ಬೆಂಗಳೂರು: ಜಂಟಿ ಅಧಿವೇಶನದ ಎರಡನೇ ದಿನವಾದ ಇಂದು (ಗುರುವಾರ) ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ತಾವೇ ಸಿದ್ಧಪಡಿಸಿದ ಒಂದು ನಿಮಿಷದ ಭಾಷಣವನ್ನು ಓದಿ ಸದನದಿಂದ ಹೊರನಡೆದರು.
ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಓದಲು ರಾಜ್ಯಪಾಲರು ನಿರಾಕರಿಸಿದ್ದಾರೆ.
ಸುಮಾರು ಒಂದು ನಿಮಿಷದ ಭಾಷಣ ಓದಿದ ಬಳಿಕ ರಾಜ್ಯಪಾಲರು ಹೊರನಡೆದಾಗ ಕಾಂಗ್ರೆಸ್ ನಾಯಕರು ಘೇರಾವ್ ಹಾಕಲು ಪ್ರಯತ್ನ ನಡೆಸಿದ್ದಾರೆ. ಇದರಿಂದಾಗಿ ಸದನದಲ್ಲಿ ಬಿಗುವಾದ ಸನ್ನಿವೇಶವು ನಿರ್ಮಾಣವಾಯಿತು.
ಬಳಿಕ ಬಿಗಿ ಭದ್ರತೆಯಲ್ಲಿ ರಾಜ್ಯಪಾಲರನ್ನು ಸದನದಿಂದ ಹೊರಗಡೆಗೆ ಕರೆದೊಯ್ಯಲಾಯಿತು.
ರಾಜ್ಯಪಾಲರ ಕ್ರಮ ಖಂಡಿಸಿದ ಸಿಎಂ ಸಿದ್ದರಾಮಯ್ಯ
ಜಂಟಿ ಅಧಿವೇಶನವನ್ನು ಉದ್ದೇಶಿಸಿ ಸರ್ಕಾರದ ಭಾಷಣ ಓದದ ರಾಜ್ಯಪಾಲರ ಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಖಂಡಿಸಿದ್ದಾರೆ.
ಅಲ್ಲದೆ ರಾಜ್ಯಪಾಲರ ವಿರುದ್ಧ ನಿರ್ಣಯ ಕೈಗೊಳ್ಳುವ ಮತ್ತು ಈ ಸಂಬಂಧ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ರಾಜ್ಯಪಾಲರ ಈ ನಡೆಯು ಒಕ್ಕೂಟ ವ್ಯವಸ್ಥೆಗೆ ಮಾರಕ ಎಂದು ಅವರು ಹೇಳಿದ್ದಾರೆ.
ಈ ಮಧ್ಯೆ ರಾಜ್ಯಪಾಲರು ಸರ್ಕಾರದ ಚೌಕಟ್ಟಲ್ಲೇ ಕೆಲಸ ಮಾಡಿದ್ದು, ಒಕ್ಕೂಟ ವ್ಯವಸ್ಥೆಯ ಘನತೆ ಎತ್ತಿ ಹಿಡಿದಿದ್ದಾರೆ ಎಂದು ಸಿ.ಟಿ ರವಿ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.