ADVERTISEMENT

ಲೇಖಕನನ್ನು ದೇಶದ್ರೋಹಿ ಎನ್ನುವುದು ಸಲ್ಲ: ಸರ್ಕಾರಕ್ಕೆ ಲೇಖಕರ ಪತ್ರ

​ಪ್ರಜಾವಾಣಿ ವಾರ್ತೆ
Published 25 ಜನವರಿ 2025, 16:05 IST
Last Updated 25 ಜನವರಿ 2025, 16:05 IST
ಎಸ್‌.ಜಿ.ಸಿದ್ದರಾಮಯ್ಯ
ಎಸ್‌.ಜಿ.ಸಿದ್ದರಾಮಯ್ಯ   

ಬೆಂಗಳೂರು: ‘ರಾಮಲಿಂಗಪ್ಪ ಟಿ. ಬೇಗೂರು ಅವರ ‘ರಾಷ್ಟ್ರೀಯತೆಯ ಆಚರಣೆಯ ಸುತ್ತ’ ಲೇಖನವನ್ನು ವಿರೋಧಿಸುತ್ತ, ಅವರನ್ನು ‘ನಗರ ನಕ್ಸಲ’ ಮತ್ತು ‘ದೇಶದ್ರೋಹಿ’ ಎಂದು ಕೆಲವರು ಕರೆದಿರುವುದು ಖಂಡನಾರ್ಹ. ಹಾಗೆ ಕರೆದ ಕೋಮುವಾದಿಗಳಿಂದ ಲೇಖಕರಿಗೆ ರಕ್ಷಣೆ ನೀಡಬೇಕು’ ಎಂದು ರಾಜ್ಯದ ಹಲವು ಲೇಖಕರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಜಿ.ರಾಮಕೃಷ್ಣ, ಕೆ.ಮರುಳಸಿದ್ದಪ್ಪ, ಎಸ್‌.ಜಿ.ಸಿದ್ದರಾಮಯ್ಯ, ರಾಜೇಂದ್ರ ಚೆನ್ನಿ ಮೊದಲಾದವರು ಈ ಸಂಬಂಧ ಬಹಿರಂಗ ಪತ್ರ ಬರೆದಿದ್ದಾರೆ. ‘ಕರ್ನಾಟಕ ವಿಶ್ವವಿದ್ಯಾಲಯದ ಪಠ್ಯ ಪುಸ್ತಕದಲ್ಲಿ ರಾಮಲಿಂಗಪ್ಪ ಅವರ ಲೇಖನ ಸೇರಿಸಿರುವುದನ್ನು ವಿರೋಧಿಸಿ ಈಚೆಗೆ ಬಿಜೆಪಿ ಮತ್ತು ಎಬಿವಿಪಿಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪ್ರತಿಭಟನಕಾರರು ಮತ್ತು ಕೆಲ ಮಾಧ್ಯಮಗಳ ವರದಿಗಾರರು–ನಿರೂಪಕರು ಲೇಖಕರನ್ನು ದೇಶದ್ರೋಹಿ ಎಂದಿದ್ದಾರೆ. ಲೇಖಕರ ವಿಚಾರವನ್ನು ವಿರೋಧಿಸುವ ಬದಲು ಲೇಖಕರನ್ನು, ಪುಸ್ತಕದ ಸಂಪಾದಕರನ್ನು ಅವಮಾನಿಸುವುದು ಸಲ್ಲ’ ಎಂದಿದ್ದಾರೆ.

‘ಯಾವುದೇ ಲೇಖಕರ ಅಭಿಪ್ರಾಯ ಬೇರೆ ಬೇರೆ ರೀತಿಯ ಚರ್ಚೆಗಳಿಗೆ ದಾರಿ ಮಾಡಿಕೊಟ್ಟಲ್ಲಿ ಅಂಥದ್ದನ್ನು ವಿರೋಧಿಸಿ ಪ್ರತಿವಾದ ಹೂಡಲಿ. ಸಾರ್ವಜನಿಕವಾಗಿ ಸೌಹಾರ್ದಯುತವಾಗಿ ಚರ್ಚೆ ಮಾಡಲಿ. ಆದರೆ ಇದಕ್ಕೆ ಬಂದಿರುವ ಮಾಧ್ಯಮ ಪ್ರತಿಕ್ರಿಯೆಗಳನ್ನು ನೋಡಿದಾಗ ಅಲ್ಲಿ ಲೇಖಕರ ಮಾನಹರಣ ಮತ್ತು ತೇಜೋವಧೆ ಎದ್ದು ಕಾಣುತ್ತದೆ. ಪಕ್ಷ ರಾಜಕೀಯಕ್ಕೆ ವಿದ್ವತ್‌ ಬರಹವನ್ನು ಸೀಮಿತ ಮಾಡುವ ಮತ್ತು ಮತ ಬ್ಯಾಂಕ್‌ ರಾಜಕಾರಣ ಮಾಡುವ ಹುನ್ನಾರ ಕಾಣುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಲೇಖಕರನ್ನು ದೇಶ ಬಿಟ್ಟು ತೊಲಗಿಸಿ ಎಂದು ಬೆದರಿಸುವುದು ಕಾನೂನು ಬಾಹಿರ ಮತ್ತು ಅವರ ಮನೋಸ್ಥೈರ್ಯ ಕುಂದಿಸುವ ಕೃತ್ಯ. ನಿರ್ದಿಷ್ಟ ಕೋಮು ಮತ್ತು ಗುಂಪಿನವರ ಸಿದ್ಧಾಂತಕ್ಕೆ ಅನುಗುಣವಾಗಿಯೇ ಬರೆಯಿರಿ ಮತ್ತು ಬದುಕಿರಿ ಎಂದು ಫರ್ಮಾನು ಹೊರಡಿಸುವುದು ಸಂವಿಧಾನ ವಿರೋಧಿಯೂ ಹೌದು. ಇದರ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.

ಸಿದ್ದನಗೌಡ ಪಾಟೀಲ, ಕಾಳೇಗೌಡ ನಾಗವಾರ, ಎಲ್‌.ಹನುಮಂತಯ್ಯ. ಬಂಜಗೆರೆ ಜಯಪ್ರಕಾಶ, ಅಗ್ರಹಾರ ಕೃಷ್ಣಮೂರ್ತಿ, ನಟರಾಜ ಬೂದಾಳು ಪತ್ರಕ್ಕೆ ಸಹಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.