ADVERTISEMENT

ರಾಜ್ಯಪಾಲರ ನಡೆ: ಸದನದ ಹೊರಗೂ ಜಟಾಪಟಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 23:30 IST
Last Updated 22 ಜನವರಿ 2026, 23:30 IST
<div class="paragraphs"><p>ರಾಜ್ಯಪಾಲ ಥಾವರಚಂದ್ ಗೆಹಲೋತ್</p></div>

ರಾಜ್ಯಪಾಲ ಥಾವರಚಂದ್ ಗೆಹಲೋತ್

   

ಪ್ರಜಾವಾಣಿ ಚಿತ್ರ

ರಾಜ್ಯ ಸಚಿವ ಸಂಪುಟವು ಸಿದ್ಧಪಡಿಸಿಕೊಟ್ಟ ಭಾಷಣದ ಮೊದಲ ಮತ್ತು ಕೊನೆಯ ಕೆಲ ವಾಕ್ಯಗಳನ್ನಷ್ಟೇ ಓದಿ, ವಿಧಾನ ಮಂಡಲದ ಜಂಟಿ ಅಧಿವೇಶನದಿಂದ ಹೊರನಡೆದ ರಾಜ್ಯಪಾಲರ ನಡೆಯನ್ನು ಆಡಳಿತಾರೂಢ ಕಾಂಗ್ರೆಸ್‌ ಟೀಕಿಸಿದ್ದರೆ, ವಿರೋಧ ಪಕ್ಷಗಳು ಸಮರ್ಥಿಸಿಕೊಂಡಿವೆ

ಸಿ.ಎಂ ರಾಜೀನಾಮೆ ನೀಡಲಿ: ಛಲವಾದಿ ನಾರಾಯಣಸ್ವಾಮಿ

‘ರಾಜ್ಯ‍ಪಾಲರಿಗೆ ಸದನದೊಳಗೆ ಘೇರಾವ್ ಮಾಡುವ ಮೂಲಕ ಕಾಂಗ್ರೆಸ್‌ ಸದಸ್ಯರು ಗೂಂಡಾಗಿರಿ ಮಾಡಿದ್ದಾರೆ. ರಾಜ್ಯಪಾಲರನ್ನು ಅಡ್ಡಗಟ್ಟಿ, ಬೆದರಿಕೆ ಹಾಕಿದ್ದಾರೆ. ಇದರ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕು’ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.

ADVERTISEMENT

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಕಾಂಗ್ರೆಸ್‌ನ ಗೂಂಡಾಗಿರಿ ಈವರೆಗೆ ರಸ್ತೆಗಳಿಗೆ ಸೀಮಿತವಾಗಿತ್ತು. ಈಗ ಅದು ಸದನವನ್ನೂ ಪ್ರವೇಶಿಸಿದೆ. ಇದಕ್ಕೆ ಕಾರಣರಾದ ಎಲ್ಲ ಸದಸ್ಯರನ್ನು ಅಮಾನತು ಮಾಡಬೇಕು’ ಎಂದು ಒತ್ತಾಯಿಸಿದರು.

ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್‌.ರವಿಕುಮಾರ್‌, ‘ವಿಬಿ ಜಿ ರಾಮ್‌ ಜಿ ಯೋಜನೆ ಬಗ್ಗೆ ಕಾಂಗ್ರೆಸ್‌ ಸರ್ಕಾರ ಸುಳ್ಳುಗಳನ್ನು ಸೇರಿಸಿ ಭಾಷಣವನ್ನು ಸಿದ್ಧಪಡಿಸಿತ್ತು. ಹೀಗಾಗಿಯೇ ರಾಜ್ಯಪಾಲರು ಅದನ್ನು ಓದಿಲ್ಲ. ಅವರು ಸಂವಿಧಾನ ಬದ್ಧವಾಗಿ ನಡೆದುಕೊಂಡಿದ್ದಾರೆ’ ಎಂದರು.

