ADVERTISEMENT

ಸ್ಮಾರ್ಟ್ ಮೀಟರ್‌ಗೆ ಸಹಾಯಧನ ಖೋತಾ: ಕೇಂದ್ರದ ಒಪ್ಪಿಗೆ ಪಡೆಯದೆ RDSS ಯೋಜನೆ ಜಾರಿ

ಕೇಂದ್ರದ ಆರ್‌ಡಿಎಸ್‌ಎಸ್‌ ಯೋಜನೆ ಅಡಿ ಒಪ್ಪಿಗೆ ಪಡೆಯದೆ ಜಾರಿ

ಜಯಸಿಂಹ ಆರ್.
Published 10 ಏಪ್ರಿಲ್ 2025, 23:30 IST
Last Updated 10 ಏಪ್ರಿಲ್ 2025, 23:30 IST
<div class="paragraphs"><p>ಬೆಸ್ಕಾಂ ಸಿಬ್ಬಂದಿಯೊಬ್ಬರು ಡಿಜಿಟಲ್‌ ಮೀಟರ್‌ ಅಳವಡಿಸುತ್ತಿರುವ ದೃಶ್ಯ</p></div>

ಬೆಸ್ಕಾಂ ಸಿಬ್ಬಂದಿಯೊಬ್ಬರು ಡಿಜಿಟಲ್‌ ಮೀಟರ್‌ ಅಳವಡಿಸುತ್ತಿರುವ ದೃಶ್ಯ

   

ಬೆಂಗಳೂರು: ಕೇಂದ್ರ ಸರ್ಕಾರದ ಅನುಮೋದನೆ ಪಡೆಯದೇ ಸ್ಮಾರ್ಟ್ ಮೀಟರ್‌ ಅಳವಡಿಕೆಗೆ ರಾಜ್ಯ ಸರ್ಕಾರ ಮುಂದಾಗಿದ್ದರಿಂದಾಗಿ, ಕೇಂದ್ರದ ಸಹಾಯಧನ ಖೋತಾ ಆಗಿದೆ. ಮೀಟರ್‌ ಬೆಲೆಯ ಸಂಪೂರ್ಣ ಹೊರೆ ಗ್ರಾಹಕರ ಮೇಲೆ ಬಿದ್ದಿದೆ.

ವಿದ್ಯುತ್ ಸೋರಿಕೆ ಶೂನ್ಯವಾಗಿಸುವ ಮತ್ತು ನಷ್ಟವನ್ನು ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಇಂಧನ ಸಚಿವಾಲಯವು 2021–22ರಲ್ಲಿ ಸ್ಮಾರ್ಟ್‌ ಮೀಟರ್‌ ಅಳವಡಿಕೆ ಯೋಜನೆ ಜಾರಿಗೆ ತಂದಿತ್ತು. ಇದನ್ನು ‘ರೀ–ಮ್ಯಾಪ್ಡ್‌ ಡಿಸ್ಟ್ರಿಬ್ಯೂಷನ್‌ ಸೆಕ್ಟರ್‌ ಸ್ಕೀಂ–ಆರ್‌ಡಿಎಸ್‌ಎಸ್‌’ ಎಂದು ಕರೆಯಲಾಗಿತ್ತು.

ADVERTISEMENT

ಆರ್‌ಡಿಎಸ್‌ಎಸ್‌ ಯೋಜನೆಯಂತೆ ದೇಶದ ಎಲ್ಲ ರಾಜ್ಯಗಳಲ್ಲಿ, ಎಲ್ಲ ಸ್ವರೂಪದ ವಿದ್ಯುತ್ ಸಂಪರ್ಕಗಳಿಗೆ ಸ್ಮಾರ್ಟ್‌ ಮೀಟರ್‌ ಅಳವಡಿಕೆ ಕಡ್ಡಾಯ ಮಾಡಿತ್ತು. ಯೋಜನೆ ಜಾರಿ ಸಂಬಂಧ ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕಿತ್ತು. ಕರ್ನಾಟಕ ಸರ್ಕಾರವೂ 2022ರಲ್ಲಿ ಈ ಸಂಬಂಧ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಆದರೆ, ತಾಂತ್ರಿಕ ಕಾರಣವೊಡ್ಡಿದ್ದ ಕೇಂದ್ರವು, ಪ್ರಸ್ತಾವಕ್ಕೆ ಒಪ್ಪಿಗೆ ನೀಡಿರಲಿಲ್ಲ.

