ADVERTISEMENT

ಬಸವ ಚಳವಳಿ ಸೋಲಲ್ಲ, ನಿರಂತರವಾಗಿರಲಿದೆ: ಜಯಮೃತ್ಯುಂಜಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2025, 7:49 IST
Last Updated 5 ಅಕ್ಟೋಬರ್ 2025, 7:49 IST
<div class="paragraphs"><p>ಬಸವಣ್ಣನ ಪ್ರತಿಮೆಗೆ&nbsp;ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು&nbsp;ಪುಷ್ಪಾರ್ಚನೆ ಮಾಡಿದರು</p></div>

ಬಸವಣ್ಣನ ಪ್ರತಿಮೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುಷ್ಪಾರ್ಚನೆ ಮಾಡಿದರು

   

ಬೆಂಗಳೂರು: ಬಸವ ಚಳವಳಿ ಸೋಲಲ್ಲ, ನಿರಂತರವಾಗಿರಲಿದೆ ಎಂದು ಕೂಡಲಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ನಗರದ ಅರಮನೆ ಮೈದಾನದಲ್ಲಿ ನಡಯುತ್ತಿರುವ ಬಸವ ಸಂಸ್ಕೃತಿ ಅಭಿಯಾನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ಬೆಂಗಳೂರಿನ ನಮ್ಮ ಮೆಟ್ರೊಗೆ ಬಸವಣ್ಣನ ಹೆಸರಿಡಬೇಕು’ ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ADVERTISEMENT

ವಿಶ್ವಗುರು ಬಸವಣ್ಣ ಅವರನ್ನು ‘ಕರ್ನಾಟಕ ಸಾಂಸ್ಕೃತಿಕ ನಾಯಕ’ ಎಂದು ಘೋಷಿಸಿದ ವರ್ಷಾಚರಣೆ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ‘ಬಸವ ಸಂಸ್ಕೃತಿ ಅಭಿಯಾನ-2025’ರ ಸಮಾರೋಪ ಸಮಾರಂಭದಲ್ಲಿ ಶರಣ ಸಂಸ್ಕೃತಿಯ 301 ಶರಣರು, ಗುರುಗಳು, ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಲಾಯಿತು.

ಸಿದ್ದರಾಮಯ್ಯರ ಶರಣ ಸಂಸ್ಕೃತಿ ಬಗೆಗಿನ ಬದ್ಧತೆ ಶ್ಲಾಘನೀಯ ಎಂದು ಲಿಂಗಾಯತ ಧರ್ಮ ಚಳವಳಿಯ ಪ್ರಮುಖರು ಕೊಂಡಾಡಿದರು.

ಭಾಲ್ಕಿ ಬಸವಲಿಂಗ ಪಟ್ಟದ್ದೇವರು ಸ್ವಾಮೀಜಿ ಮಾತನಾಡಿ, ‘ಬಸವಕಲ್ಯಾಣದಲ್ಲಿ ವಚನ ವಿಶ್ವವಿದ್ಯಾಲಯವನ್ನು ಆರಂಭಿಸಬೇಕು’ ಎಂದು ಹೇಳಿದರು.

ಈಗಾಗಲೇ ಮುಂದಿನ ಬಜೆಟ್‌ನಲ್ಲಿ ವಚನ ವಿಶ್ವವಿದ್ಯಾಲಯ ಘೋಷಿಸುವುದಾಗಿ ಸಿದ್ದರಾಮಯ್ಯ ಅವರು ಹೇಳಿದ್ದರು. ಮುಂದಿನ ವರ್ಷ ಇದನ್ನು ಈಡೇರಿಸಬೇಕು ಎಂದು ಪಟ್ಟದ್ದೇವರು ಮನವಿ ಮಾಡಿದರು.

ಲಿಂಗಾಯಿತ ಧರ್ಮ ಜಾರಿ ಸೇರಿದಂತೆ ಐದು ನಿರ್ಣಯಗಳನ್ನು ಬಸವ ಸಂಸ್ಕೃತಿ ಅಭಿಯಾನ ಸಮಾರೋಪ ಸಮಾರಂಭದಲ್ಲಿ ಕೈಗೊಳ್ಳಲಾಯಿತು.

• ಲಿಂಗಾಯತರೆಲ್ಲರೂ ಮೊದಲು ಭಾರತೀಯರು. ಲಿಂಗಾಯತ ಧರ್ಮ ಕನ್ನಡದ ಧರ್ಮ. ಧರ್ಮಕ್ಕಿಂತ ದೇಶ ಮೊದಲು. ರಾಷ್ಟ್ರಪ್ರಜ್ಞೆಯೊಂದಿಗೆ ದೇಶದ ಐಕ್ಯತೆಗೆ ಸದಾ ಶ್ರಮಿಸುವುದು.

• 12ನೇ ಶತಮಾನದಲ್ಲಿ ಮಹಾತ್ಮ ಬಸವೇಶ್ವರರು ಹಾಗೂ ಬಸವಾದಿ ಶರಣರು ಸೇರಿ ಸ್ಥಾಪಿಸಿದ ಶ್ರೇಷ್ಠ ಧರ್ಮ ಲಿಂಗಾಯತ ಧರ್ಮ. ಭೌಗೋಳಿಕವಾಗಿ ನಾವೆಲ್ಲ ಹಿಂದೂಗಳೇ. ಬೌದ್ಧ, ಜೈನ, ಶಿಖ್ ಧರ್ಮಗಳಂತೆ ಲಿಂಗಾಯತರಿಗೆ ಸರಕಾರಿ ಸವಲತ್ತುಗಳು, ಮೀಸಲಾತಿ ಸೌಲಭ್ಯ ದೊರೆಯಲು ಧರ್ಮ ಮಾನ್ಯತೆಗೆ ನಿರಂತರ ಜಾಗೃತಿ ಮುಂದುವರೆಸುವುದು.

• ಸಮಾನತೆ, ಸಹೋದರತೆ, ಮಾನವೀಯ ಮೌಲ್ಯಗಳ ನಿಜಧರ್ಮ ಲಿಂಗಾಯತ ಧರ್ಮ. ಲಿಂಗಾಯತರಲ್ಲಿನ ಸಣ್ಣ, ಹಿಂದುಳಿದ ಉಪಪಂಗಡಗಳನ್ನು ನಾವೆಲ್ಲರೂ ಅಪ್ಪಿಕೊಂಡು, ಅವರ ಅಭುದ್ಯಯಕ್ಕಾಗಿ ಶ್ರಮಿಸುತ್ತಾ, ಎಲ್ಲ ಒಳಪಂಗಡಗಳ ಭೇದ ತೊರೆದು, ಉಪಜಾತಿಗಳ ಮಧ್ಯೆ ವೈವಾಹಿಕ ಸಂಬಂಧ ಬೆಳೆಸಬೇಕು.

• ಲಿಂಗಾಯತರೆಲ್ಲರೂ ನಮ್ಮ ಅರಿವಿನ ಕುರುಹು, ಅಸ್ಮಿತೆ ಇಷ್ಟಲಿಂಗವನ್ನು ಪ್ರತಿಯೊಬ್ಬರೂ ಧಾರಣೆ ಮಾಡುವುದು.

• ಲಿಂಗಾಯತ ಧರ್ಮೀಯರು ತಮ್ಮ ಮನೆಗಳಲ್ಲಿ ಜನನದಿಂದ-ಮರಣದವರೆಗೆ ಶರಣ ಸಂಸ್ಕೃತಿ ಆಚರಣೆಗಳನ್ನು ಸದಾ ಅನುಸರಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.