ವಿಧಾನ ಪರಿಷತ್ತಿನ ಬಿಜೆಪಿ ಸದಸ್ಯ ಸಿ.ಟಿ.ರವಿ, ‘ರಾಜ್ಯಪಾಲರು ಭಾಷಣ ಮಾಡುವಾಗ ಮತ್ತು ಅವರು ಹೊರಹೋಗುವಾಗ ಅಗೌರವ ತೋರಲಾಗಿದೆ. ಇದು ಸಂವಿಧಾನಬಾಹಿರ. ರಾಜ್ಯಪಾಲರಿಗೆ ಅಡ್ಡಿಪಡಿಸಿದ ಸದಸ್ಯರನ್ನು ಅಮಾನತು ಮಾಡಲು ಅವಕಾಶವಿದ್ದು, ಈ ಸಂಬಂಧ ಸದನದಲ್ಲಿ ನಿರ್ಣಯ ಮಂಡಿಸುತ್ತೇವೆ’ ಎಂದು ತಿಳಿಸಿದರು.

ಬಿಜೆಪಿ ಏಜೆಂಟರಂತೆ ವರ್ತನೆ: ಎಚ್‌.ಸಿ.ಮಹದೇವಪ್ಪ ಟೀಕೆ

‘ಕೇಂದ್ರದ ಜನವಿರೋಧಿ ಯೋಜನೆಗಳನ್ನು ಅಧಿವೇಶನದಲ್ಲಿ ಚರ್ಚಿಸುವುದು ಒಕ್ಕೂಟ ವ್ಯವಸ್ಥೆಯ ಭಾಗವಾಗಿ ರಾಜ್ಯ ಸರ್ಕಾರದ ಹಕ್ಕು ಮತ್ತು ಜವಾಬ್ದಾರಿ. ಅದನ್ನು ಮರೆತು, ರಾಜ್ಯಪಾಲರು ಬಿಜೆಪಿ ಏಜೆಂಟರಂತೆ ವರ್ತಿಸಿದ್ದು ಖಂಡನೀಯ’ ಎಂದು ಸಮಾಜ ಕಲ್ಯಾಣ ಸಚಿವ ಎಚ್‌.ಸಿ.ಮಹದೇವಪ್ಪ ಟೀಕಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ರಾಜ್ಯಪಾಲರು ಯಾವುದೇ ಪಕ್ಷದ ಸದಸ್ಯರಲ್ಲ. ಅವರು ರಾಜ್ಯದ ಕಾರ್ಯಾಂಗದ ನಾಮಮಾತ್ರ ಮುಖ್ಯಸ್ಥರು. ರಾಜ್ಯದ ಜನರ ಹಿತಾಸಕ್ತಿ ಕಾಪಾಡುವ ಹೊಣೆ ಅವರದ್ದು. ಸರ್ಕಾರ ಬರೆದುಕೊಟ್ಟ ಭಾಷಣ ಓದುವುದು ಅವರ ಸಂವಿಧಾನಬದ್ಧ ಜವಾಬ್ದಾರಿ ಆಗಿದೆಯೇ ಹೊರತು,
ಅವರು ಸರ್ಕಾರಕ್ಕೆ ಮಾಡುವ ಉಪಕಾರವಲ್ಲ’ ಎಂದು
ಹೇಳಿದರು.

‘ವಿಧಾನ ಮಂಡಲದ ಸದನವನ್ನು ಉದ್ದೇಶಿಸಿ ರಾಜ್ಯಪಾಲರು ಮಾಡುವ ಭಾಷಣವನ್ನು ರಾಜ್ಯ ಸಚಿವ ಸಂಪುಟ ಒದಗಿಸುತ್ತದೆ. ಕೇಂದ್ರ ಸರ್ಕಾರದ ವಿರುದ್ಧ ದನಿ ಎತ್ತಲಾಗಿದೆ ಎಂಬ ಕಾರಣಕ್ಕಾಗಿ ರಾಜ್ಯಪಾಲರು ಆ ಭಾಷಣವನ್ನು ನಿರಾಕರಿಸಿ ಹೊರ ನಡೆದಿರುವುದು ಪ್ರಜಾಪ್ರಭುತ್ವಕ್ಕೆ ಮತ್ತು ಸರ್ಕಾರಕ್ಕೆ ಉದ್ದೇಶಪೂರ್ವಕವಾಗಿ ಮಾಡಿದ ಅವಮಾನ’ ಎಂದು ಪ್ರತಿಪಾದಿಸಿದರು.