2025ರಲ್ಲೂ ರಾಜ್ಯಕ್ಕೆ ಅಂತಹ ಅನುಮೋದನೆ ಸಿಕ್ಕಿಲ್ಲ ಎಂಬುದನ್ನು ಕೇಂದ್ರ ಸರ್ಕಾರವೇ ದೃಢಪಡಿಸಿದೆ. ಈ ಯೋಜನೆ ಸಂಬಂಧ ಲೋಕಸಭೆಯಲ್ಲಿ ಈಚೆಗೆ ಕೇಂದ್ರ  ವಿದ್ಯುತ್ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಶ್ರೀಪಾದ ನಾಯಕ್‌, ‘ಯೋಜನೆ ಅಡಿ ಸೂಚಿಸಲಾಗಿದ್ದ ಷರತ್ತುಗಳನ್ನು ಪೂರೈಸದ ಕಾರಣಕ್ಕೆ, ಕರ್ನಾಟಕಕ್ಕೆ ಅನುಮೋದನೆ ಸಿಕ್ಕಿಲ್ಲ’ ಎಂದು ಮಾಹಿತಿ ನೀಡಿದ್ದಾರೆ. 

ಈ ಯೋಜನೆ ಅಡಿಯಲ್ಲಿ ಅಳವಡಿಸಲಾಗುವ ಪ್ರತಿ ಸ್ಮಾರ್ಟ್‌ ಮೀಟರ್‌ಗೆ ಕೇಂದ್ರವು ₹900 ಸಹಾಯಧನ ನೀಡುತ್ತದೆ. ಕೇಂದ್ರದ ಒಪ್ಪಿಗೆ ಪಡೆದು ಯೋಜನೆ ಅನುಷ್ಠಾನಕ್ಕೆ ತಂದಿರುವ ರಾಜ್ಯಗಳಲ್ಲಿ ಈ ಸಹಾಯಧನ ಸಿಗುತ್ತಿದೆ. ಆದರೆ ನಮ್ಮ ರಾಜ್ಯದ ಗ್ರಾಹಕರಿಗೆ ಈ ಸಹಾಯಧನ ಸಿಗುತ್ತಿಲ್ಲ.

ಕೇಂದ್ರದ ಅನುಮೋದನೆ ಇಲ್ಲದಿದ್ದರೂ ಸ್ಮಾರ್ಟ್‌ ಮೀಟರ್ ಅಳವಡಿಕೆ ಸಂಬಂಧ ರಾಜ್ಯದ ಎಸ್ಕಾಂಗಳು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಪ್ರಸ್ತಾವ ಬರೆದಿದ್ದವು. ಈ ಪ್ರಸ್ತಾವಕ್ಕೆ ಕೆಇಆರ್‌ಸಿ ಆಕ್ಷೇಪ ವ್ಯಕ್ತಪಡಿಸಿತ್ತು. 2024ನೇ ಸಾಲಿನ ದರ ಪರಿಷ್ಕರಣೆ ಆದೇಶದಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದ ಕೆಇಆರ್‌ಸಿ, ‘ಆರ್‌ಡಿಎಸ್‌ಎಸ್‌ ಅಡಿಯಲ್ಲಿ ಸ್ಮಾರ್ಟ್‌ ಮೀಟರ್‌ ಅಳವಡಿಕೆಗೆ ಕೇಂದ್ರ ಸರ್ಕಾರವು ಒಪ್ಪಿಗೆ ಸೂಚಿಸಿಲ್ಲ. ಇದನ್ನು ಈಗಾಗಲೆ ತಿಳಿಸಿದ್ದರೂ, ಎಸ್ಕಾಂಗಳು ಮತ್ತೆ–ಮತ್ತೆ ಪ್ರಸ್ತಾವ ಸಲ್ಲಿಸಿವೆ’ ಎಂದು ಉಲ್ಲೇಖಿಸಿತ್ತು. 

ಹೀಗೆ ಆಕ್ಷೇಪ ವ್ಯಕ್ತಪಡಿಸಿದ್ದ ಕೆಇಆರ್‌ಸಿಯೇ, ನಂತರದ ಕೆಲವೇ ದಿನಗಳಲ್ಲಿ ಸ್ಮಾರ್ಟ್ ಮೀಟರ್‌ ಅಳವಡಿಕೆಗೆ ಒಪ್ಪಿಗೆ ನೀಡಿತ್ತು. ಅದರ ಬೆನ್ನಲ್ಲೇ ರಾಜ್ಯ ಸರ್ಕಾರವೂ ಅಧಿಸೂಚನೆ ಹೊರಡಿಸಿ, ಸ್ಮಾರ್ಟ್‌ ಮೀಟರ್‌ ಅಳವಡಿಕೆಗೆ ಕ್ರಮ ತೆಗೆದುಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.