ADVERTISEMENT

ವಿವಿಧ ಇಲಾಖೆ, ನಿಗಮಮಂಡಳಿಗಳಲ್ಲಿ ಖಾಲಿ ಇರುವ ಹುದ್ದೆ ಶೀಘ್ರ ಭರ್ತಿ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 1:52 IST
Last Updated 12 ಡಿಸೆಂಬರ್ 2025, 1:52 IST
<div class="paragraphs"><p>ಸಿದ್ದರಾಮಯ್ಯ&nbsp;</p></div>

ಸಿದ್ದರಾಮಯ್ಯ 

   

ಸುವರ್ಣ ವಿಧಾನಸೌಧ (ಬೆಳಗಾವಿ): ಸರ್ಕಾರದ ವಿವಿಧ ಇಲಾಖೆ, ನಿಗಮ–ಮಂಡಳಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಹಂತಹಂತವಾಗಿ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವಿಧಾನಪರಿಷತ್‌ನಲ್ಲಿ ಬಿಜೆಪಿಯ ಧನಂಜಯ ಸರ್ಜಿ, ಹಣಮಂತ ನಿರಾಣಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಸ್ತುತ ವಿವಿಧ ಇಲಾಖೆಗಳಲ್ಲಿ 2.84 ಲಕ್ಷ ಹುದ್ದೆಗಳು ಖಾಲಿ ಇದ್ದರೂ, 96,844 ಹುದ್ದೆಗಳನ್ನು ಈಗಾಗಲೇ ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗಿದೆ. ಉಳಿದ 1.88 ಲಕ್ಷ ಹುದ್ದೆಗಳಲ್ಲಿ 24,300 ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ ಎಂದರು.

ADVERTISEMENT

ವಿವಿಧ ನಿಗಮ–ಮಂಡಳಿಗಳಲ್ಲಿ ಖಾಲಿ ಇರುವ 1,01,420 ಹುದ್ದೆ, ವಿವಿಧ ವಿಶ್ವವಿದ್ಯಾಲಯಗಳ 14,677 ಖಾಲಿ ಹುದ್ದೆಗಳ ಭರ್ತಿಗೂ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

ಅನುಕಂಪದ ನೇಮಕಾತಿ, ಬಡ್ತಿ ಮೂಲಕ ಭರ್ತಿ ಮಾಡುವ ಸ್ಥಾನಗಳು ಹಾಗೂ ಬ್ಯಾಕ್‌ಲಾಗ್‌ ಹುದ್ದೆಗಳನ್ನು ಇಲಾಖಾ ಹಂತದಲ್ಲೇ ಭರ್ತಿಗೆ ಅನುಮತಿ ನೀಡಲಾಗಿದೆ. ಉಳಿದ ಎಲ್ಲ ಖಾಲಿ ಹುದ್ದೆಗಳನ್ನು ಹಂತಹಂತವಾಗಿ ಭರ್ತಿ ಮಾಡಲಾಗುವುದು ಎಂದರು.

ರಾಜ್ಯದ ಹಣಕಾಸಿನ ಮೇಲೆ ಪರಿಣಾಮ ಬೀರುವ ಯಾವುದೇ ಹುದ್ದೆಯನ್ನು ಸಾರ್ವಜನಿಕ ಹುದ್ದೆಗೆ ಸೇರಿಸುವ ಅಥವಾ ಸಾರ್ವಜನಿಕ ಸೇವೆಯಿಂದ ರದ್ದುಪಡಿಸುವ ಪ್ರಸ್ತಾವಗಳಿಗೆ ಆರ್ಥಿಕ ಇಲಾಖೆಯ ಅನುಮತಿ ಪಡೆಯಬೇಕು. ಹುದ್ದೆಗಳ ಸೃಜನೆ ಅಥವಾ ಹುದ್ದೆಗಳ ಸಂಖ್ಯೆಯನ್ನು ಒಳಗೊಂಡ ಪ್ರಸ್ತಾವನೆ, ಯೋಜನೆಗಳ ಕುರಿತು ಆದೇಶಗಳನ್ನು ಹೊರಡಿಸುವ ಪೂರ್ವದಲ್ಲಿ ಆರ್ಥಿಕ ಇಲಾಖೆಯ ಸಹಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ. ಪೂರ್ವಾನುಮತಿ ಪಡೆಯದೆ ಇಲಾಖೆಗಳು ಹುದ್ದೆಗಳನ್ನು ಭರ್ತಿ ಮಾಡಿಕೊಂಡರೆ ಸೂಕ್ತ ಅನುದಾನ ಒದಗಿಸಲು ಸಾಧ್ಯವಾಗುವುದಿಲ್ಲ ಎಂದು ವಿವರ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.