ADVERTISEMENT

ಮುಡಾ ಪ್ರಕರಣ | ಅರ್ಜಿಗಳ ವಿಚಾರಣೆ ಮುಕ್ತಾಯ: ಇದೇ 15ಕ್ಕೆ ಆದೇಶ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2025, 23:30 IST
Last Updated 9 ಏಪ್ರಿಲ್ 2025, 23:30 IST
ಮುಡಾ ಕಚೇರಿ
ಮುಡಾ ಕಚೇರಿ   

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನಗಳ ಅಕ್ರಮ ಹಂಚಿಕೆ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಲೋಕಾಯುಕ್ತ ಸಂಸ್ಥೆಯು ಸಕ್ಷಮ ನ್ಯಾಯಾಲಯಕ್ಕೆ ‘ಬಿ’ ಅಂತಿಮ ವರದಿ ಸಲ್ಲಿಸಿರುವುದನ್ನು ವಿರೋಧಿಸಿ ಜಾರಿ ನಿರ್ದೇಶನಾಲಯ (ಇ.ಡಿ) ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದ ಆದೇಶವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕಾಯ್ದಿರಿಸಿದೆ.

‘ಇ.ಡಿ ಇಂತಹ ವಿರೋಧದ ಅರ್ಜಿ ಸಲ್ಲಿಸಲು ಕಾನೂನು ವ್ಯಾಪ್ತಿಯಲ್ಲಿ ಅವಕಾಶ ಇದೆಯೊ ಇಲ್ಲವೊ’ ಎಂಬ ಬಗೆಗಿನ ವಿಚಾರಣೆಯನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ಬುಧವಾರ ಪೂರ್ಣಗೊಳಿಸಿದರು. ಅರ್ಜಿ ಮೇಲಿನ ಆದೇಶವನ್ನು ಇದೇ 15ಕ್ಕೆ ಪ್ರಕಟಿಸುವುದಾಗಿ ತಿಳಿಸಿದರು.

ಇದೇ ವೇಳೆ ಸ್ವತಃ ವಾದ ಮಂಡಿಸಿದ ದೂರುದಾರ ಸ್ನೇಹಮಯಿ ಕೃಷ್ಣ, ‘ಈ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಡಿನೋಟಿಫಿಕೇಷನ್ ಮಾಡಿರುವುದು ಸರಿ ಇದೆ ಎಂದು ಹೇಳುತ್ತಿದ್ದರೆ, ಇ.ಡಿ ಕಾನೂನು ಬಾಹಿರ ಎನ್ನುತ್ತಿದೆ. ತನಿಖಾ ಸಂಸ್ಥೆ ಸರಿಯಾಗಿ ಕೆಲಸ‌ ಮಾಡಿದ್ದರೆ ನಮ್ಮಂಥವರು ಹೋರಾಟ ಮಾಡುವ ಅಗತ್ಯವೇ ಬರುತ್ತಿರಲಿಲ್ಲ. ಆದ್ದರಿಂದ, ನ್ಯಾಯಾಲಯದ ದಾರಿ ತಪ್ಪಿಸುವ ಕೆಲಸ ಮಾಡಿರುವ ಲೋಕಾಯುಕ್ತ ತನಿಖಾ ಅಧಿಕಾರಿಯ ವಿರುದ್ಧ ಕ್ರಮಕ್ಕೆ ಆದೇಶಿಸಬೇಕು’ ಎಂದು ಮನವಿ ಮಾಡಿದರು.

ADVERTISEMENT

ವಾದ–ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಸ್ನೇಹಮಯಿ ಕೃಷ್ಣ ಅವರ ವಿರೋಧದ ಅರ್ಜಿಯ ಮೇಲಿನ ಆದೇಶವೂ ಸೇರಿದಂತೆ ಇ.ಡಿ ಅರ್ಜಿಯ ಮೇಲಿನ ಆದೇಶವನ್ನು ಒಟ್ಟಿಗೇ ಇದೇ 15ರಂದು ಪ್ರಕಟಿಸುವುದಾಗಿ ತಿಳಿಸಿದರು. ಇ.ಡಿ ಪರ ಮಧುಕರ ಕೆ.ದೇಶಪಾಂಡೆ ಮತ್ತು ಲೋಕಾಯುಕ್ತ ಪರ ವೆಂಕಟೇಶ ಅರಬಟ್ಟಿ ವಾದ ಮಂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.