ಪ್ರಜಾಪ್ರಭುತ್ವ ವಿರೋಧಿ ನಡೆ: ಸಂಸದ ಕಾಗೇರಿ ಖಂಡನೆ

ಶಿರಸಿ: ‘ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ವೇಳೆ ಆಡಳಿತಾರೂಢ ಕಾಂಗ್ರೆಸ್ ಸದಸ್ಯರು ನಡೆದು ಕೊಂಡ ರೀತಿ ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಈ ವರ್ತನೆಯೂ ಸದನದ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿ ಉಳಿಯಲಿದೆ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಖಂಡಿಸಿದ್ದಾರೆ.

‘ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿ ದರ್ಪ ಪ್ರದರ್ಶಿಸುತ್ತಿರುವ ಕಾಂಗ್ರೆಸ್ ಸರ್ಕಾರವು, ಅರಾಜಕ ಆಡಳಿತ ನಡೆಸುತ್ತಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರಿಗೆ ಅಗೌರವ ತೋರುವುದು ಅಕ್ಷಮ್ಯ ಅಪರಾಧವಾಗಿದೆ. ರಾಜ್ಯಪಾಲರಿಗೆ ಅವಮಾನಿಸಿದ ಸಚಿವರು ಮತ್ತು ಶಾಸಕರನ್ನು ಈ ಕೂಡಲೇ ಅಮಾನತು ಮಾಡಬೇಕು. ಸದನದ ಘನತೆ, ಸಂಪ್ರದಾಯವನ್ನು ಎತ್ತಿ ಹಿಡಿಯಬೇಕು’ ಎಂದು ಒತ್ತಾಯಿಸಿದ್ದಾರೆ.

ಅಸಂವಿಧಾನಿಕ ನಡೆ: ಸಿಪಿಎಂ

‘ರಾಜ್ಯಪಾಲರು ಜಂಟಿ ಅಧಿವೇಶನದಲ್ಲಿ ಸರ್ಕಾರದ ಭಾಷಣವನ್ನು ಓದದೆ, ನಿರ್ಗಮಿಸಿರುವುದು ಅಸಾಂವಿಧಾನಿಕ ಮತ್ತು ಪ್ರಜಾ ಪ್ರಭುತ್ವ ವಿರೋಧಿ ನಡೆ’ ಎಂದು ಸಿಪಿಎಂನ ಕರ್ನಾಟಕ ರಾಜ್ಯ ಸಮಿತಿ ಕಾರ್ಯದರ್ಶಿ ಪ್ರಕಾಶ್ ಕೆ. ಖಂಡಿಸಿದ್ದಾರೆ.

‘ರಾಜ್ಯಪಾಲರು ರಾಜ್ಯ ಸರ್ಕಾರ ವನ್ನು ಪ್ರತಿನಿಧಿಸಬೇಕೇ ಹೊರತು, ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸಚಿವ ಸಂಪುಟದ ಮೇಲಿನ ಮಹಾ ಮುಖ್ಯಮಂತ್ರಿ ಅಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಬಂದ ಮೇಲೆ ರಾಜ್ಯಪಾಲರ ಕಚೇರಿಯನ್ನು ದುರುಪಯೋಗ ಮಾಡಿಕೊಂಡು, ರಾಜ್ಯ ಸರ್ಕಾರಗಳ ಅಧಿಕಾರವನ್ನು ಮೊಟಕುಗೊಳಿಸುತ್ತಿದೆ. ಇದನ್ನು ಜನರು ತಡೆಯಬೇಕಾಗಿದೆ’ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.