸಲಾಗಿದೆ ಎಂದು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.