ADVERTISEMENT

ಕೈಗೆ ಸಿಗದ ಸಚಿವರಿಗೆ ಬುದ್ದಿ ಹೇಳಿ: ಮುಖ್ಯಮಂತ್ರಿ ಮುಂದೆ ಶಾಸಕರ ಅಹವಾಲು

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2025, 23:30 IST
Last Updated 10 ಮಾರ್ಚ್ 2025, 23:30 IST
<div class="paragraphs"><p>ಸಿದ್ದರಾಮಯ್ಯ</p></div>

ಸಿದ್ದರಾಮಯ್ಯ

   

ಬೆಂಗಳೂರು: ‘ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ತುಂಬಿದರೂ ಸಚಿವರು ಕೈಗೆ ಸಿಗುತ್ತಿಲ್ಲ. ಅವರಿಗೆ ಸ್ವಲ್ಪ ಬುದ್ದಿ ಹೇಳಿ’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೆಲವು ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಅಲವತ್ತುಕೊಂಡಿದ್ದಾರೆ.

ನಗರದ ರ‍್ಯಾಡಿಸನ್‌ ಬ್ಲ್ಯೂ ಹೋಟೆಲ್‌ನಲ್ಲಿ ಸೋಮವಾರ ರಾತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಸಚಿವರ ಕಾರ್ಯವೈಖರಿಯ ಬಗ್ಗೆ ಸಭೆಯಲ್ಲಿ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಉಪ ನೋಂದಣಾಧಿಕಾರಿ ಮತ್ತು ಪಿಡಿಒಗಳನ್ನು ಕೌನ್ಸೆಲಿಂಗ್‌ ಮೂಲಕ ವರ್ಗಾವಣೆ ಮಾಡುತ್ತಿರುವುದಕ್ಕೂ ಆಕ್ಷೇಪ ವ್ಯಕ್ತಪಡಿಸಿದರು ಎಂದು ಗೊತ್ತಾಗಿದೆ.

ADVERTISEMENT

ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮುಸ್ಲಿಂ ಬಜೆಟ್‌ ಎಂದು ಬಿಜೆಪಿ, ಜೆಡಿಎಸ್‌ನವರು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಎಸ್‌ಸಿಎಸ್‌ಪಿ, ಟಿಎಸ್‌ಪಿ ಕಾಯ್ದೆಯಡಿ ಪರಿಶಿಷ್ಟರ ಕಲ್ಯಾಣಕ್ಕೆ ಮಾತ್ರ ಅನುದಾನ ನೀಡಲಾಗಿದೆ ಎಂಬ ಆರೋಪವೂ ಸರಿಯಲ್ಲ. ಜೈನ ಸಮುದಾಯವೂ ಸೇರಿದಂತೆ ಎಲ್ಲ ಸಮುದಾಯಗಳಿಗೂ ಅನುದಾನ ನೀಡಲಾಗಿದೆ. ಬಜೆಟ್‌ ಗಾತ್ರವೂ ದೊಡ್ಡದಾಗಿದೆ. ಯಾರೂ ಭಯ ಪಡುವ ಅಗತ್ಯ ಇಲ್ಲ. ಶಾಸಕರಿಗೆ ₹ 8 ಸಾವಿರ ಕೋಟಿ ವಿಶೇಷ ಅನುದಾನವಿದೆ. ಅಧಿವೇಶನ ಮುಗಿದ ತಕ್ಷಣ ಆ ಅನುದಾನ ಬಿಡುಗಡೆ ಮಾಡುತ್ತೇನೆ’ ಎಂದು ಭರವಸೆ ನೀಡಿದರು ಎಂದು ಗೊತ್ತಾಗಿದೆ. 

‘ಗ್ಯಾರಂಟಿ ಯೋಜನೆಗಳು ಮತ್ತು 7ನೇ ವೇತನ ಆಯೋಗ ಅನುಷ್ಠಾನಕ್ಕೆ ₹70 ಸಾವಿರ ಕೋಟಿ ಬೇಕಾಗುತ್ತದೆ. ಬಜೆಟ್‌ನಲ್ಲಿ ಎಲ್ಲ ಕ್ಷೇತ್ರಗಳ ಹೆಸರನ್ನೂ ಹೇಳಲಾಗುವುದಿಲ್ಲ. ಯಾವ ಶಾಸಕರೂ ಆತಂಕ ಪಡುವುದು ಬೇಡ. ಏಪ್ರಿಲ್ ಬಳಿಕ ಎಲ್ಲರಿಗೂ ಅನುದಾನ ಸಿಗಲಿದೆ’ ಎಂದು ಸಿದ್ದರಾಮಯ್ಯ ಅವರು ಶಾಸಕರನ್ನು ಸಮಾಧಾನ ಪಡಿಸಿದರು..

‘ಕ್ಷೇತ್ರ ಮರು ವಿಂಗಡಣೆಗೆ ಸಂಬಂಧಿಸಿದಂತೆ ಇದೇ 28ರಂದು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ ಅವರು ಸಭೆ ಕರೆದಿದ್ದಾರೆ. ಆ ಸಭೆಯಲ್ಲಿ ನಾನು ಮತ್ತು ಉಪ ಮುಖ್ಯಮಂತ್ರಿ ಭಾಗವಹಿಸಲಿದ್ದೇವೆ’ ಎಂದೂ ಮುಖ್ಯಮಂತ್ರಿ ಹೇಳಿದರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೇರಿದಂತೆ ಸಚಿವರು, ಶಾಸಕರು, ವಿಧಾನ ಪರಿಷತ್‌ ಸದಸ್ಯರು ಸಭೆಯಲ್ಲಿ ಭಾಗಿಯಾದರು.

ಮೇ 20ರಂದು ಸರ್ಕಾರದ ಸಂಭ್ರಮಾಚರಣೆ

‘ರಾಜ್ಯ ಸರ್ಕಾರಕ್ಕೆ ಎರಡು ವರ್ಷ ತುಂಬಿದ ಸಂಭ್ರಮವನ್ನು ಮೇ 20ರಂದು ಆಚರಿಸಲು ನಿರ್ಧರಿಸಿ
ದ್ದೇವೆ’ ಎಂದು ಸಿದ್ದರಾಮಯ್ಯ ಅವರು ಸಭೆಯಲ್ಲಿ ತಿಳಿಸಿದ್ದಾಗಿ ಗೊತ್ತಾಗಿದೆ.

‘ಅಧಿವೇಶನ ಮುಗಿದ ಬಳಿಕ ಎಲ್ಲ ಸಚಿವರು ತಮ್ಮ ಜಿಲ್ಲೆಗಳಲ್ಲಿ ಪ್ರವಾಸ ಮಾಡಬೇಕು. ಶಾಸಕರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು’ ಎಂದು ಮುಖ್ಯಮಂತ್ರಿ ಕಿವಿಮಾತು ಹೇಳಿದರು ಎಂದು ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.